ADVERTISEMENT

ಗುಮ್ಮಗೋಳ: ನನಸಾಗುವುದೇ ನಿರಾಶ್ರಿತರ ಸೂರಿನ ಕನಸು?

ಕಾಶಿನಾಥ ಬಿಳಿಮಗ್ಗದ
Published 4 ಸೆಪ್ಟೆಂಬರ್ 2025, 5:46 IST
Last Updated 4 ಸೆಪ್ಟೆಂಬರ್ 2025, 5:46 IST
ಮುಂಡರಗಿ ತಾಲ್ಲೂಕಿನ ಹೊಸಗುಮ್ಮಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಹಲವು ವರ್ಷಗಳಿಂದ ವಾಸಿಸಲು ಮನೆಗಳಿಲ್ಲದ ಕಾರಣ ಆಶ್ರಯ ಪಡೆದಿರುವ ನಿರಾಶ್ರಿತ ಕುಟುಂಬಗಳು
ಮುಂಡರಗಿ ತಾಲ್ಲೂಕಿನ ಹೊಸಗುಮ್ಮಗೋಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಹಲವು ವರ್ಷಗಳಿಂದ ವಾಸಿಸಲು ಮನೆಗಳಿಲ್ಲದ ಕಾರಣ ಆಶ್ರಯ ಪಡೆದಿರುವ ನಿರಾಶ್ರಿತ ಕುಟುಂಬಗಳು   

ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ತಾಲ್ಲೂಕಿನ ಗುಮ್ಮಗೋಳ ಗ್ರಾಮ ಮುಳುಗಡೆಯಾಗಲಿದ್ದು, ಗ್ರಾಮದ ಸ್ಥಳಾಂತರಕ್ಕೆ ಸರ್ಕಾರ ಈವರೆಗೂ ಅಗತ್ಯ ಕ್ರಮ ಕೈಗೊಳ್ಳದಿರುವುದರಿಂದ ಗುಮ್ಮಗೋಳ ಗ್ರಾಮಸ್ಥರು ಅತಂತ್ರರಾಗಿದ್ದಾರೆ.

ಹಮ್ಮಿಗಿ ಗ್ರಾಮದ ಬ್ಯಾರೇಜ್‌ನಲ್ಲಿ ಪ್ರತಿವರ್ಷ ಗರಿಷ್ಟ 3 ಟಿಎಂಸಿ ಅಡಿ ನೀರು ಸಂಗ್ರಹಿಸಿಕೊಳ್ಳಬಹುದಾಗಿದೆ. ಆದರೆ, ಗುಮ್ಮಗೋಳ ಗ್ರಾಮವನ್ನು ಸಮರ್ಪಕವಾಗಿ ಸ್ಥಳಾಂತರಿಸದೆ ಇರುವುದರಿಂದ 3 ಟಿಎಂಸಿ ಅಡಿ ಬದಲಾಗಿ ಪ್ರತಿವರ್ಷ ಕೇವಲ 1.9 ಟಿಎಂಸಿ ಅಡಿ ನೀರನ್ನಷ್ಟೇ ಬಳಸಿಕೊಳ್ಳಬೇಕಾಗಿದೆ. ಗುಮ್ಮಗೋಳ ಗ್ರಾಮ ಸ್ಥಳಾಂತರಗೊಂಡರೆ ನಮ್ಮ ಪಾಲಿನ ಸಂಪೂರ್ಣ ನೀರನ್ನು ಬಳಸಿಕೊಳ್ಳಬಹುದಾಗಿದೆ.

ಮುಳುಗಡೆಯಾಗಲಿರುವ ಗುಮ್ಮಗೋಳ ಗ್ರಾಮದ ಜನತೆಗೆ ಮನೆಗಳನ್ನು ನಿರ್ಮಿಸಿಕೊಳ್ಳಲು ದಶಕದ ಹಿಂದೆ ಸೂಕ್ತ ನಿವೇಶನ ಹಾಗೂ ಮನೆ ಕಟ್ಟಿಕೊಳ್ಳಲು ಹಣ ನೀಡಿತ್ತು. ಮನೆ ನಿರ್ಮಿಸಿಕೊಳ್ಳಲು ಸರ್ಕಾರ ನೀಡಿರುವ ಹಣ ಅನ್ಯಕಾರ್ಯಗಳಿಗೆ ಖರ್ಚಾಗಿ ಹೋಗಿದ್ದು, ಸರ್ಕಾರವೇ ಗ್ರಾಮಸ್ಥರಿಗೆ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಗ್ರಾಮಸ್ಥರು ಬೇಡಿಕೆಯಿಟ್ಟರು.

ADVERTISEMENT

ಸರ್ಕಾರ ಹಾಗೂ ಗ್ರಾಮಸ್ಥರ ನಡುವೆ ಹಲವು ವರ್ಷಗಳಿಂದ ಈ ಕುರಿತು ಹಗ್ಗ ಜಗ್ಗಾಟ ಮುಂದುವರಿದಿದೆ. ಅಂದು ಹಳೆಗ್ರಾಮ ತೊರೆದು ಹೊಸಗ್ರಾಮಕ್ಕೆ ತೆರಳಿರುವ ಹಲವು ಬಡ ಕುಟುಂಬಗಳು ಮೂಲಸೌಲಭ್ಯಗಳಿಲ್ಲದೇ ಈಗಲೂ ಸರ್ಕಾರಿ ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ ನೀರು, ವಿದ್ಯುತ್, ಶಾಲೆ ಮೊದಲಾದ ಸೌಲಭ್ಯಗಳಿಲ್ಲವಾದ್ದರಿಂದ ನಿರಾಶ್ರಿತರು ನಿತ್ಯ ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಹಲವಾರು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಆದರೂ ನಮ್ಮ ಬೇಡಿಕೆಗಳು ಈಡೇರಿಲ್ಲ. ಹಲವು ಕಾರಣಗಳಿಂದ ಗ್ರಾಮ ಪಂಚಾಯಿತಿಯವರು ಅಲ್ಲಿ ಸೌಲಭ್ಯಗಳನ್ನು ಪೂರೈಸುತ್ತಿಲ್ಲ. ಹೀಗಾಗಿ ಅಲ್ಲಿರುವ ಜನರು ಕ್ರಿಮಿ, ಕೀಟ, ವಿಷ ಜಂತುಗಳೊಂದಿಗೆ ವಾಸಿಸಬೇಕಾಗಿದೆ ಎಂದು ಅಲವತ್ತುಕೊಂಡಿದ್ದಾರೆ.

ದೂರದಲ್ಲಿರುವ ಶಾಲೆಗೆ ನಿತ್ಯ ನಡೆದುಕೊಂಡು ಹೋಗುತ್ತಿರುವ ನಿರಾಶ್ರಿತರ ಮಕ್ಕಳು
ಹೊಸಗುಮ್ಮಗೋಳ ಗ್ರಾಮದಲ್ಲಿ ಹತ್ತಾರು ಬಡ ಕುಟುಂಬಗಳು ಹಲವು ವರ್ಷಗಳಿಂದ ಅತಂತ್ರರಾಗಿ ಬದುಕುತ್ತಿದ್ದು ಸರ್ಕಾರ ಅಗತ್ಯ ಸೌಲಭ್ಯಗಳನ್ನು ನೀಡಿ ಗ್ರಾಮಸ್ಥರಿಗೆ ನೆರವಾಗಬೇಕು
ಹನುಮಂತ ಬೆಂಡಿಕಾಯಿ ಗುಮ್ಮಗೋಳ ಗ್ರಾಮದ ನಿರಾಶ್ರಿತ

ಭಾಗಶಃ ಸ್ಥಳಾಂತರಗೊಂಡ ಬಿದರಳ್ಳಿ

ತಾಲ್ಲೂಕಿನ ಬಿದರಳ್ಳಿ ಗ್ರಾಮ ಹಿನ್ನೀರಿನಲ್ಲಿ ಮುಳುಗಡೆಯಾಗಲಿದ್ದು ಅಲ್ಲಿರುವ ಗ್ರಾಮಸ್ಥರು ಈಗ ಭಾಗಶಃ ಹೊಸಬಿದರಳ್ಳಿ ಗ್ರಾಮಕ್ಕೆ ಸ್ಥಳಾಂತರಗೊಂಡಿದ್ದಾರೆ. ಹೊಸಬಿದರಳ್ಳಿ ಗ್ರಾಮದಲ್ಲಿ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಿದೆ. ಗ್ರಾಮದ ರೇಣುಕಾಂಬಾ ದೇವಸ್ಥಾನ ಸೇರಿದಂತೆ ಹಲವು ಕುಟುಂಬಗಳು ಈಗಲೂ ಹಳೆಬಿದರಳ್ಳಿ ಗ್ರಾಮದಲ್ಲಿ ವಾಸಿಸುತ್ತಿವೆ. ಹಿನ್ನೀರಿನಿಂದ ಅಷ್ಟೊಂದು ತೀವ್ರತೆಗೆ ಒಳಗಾಗದ ತಾಲ್ಲೂಕಿನ ವಿಠಲಾಪೂರ ಗ್ರಾಮದ ಸ್ಥಳಾಂತರಕ್ಕೆ ಸರ್ಕಾರ ಈಗ ಕ್ರಮ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.