ADVERTISEMENT

ಅಜ್ಞಾನ ಕಳೆದು ಸುಜ್ಞಾನ ಬೆಳಗಿಸುವವನೇ ಗುರು: ಅಭಿನವ ಶಿವಾನಂದ ಶ್ರೀ

ಗದಗ ಜಿಲ್ಲಾ ರೆಡ್ಡಿ ಸಮಾಜ ಸಂಘದಿಂದ ಗುರು ಪೂರ್ಣಿಮೆ ಆಚರಣೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 5:13 IST
Last Updated 11 ಜುಲೈ 2025, 5:13 IST
ಗುರುಪೂರ್ಣಿಮೆ ಅಂಗವಾಗಿ ಗದಗ ಜಿಲ್ಲಾ ರಡ್ಡಿ ಸಮಾಜದವರು ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು   
ಗುರುಪೂರ್ಣಿಮೆ ಅಂಗವಾಗಿ ಗದಗ ಜಿಲ್ಲಾ ರಡ್ಡಿ ಸಮಾಜದವರು ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳಿಗೆ ಗುರುವಂದನೆ ಸಲ್ಲಿಸಿದರು      

ಗದಗ: ‘ಮನುಷ್ಯನ ಅಜ್ಞಾನ ದೂರ ಮಾಡಿ; ಸುಜ್ಞಾನದ ಬೆಳಕು ನೀಡುವ ಮೂಲಕ ಎಲ್ಲರನ್ನು ಧರ್ಮದ ಸನ್ಮಾರ್ಗದಲ್ಲಿ ಮುನ್ನಡೆಸಬಲ್ಲ ಅದಮ್ಯ ಶಕ್ತಿ ಗುರುವಿನಲ್ಲಿದೆ’ ಎಂದು ಗದುಗಿನ ಶಿವಾನಂದ ಬೃಹನ್ಮಠದ ಅಭಿನವ ಶಿವಾನಂದ ಸ್ವಾಮೀಜಿ ಹೇಳಿದರು.

ಗದಗ ಜಿಲ್ಲಾ ರಡ್ಡಿ ಸಮಾಜ ಸಂಘದಿಂದ ಗುರುವಾರ ಗುರುಪೂರ್ಣಿಮೆ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಎಲ್ಲರ ಜೀವನದಲ್ಲಿ ಗುರುವಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಜನ್ಮ ನೀಡಿದ ತಾಯಿ, ನೆಲೆ ಒದಗಿಸಿದ ಭೂಮಿ ಸ್ವರ್ಗಕ್ಕೂ ಮಿಗಿಲು. ತಾಯಿಯೇ ಮೊದಲ ಗುರು. ಅಂತೆಯೇ ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ ಹಾಗೂ ಅತಿಥಿ ದೇವೋಭವ ಎಂದು ಹೇಳುವ ಮೂಲಕ ಗುರುವಿಗೆ ದೈವಿ ಸ್ವರೂಪ ನೀಡಲಾಗಿದೆ’ ಎಂದರು.

ADVERTISEMENT

‘ನಾವು ಮಕ್ಕಳಿಗೆ ಒಳ್ಳೆ ಶಿಕ್ಷಣ, ಸಂಸ್ಕಾರ, ಸಂಸ್ಕೃತಿ ಕಲಿಸಬೇಕು. ಮಕ್ಕಳಿಗೆ ಆಧ್ಯಾತ್ಮಿಕ, ವೈಚಾರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬೆಳೆಸಲು ಪೋಷಕರು ಗಮನ ಹರಿಸಬೇಕು’ ಎಂದು ತಿಳಿಸಿದರು.

ಮಹಾಯೋಗಿ ವೇಮನ ಹಾಗೂ ಹೇಮರಡ್ಡಿ ಮಲ್ಲಮ್ಮ ಅವರು, ‘ಧರ್ಮ ಜಾಗೃತಿ, ವೈಚಾರಿಕ ಜಾಗೃತಿಯೊಂದಿಗೆ ಮನುಷ್ಯನ ಆದರ್ಶಮಯ ಬದುಕಿಗೆ ಬಹು ದೊಡ್ಡ ಮೌಲಿಕ ಸಾಹಿತ್ಯ, ತತ್ವ ಸಂದೇಶಗಳನ್ನು ನೀಡಿದ್ದಾರೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು’ ಎಂದರು.

ಗದಗ ಜಿಲ್ಲಾ ರಡ್ಡಿ ಸಮಾಜ ಸಂಘದ ಹಿರಿಯರು, ಮಹಿಳೆಯರು ಅಭಿನವ ಶಿವಾನಂದ ಸ್ವಾಮೀಜಿಗೆ ಆರತಿ ಮಾಡಿ, ಗುರುಕಾಣಿಕೆ, ಫಲಪುಷ್ಪಗಳೊಂದಿಗೆ ಗುರುವಂದನೆ ಸಲ್ಲಿಸಿದರು.

ಎಸ್.ಎಚ್.ಶಿವನಗೌಡ್ರ ನಿರೂಪಿಸಿದರು. ನಿಂಗಪ್ಪ ದೇಸಾಯಿ ಹಾಗೂ ಬಾಬು ಮಲ್ಲನಗೌಡ್ರ ಮಾತನಾಡಿದರು. ರಾಘು ಹೊಸಮನಿ ದಂಪತಿ ಪಾದಪೂಜೆ ನೆರವೇರಿಸಿದರು. ಮೋಹನ ಕಗದಾಳ ವಂದಿಸಿದರು.

ಮನುಷ್ಯ ಧರ್ಮದ ಹಾದಿಯಲ್ಲಿ ಮುನ್ನಡೆಯಬೇಕು. ಸತ್ಸಂಗ ಸಂತರು ಗುರುವಿನ ಸಂಪರ್ಕದಲ್ಲಿದ್ದರೆ ಅಜ್ಞಾನ ದೂರವಾಗಿ ಸುಜ್ಞಾನವು ಪ್ರಜ್ವಲಿಸುವುದು
ಅಭಿನವ ಶಿವಾನಂದ ಸ್ವಾಮೀಜಿ ಶಿವಾನಂದ ಬೃಹನ್ಮಠ ಗದಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.