ADVERTISEMENT

ಮುದ್ರಣಕಾಶಿಯಲ್ಲಿ ಸಂಭ್ರಮದ ಗುರು ಪೂರ್ಣಿಮೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2018, 16:17 IST
Last Updated 27 ಜುಲೈ 2018, 16:17 IST
ಗುರುಪೂರ್ಣಿಮೆ ಅಂಗವಾಗಿ ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶುಕ್ರವಾರ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಉಪನ್ಯಾಸ ನೀಡಿದರು. ಜಗನ್ನಾಥಾನಂದ ಸ್ವಾಮೀಜಿ ಇದ್ದಾರೆ
ಗುರುಪೂರ್ಣಿಮೆ ಅಂಗವಾಗಿ ಗದುಗಿನ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶುಕ್ರವಾರ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಉಪನ್ಯಾಸ ನೀಡಿದರು. ಜಗನ್ನಾಥಾನಂದ ಸ್ವಾಮೀಜಿ ಇದ್ದಾರೆ   

ಗದಗ: ನಗರದ ವಿವೇಕಾನಂದ ಬಡಾವಣೆಯ ಸಾಯಿಬಾಬಾ ದೇವಸ್ಥಾನದಲ್ಲಿ ಶುಕ್ರವಾರ ಗುರುಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ ನಡೆಯಿತು. ನೂರಾರು ಭಕ್ತರು ಬೆಳಿಗ್ಗೆಯಿಂದ ರಾತ್ರಿಯವರೆಗೆ ಮಂದಿರದಲ್ಲಿ ಸಾಯಿಬಾಬಾ ದರ್ಶನ ಪಡೆದರು.

ರೈಲ್ವೆ ಕ್ವಾಟರ್ಸ್‌ನಲ್ಲಿರುವ ಸಾಯಿಬಾಬಾ ದೇವಸ್ಥಾನದಲ್ಲೂ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿತು. ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು, ಗುಲಾಬಿ, ಮಲ್ಲಿಗೆ ಮಾಲೆ ಅರ್ಪಿಸಿದರು. ಕಾಕಡಾರತಿ, ಮಂಗಲ ಸ್ನಾನ, ಮಹಾಭಿಷೇಕ, ಅಲಂಕಾರ ಪೂಜೆ, ಆರತಿ ಕಾರ್ಯಕ್ರಮಗಳು ನಡೆದವು.

ರಾಮಕೃಷ್ಣ ವಿವೇಕಾನಂದ ಆಶ್ರಮ: ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಶುಕ್ರವಾರ ಬೆಳಿಗ್ಗೆ ರಾಮಕೃಷ್ಣ ಪರಮಹಂಸರ, ಶಾರದಾ ಮಾತೆ ಹಾಗೂ ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಹೂವಿನಿಂದ ಅಲಂಕರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಸಂಜೆ ಜಪಯಜ್ಞ ಕಾರ್ಯಕ್ರಮ ನಡೆಯಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಅವರು, ‘ವಿದ್ಯಾರ್ಥಿ ಜೀವನದಲ್ಲಿ ಗುರುವಿನ ಪಾತ್ರ’ ಕುರಿತು ಉಪನ್ಯಾಸ ನೀಡಿದರು.

ADVERTISEMENT

ಗುರು ಪರಂಪರೆ ಕುರಿತು ಸುಬ್ರಣ್ಯ ಅವರು ಮಾತನಾಡಿದರು. ಗಾಯಕಿ ಮೇಘಮಾಲಾ ಮಡಿಕೇರಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದರು. ಜಗನ್ನಾಥಾನಂದ ಸ್ವಾಮೀಜಿ ಇದ್ದರು. ವಿವಿಧ ಕಾಲೇಜಿನ 350 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಪತಂಜಲಿ ಯೋಗ ಸಮಿತಿ: ಇಲ್ಲಿನ ನಗರಸಭೆ ಕಾಲೇಜು ಮೈದಾನದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿಯಿಂದ ಗುರುಪೌರ್ಣಿಮೆ ಅಂಗವಾಗಿ ಗುರುವಂದನಾ ಕಾರ್ಯಕ್ರಮ ನಡೆಯಿತು.
ನಿವೃತ್ತ ಮುಖ್ಯಶಿಕ್ಷಕ ಮಲ್ಲಿಕಾರ್ಜುನ ಚಿನ್ನೂರ ಅವರು, ವಿವೇಕಾನಂದರ ಮತ್ತು ರಾಮಕೃಷ್ಣ ಪರಮಹಂಸರ ಗುರು ಶಿಷ್ಯರ ಬಾಂಧವ್ಯದ ಕುರಿತು ಉಪನ್ಯಾಸ ನೀಡಿದರು.

ಭಾರತ ಸ್ವಾಭಿಮಾನ ಟ್ರಸ್ಟ್‌ನ ರುದ್ರಣ್ಣ ಗುಳಗುಳಿ, ಜಿಲ್ಲಾ ಪತಂಜಲಿ ಯೋಗ ಸಮಿತಿಯ ಗಂಗಾಧರ ಬಡಿಗಣ್ಣವರ ಮಾತನಾಡಿದರು.
ಮಲ್ಲಣ್ಣ ಇಟಗಿ, ಸುರೇಶ ಕುಲಕರ್ಣಿ, ಶಂಕರ ಕಾಟಿಗಾರ, ಗಿರಿಜಾ ಚಳ್ಳಮರದ, ಬಸಮ್ಮ ಡಗಲಿ, ತ್ರೀವೇಣಿ ಖಾನಾಪೂರ, ಕುದುರೆಮೋತಿ, ಸದಾನಂದ ಕಾಮತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.