ADVERTISEMENT

ಗದುಗಿನಲ್ಲಿ ಪ್ರಜಾಧ್ವನಿ ಯಾತ್ರೆ 18ಕ್ಕೆ

ಕೆಪಿಸಿಸಿ ಅಧ್ಯಕ್ಷ ಡಿ.ಶಿ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭಾಗಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 5:38 IST
Last Updated 16 ಜನವರಿ 2023, 5:38 IST
ಮಾಜಿ ಶಾಸಕ ಜಿ.ಎಸ್‌. ಪಾಟೀಲ
ಮಾಜಿ ಶಾಸಕ ಜಿ.ಎಸ್‌. ಪಾಟೀಲ   

ಗದಗ: ‘ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯುವಂತೆ ಆಗ್ರಹಿಸಿ ಕಾಂಗ್ರೆಸ್‌ ಪಕ್ಷ ಆರಂಭಿಸಿರುವ ಪ್ರಜಾಧ್ವನಿ ಯಾತ್ರೆ ಜ.18ರಂದು ಗದಗ ನಗರಕ್ಕೆ ಆಗಮಿಸಲಿದೆ’ ಎಂದು ಗದಗ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಿ.ಎಸ್‌.ಪಾಟೀಲ ಹಾಗೂ ಶಾಸಕ ಎಚ್‌.ಕೆ.ಪಾಟೀಲ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಜ.18ರಂದು ಮಧ್ಯಾಹ್ನ 4ಕ್ಕೆ ಗದಗ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯಲ್ಲಿ ಅಂದಾಜು 40ರಿಂದ 50 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ತಿಳಿಸಿದರು.

ADVERTISEMENT

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಸ್ವಾಮೀಜಿಗಳು ನಡೆಸುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಎಚ್‌.ಕೆ.ಪಾಟೀಲ, ‘ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಾಂಗ್ರೆಸ್‌ ಪಕ್ಷದ ಆಣತಿಯಂತೆ ವರ್ತಿಸುತ್ತಿದ್ದಾರೆ ಎಂಬುದು ಸುಳ್ಳು. ಒಮ್ಮಿಂದೊಮ್ಮೆಲೆ ಸ್ವಾಮೀಜಿಗಳಿಗೆ ರಾಜಕಾರಣ ಹಚ್ಚಿದರೋ ಗೊತ್ತಿಲ್ಲ’ ಎಂದು ಹೇಳಿದರು.

‘ಸ್ವಾಮೀಜಿ ನಮ್ಮ ಪಕ್ಷದ ಜತೆಗೆ ಸಂಪರ್ಕ ಇಟ್ಟುಕೊಂಡಿಲ್ಲ. ಅವರ ಬೇಡಿಕೆಗಳಿಗೆ ನಮ್ಮ ವೈಯಕ್ತಿಕ ನೆಲೆಯಲ್ಲಿ ಬೆಂಬಲಿಸಿದ್ದೇವೆ. ಅದೇರೀತಿ, ಪಂಚಮಸಾಲಿ ಸಮುದಾಯಕ್ಕೆ ಸೇರಿದ ಕಾಂಗ್ರೆಸ್‌ ಮುಖಂಡರು ಸಮುದಾಯದ ಹೋರಾಟದ ಕಾರಣಕ್ಕೆ ಅವರ ಜತೆಗೆ ಇದ್ದಾರೆ. ಈ ಕಾರಣಕ್ಕೆ ರಾಜಕೀಯ ಬೆರೆಸುವುದು ಸಜ್ಜನಿಕೆ ಲಕ್ಷಣ ಅಲ್ಲ’ ಎಂದು ಹೇಳಿದರು.

‘ಸ್ವಾಮೀಜಿ ಇವರಿಗೆ ಅನನುಕೂಲವಾಗುವಂತಹ ನಿಲುವು ತೆಗೆದುಕೊಂಡಿದ್ದಾರೆ ಎಂಬ ಕಾರಣಕ್ಕೆ ರಾಜಕಾರಣವನ್ನು ಹಚ್ಚುವುದು ಸರಿಯಲ್ಲ’ ಎಂದು ತಿಳಿಸಿದರು.

ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಜಟಾಪಟಿ ಕುರಿತಾಗಿ ಪ್ರತಿಕ್ರಿಯಿಸಿದ ಅವರು, ‘ರಾಜ್ಯದಲ್ಲಿನ ಬಿಜೆಪಿ ಪಕ್ಷದ ಒಳಜಗಳ ಜಗಜ್ಜಾಹೀರಾಗಿದೆ. ಸಾರ್ವಜನಿಕ ಕ್ಷೇತ್ರದಲ್ಲಿ ಮಹತ್ವದ ಹುದ್ದೆ ಹೊಂದಿರುವವರು ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ತಮ್ಮ ಭಾಷೆ, ಶೈಲಿ ಹರಿಬಿಡುತ್ತಿದ್ದಾರೆ. ಇದು ಅತ್ಯಂತ ದುರ್ದೈವದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸಚಿವರು, ಶಾಸಕರು ಹಿಡಿತವಿಲ್ಲದಂತೆ ಮಾತನಾಡುತ್ತಿದ್ದಾರೆ. ನಾಲಗೆ ಕತ್ತರಿಸುತ್ತೇನೆ ಎಂದಿದ್ದಾರೆ. ರಾಜಕೀಯ ವ್ಯವಸ್ಥೆ ಗಲೀಜುಗೊಳಿಸು ತ್ತಿರುವ ಇಂತಹ ಘಟನೆಗಳಿಗಾಗಿ ಮುಖ್ಯಮಂತ್ರಿ ತಕ್ಷಣವೇ ಸಾರ್ವಜನಿಕರ ಕ್ಷಮೆ ಕೇಳಬೇಕು
ಎಚ್‌.ಕೆ.ಪಾಟೀಲ, ಶಾಸಕ

ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಆಡಳಿತದಲ್ಲಿನ ವೈಫಲ್ಯಗಳನ್ನು ಜನರ ಮುಂದಿಡುವ ಕೆಲಸ ಮಾಡಲಾಗುವುದು. ಪ್ರಜಾಧ್ವನಿ ಯಾತ್ರೆ ಕಾಂಗ್ರೆಸ್‌ ಪಕ್ಷದ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಲಿದೆ

ಜಿ.ಎಸ್‌.ಪಾಟೀಲ, ಗದಗ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.