ADVERTISEMENT

‘ಸ್ಯಾಂಟ್ರೋ ರವಿ ಹಿಂದಿರುವ ಸೂತ್ರಧಾರರನ್ನು ಬಂಧಿಸಿ’

​ಪ್ರಜಾವಾಣಿ ವಾರ್ತೆ
Published 16 ಜನವರಿ 2023, 5:35 IST
Last Updated 16 ಜನವರಿ 2023, 5:35 IST

ಗದಗ: ‘ದೇವರಿಗೆ ಹರಕೆ ತೀರಿಸುವುದು ಹಿರೋಯಿಸಂ ಅಲ್ಲ. ಸ್ಯಾಂಟ್ರೋ ರವಿ ಹಿಂದಿರುವ ಶಕ್ತಿಗಳನ್ನು ಬಂಧಿಸಿ’ ಎಂದು ಶಾಸಕ ಎಚ್‌.ಕೆ.ಪಾಟೀಲ ಪರೋಕ್ಷವಾಗಿ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಸವಾಲು ಹಾಕಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಸ್ಯಾಂಟ್ರೋ ರವಿಯನ್ನು ಬಂಧಿಸಿದರೆ ಸಾಲದು. ಅವನೊಬ್ಬನೇ ತಪ್ಪಿತಸ್ಥ ಅಲ್ಲ. ಅವನನ್ನು ಬಳಸಿ
ರಾಜ್ಯದ ಆಡಳಿತವನ್ನು ಅಶಕ್ತಗೊಳಿಸಲಾಗಿದೆ. ಆಡಳಿತ ವ್ಯವಸ್ಥೆ ಹದಗೆಟ್ಟು ಹೋಗಿದೆ. ಅವನನ್ನು ಉಪಯೋಗಿಸಿಕೊಂಡು ಯಾರ್ಯಾರು ಭ್ರಷ್ಟಾಚಾರದಲ್ಲಿ ತೊಡಗಿದ್ದರೋ ಅವರನ್ನು ಬಂಧಿಸುವ ಕೆಲಸ ಆಗಬೇಕು’ ಎಂದು ಆಗ್ರಹಿಸಿದರು.

‘ವರ್ಗಾವಣೆ ಮಾಡಿಸಿಕೊಂಡವನು, ಮಾಡಿದವನು. ದುಡ್ಡು ಕೊಟ್ಟವನು ಮತ್ತು ತೆಗೆದುಕೊಂಡವನು, ಭ್ರಷ್ಟಾಚಾರಕ್ಕೆ ಕುಮ್ಮುಕ್ಕು ನೀಡಿದವರನ್ನು ತಕ್ಷಣ ಬಂಧಿಸಬೇಕು. ಸ್ಯಾಂಟ್ರೋ ರವಿ ಹಿಂದಿರುವ ಸೂತ್ರಧಾರರನ್ನು ಹಿಡಿದಾಗ ಮಾತ್ರ ಅದು ಸರಿಯಾದ ತನಿಖೆ. ಸಮಾಜ ಕೂಡ ಪೊಲೀಸರಿಂದ ಇದನ್ನೇ ಅಪೇಕ್ಷಿಸುತ್ತದೆ’ ಎಂದು ಹೇಳಿದರು.‌

ADVERTISEMENT

ಸಚಿವ ಮುರುಗೇಶ ನಿರಾಣಿ ಹಾಗೂ ಶಾಸಕ ಬಸನಗೌಡ ಪಾಟೀಲ ಅವರ ವಾಕ್ಸಮರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸಾರ್ವಜನಿಕ ಕ್ಷೇತ್ರದಲ್ಲಿ ಮಹತ್ವದ ಹುದ್ದೆಗಳನ್ನು ಹೊಂದಿದವರು ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ತಮ್ಮ ಭಾಷೆ, ಶೈಲಿ, ವಿಚಾರಗಳನ್ನು ಹರಿಬಿಡುತ್ತಿದ್ದಾರೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.