
ನರೇಗಲ್ ಸಮೀಪದ ಹಾಲಕೆರೆಯ ಅನ್ನದಾನೇಶ್ವರ ಸಂಸ್ಥಾನ ಮಠದ 174ನೇ ಮಹಾರಥೋತ್ಸವ ಹಾಗೂ ಜಾತ್ರಾಮಹೋತ್ಸವದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಒಲವಿನ ಒಡೆಯ ಅಭಿನಂದನಾ ಗ್ರಂಥವನ್ನು ಶ್ರೀಗಳು ಮತ್ತು ಗಣ್ಯರು ಬಿಡುಗಡೆ ಮಾಡಿದರು
ನರೇಗಲ್: ‘ಜಗತ್ತಿನಲ್ಲಿ ಅನ್ನದಾನ ಮತ್ತು ವಿದ್ಯಾದಾನ ಮಹತ್ವ ಪಡೆದಿವೆ. ಈ ನಿಟ್ಟಿನಲ್ಲಿ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನಮಠ ನಿರಂತರ ಸೇವೆ ಸಲ್ಲಿಸುತ್ತ ನಾಡಿನ ಶ್ರೇಷ್ಠ ಮಠಗಳಲ್ಲಿ ಒಂದಾಗಿದೆ’ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಹಾಲಕೆರೆ ಗ್ರಾಮದಲ್ಲಿ ಬುಧವಾರ ನಡೆದ ಅನ್ನದಾನೇಶ್ವರ ಸಂಸ್ಥಾನ ಮಠದ 174ನೇ ಮಹಾ ರಥೋತ್ಸವ ಹಾಗೂ ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಅವರ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಅವರು ತಮ್ಮ ಗುರು ಲಿಂ. ಅಭಿನವ ಅನ್ನದಾನ ಸ್ವಾಮೀಜಿ ಅವರ ಕನಸನ್ನು ನನಸು ಮಾಡುವಲ್ಲಿ ನಿರಂತರ ಸೇವೆ ಸಲ್ಲಿಸುತ್ತಾದ್ದಾರೆ’ ಎಂದರು.
ಹಿರೆವಡೆಯರ ಅವರು ಕೇವಲ ಶಿಕ್ಷಕರಾಗಿರದೆ ಉತ್ತಮ ಸಾಹಿತಿ ಕೂಡ ಆಗಿದ್ದಾರೆ. ಕನ್ನಡದ ಪುಸ್ತಕವನ್ನು ಇಂಗ್ಲಿಷ್ ಭಾಷೆಗೆ ಕಡಿಮೆ ಸಮಯದಲ್ಲಿ ಭಾಷಾಂತರ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ‘ಒಲವಿನ ಒಡೆಯ ಅಭಿನಂದನಾ ಗ್ರಂಥ’ ಬಿಡುಗಡೆ ಆಗುತ್ತಿರುವುದು ಸಂತಸ ವಿಷಯ’ ಎಂದರು.
ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು ಮಾತನಾಡಿದರು. ಮಠದ ಪೀಠಾಧಿಪತಿ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಸಿ.ಆರ್. ಯರವಿನತೇಲಿಮಠ, ಎಂ.ಎ. ಹಿರೆವಡೆಯರ, ಶಿವಾನಂದಯ್ಯ ಚರಂತಿಮಠ, ಎಫ್.ಎನ್. ಹುಡೇದ, ಆರ್.ಕೆ. ಗಚ್ಚಿನಮಠ, ಸಂಗಮೇಶ ಹೂಲಗೇರಿ ಇದ್ದರು.
ಅನ್ನದಾನೇಶ್ವರ ಅದ್ದೂರಿ ರಥೋತ್ಸವ
ಅನ್ನದಾನೇಶ್ವರ ಸಂಸ್ಥಾನ ಮಠದ ಮಹಾ ರಥೋತ್ಸವ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು. ಹಾಲಕೆರೆ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಬೆಳಿಗ್ಗೆ 5ಕ್ಕೆ ಕರ್ತೃ ಗದ್ದುಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ, ಮಹಾ ಗಣಾರಾಧನೆ ಸೇರಿದಂತೆ ಅನೇಕ ಧಾರ್ವಿುಕ ಕಾರ್ಯಕ್ರಮ ಜರುಗಿದವು. ಸುತ್ತಲಿನ ಗ್ರಾಮಗಳಿಂದ ಆಗಮಿಸಿದ ಭಕ್ತರು ಸಕಲ ವಾದ್ಯ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಸಿದರು.
ಭಕ್ತರು ರಥೋತ್ಸವದಲ್ಲಿ ಘೋಷಗಳನ್ನು ಕೂಗಿದರು. ರಥಕ್ಕೆ ಉತ್ತತ್ತಿ, ಬಾಳೆಹಣ್ಣು, ತೆಂಗಿನಕಾಯಿ ನೈವೇದ್ಯ ಅರ್ಪಿಸಿ ಭಕ್ತಿ ಸಮರ್ಪಿಸಿದರು.