
ಗದಗ: ‘ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರುದ್ಧ ಮಾತನಾಡದಂತೆ ವಿರೋಧ ಪಕ್ಷ, ಜನ ಸಾಮಾನ್ಯರ ವಿರುದ್ಧ ದ್ವೇಷ ಭಾಷಣ ನಿಯಂತ್ರಣ ಕಾನೂನು ಜಾರಿಗೆ ತಂದಿದ್ದಾರೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದವರೇ ಹೆಚ್ಚು ದ್ವೇಷ ಭಾಷಣ ಮಾಡಿದ್ದಾರೆ. ಈಗಾಗಲೇ ದ್ವೇಷ ಭಾಷಣ ನಿಯಂತ್ರಣಕ್ಕೆ ಬಿಎನ್‌ಎಸ್ ಕಾನೂನು ಜಾರಿಯಲ್ಲಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹರಣ ಮಾಡಲು ಸಂವಿಧಾನದ ವಿರುದ್ಧ ಕಾನೂನು ಜಾರಿಗೆ ತಂದಿದ್ದಾರೆ’ ಎಂದರು.
ವಿಬಿ–ಜಿ ರಾಮ್.ಜಿ ವಿಧೇಯಕವನ್ನು ಕಾಂಗ್ರೆಸ್ ವಿರೋಧಿಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಧೇಯಕ ಕುರಿತು ಸಂಸತ್ತಿನಲ್ಲಿ ಸುಮಾರು ಹದಿನೈದು ಗಂಟೆ ಕಾಲ ಸುದೀರ್ಘ ಚರ್ಚೆಯಾಗಿದೆ. ಗ್ರಾಮೀಣ ಪರಿಸ್ಥಿತಿ ಬದಲಾಗಿದ್ದು, ಅದರ ಅನುಗುಣವಾಗಿ ವಿಧೇಯಕ ಬದಲಾಯಿಸಲಾಗಿದೆ’ ಎಂದರು.
ಈ ಯೋಜನೆಗೆ ಪ್ರತಿ ವರ್ಷ ಅಧಿಕ ಹಣ ಖರ್ಚು ಮಾಡಲಾಗುತ್ತಿದ್ದು, ಅದು ಒಳ್ಳೆಯ ಉದ್ದೇಶಕ್ಕೆ ಆಗಬೇಕು. ನೋಂದಣಿ ಅಥವಾ ಉದ್ಯೋಗದ ದಿನಗಳನ್ನು 25ಕ್ಕೆ ಹೆಚ್ಚಿಗೆ ಮಾಡಲಾಗಿದೆ. ಆದರೂ ವಿಪಕ್ಷಗಳು ವಿರೋಧಿಸುತ್ತಿವೆ ಎಂದರು.
ಮಹಾತ್ಮ ಗಾಂಧೀಜಿಯವರ ವಿಚಾರಧಾರೆ ಹತ್ತಿಕ್ಕಲು ಈ ವಿಧೇಯಕ ತರಲಾಗಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ರಾಮನ ಹೆಸರು ತೆಗೆದುಕೊಂಡಾಗ ಅದರಲ್ಲಿ ಗಾಂಧೀಜಿ ಇದ್ದಾರೆ. ರಾಮನನ್ನು ಗಾಂಧೀಜಿಯಿಂದ ಬೇರ್ಪಡಿಸುವುದೇ ಗಾಂಧೀಜಿಗೆ ಮಾಡುವ ದೊಡ್ಡ ಅಪಚಾರ’ ಎಂದರು.
ರಾಜ್ಯ ಸರ್ಕಾರ ಮೆಕ್ಕೆಜೋಳ ಖರೀದಿ ಕುರಿತು ಹತ್ತು ಲಕ್ಷ ಮೆಟ್ರಿಕ್ ಟನ್ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು. ಇದುವರೆಗೂ ಎಷ್ಟು ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಿದ್ದಾರೆ ಎಂದು ಸರ್ಕಾರ ಬಹಿರಂಗ ಪಡಿಸಲಿ. ರೈತರಿಗೆ ಸರ್ಕಾರ ಮೋಸ ಮಾಡುತ್ತಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.