ಗದಗ: ಅವಳಿ ನಗರದಲ್ಲಿ ಶನಿವಾರ ತಡರಾತ್ರಿ ಉತ್ತಮ ಮಳೆ ಸುರಿದ ಪರಿಣಾಮ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ತಗ್ಗುಪ್ರದೇಶದ ನಿವಾಸಿಗಳು ತೊಂದರೆ ಅನುಭವಿಸಿದರು.
ಶನಿವಾರ ತಡರಾತ್ರಿ ಏಕಾಏಕಿ ಸುರಿದ ಜೋರು ಮಳೆಗೆ ಬೆಟಗೇರಿಯ ನಾಲ್ಕನೇ ವಾರ್ಡ್‌ನ ಟರ್ನಲ್ ಪೇಟೆಯ ಬಹುತೇಕ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಸಾರ್ವಜನಿಕರು ತೊಂದರೆ ಅನುಭವಿಸಿದರು. ಸ್ಥಳೀಯ ಮನೆಯೊಂದರಲ್ಲಿ ಬಾಣಂತಿಯೊಬ್ಬರು ಕಷ್ಟ ಪಡುವಂತಾಯಿತು. ಬಳಿಕ ಪೋಷಕರು ಬಾಣಂತಿ ಹಾಗೂ ಮಗುವನ್ನು ಸಂಬಂಧಿಕರ ಮನೆಗೆ ಕರೆದುಕೊಂಡು ಹೋದರು.
ಮಳೆನೀರಿನ ಜತೆಗೆ ಚರಂಡಿ ನೀರು ಮನೆಯೊಳಗೆ ನುಗ್ಗಿದ್ದರಿಂದ ಮಳೆ ನೀರನ್ನು ಹೊರಹಾಕಲು ಜನರು ಹರಸಾಹಸ ಪಟ್ಟರು. ಪ್ರತಿ ಬಾರಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿದಾಗ ಈ ಭಾಗದ ಮನೆಗಳಿಗೆ ನೀರು ನುಗ್ಗುತ್ತಿದ್ದು, ನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದರು.
ನಗರಸಭೆ ನಾಲ್ಕನೇ ವಾರ್ಡ್‌ನ ಸದಸ್ಯೆ ಶಕುಂತಲಾ ಅಕ್ಕಿ ಹಾಗೂ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸ್ಥಳೀಯ ನಿವಾಸಿಗಳು ಟರ್ನಲ್ ಪೇಟೆಗೆ ಹೊಂದಿಕೊಂಡಿರುವ ಪಾಲಾ-ಬದಾಮಿ ರಸ್ತೆ ಸಂಚಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ಅವರನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು ಮಳೆ, ಚರಂಡಿ ನೀರು ಮನೆಯೊಳಗೆ ಹೋಗದಂತೆ ಶಾಶ್ವತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಗರದ ಪ್ರಮುಖ ಬೀದಿಯಲ್ಲಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಸಾರ್ವಜನಿರು ಪರದಾಡುವಂತಾಯಿತು. ಅವಳಿ ನಗರದ ಕೆಲವು ಭಾಗದಲ್ಲಿ ಗಟಾರು ನೀರಿನೊಂದಿಗೆ ಮಳೆ ನೀರು ಸೇರಿಕೊಂಡು ರಸ್ತೆ ಮೇಲೆ ರಭಸವಾಗಿ ಹರಿಯಿತು. ಇದರಿಂದ ರಸ್ತೆಯಲ್ಲಾ ಕೆಸರುಮಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.