ADVERTISEMENT

ಮಳೆ ನೀರಿಗೆ ಬೂದಿಹಾಳ ಜಲಾವೃತ

ಜನಜೀವನ ಅಸ್ತವ್ಯಸ್ತ : ಕಾಳಜಿ ಕೇಂದ್ರಕ್ಕೆ ಜನರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 4:16 IST
Last Updated 2 ಅಕ್ಟೋಬರ್ 2020, 4:16 IST
ನರಗುಂದ ತಾಲ್ಲೂಕಿನ ಬೂದಿಹಾಳ ನವಗ್ರಾಮದ ಆಸರೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ
ನರಗುಂದ ತಾಲ್ಲೂಕಿನ ಬೂದಿಹಾಳ ನವಗ್ರಾಮದ ಆಸರೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ   

ನರಗುಂದ: ತಾಲ್ಲೂಕಿನಲ್ಲಿ ಬುಧವಾರ ರಾತ್ರಿ ಮೂರು ತಾಸಿಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದ ಪರಿಣಾಮ ಸ್ಥಳಾಂತರಗೊಂಡಿದ್ದ ಬೂದಿಹಾಳ ಗ್ರಾಮ ಮತ್ತೆ ಜಲಾವೃತವಾಗಿದೆ. ಇದರಿಂದ ಅಲ್ಲಿನ ನಿವಾಸಿಗಳು ಅಹೋರಾತ್ರಿ ಮಳೆಯಲ್ಲಿಯೇ ಕಾಲ ಕಳೆದಿದ್ದಾರೆ.

ಪ್ರವಾಹದಿಂದ ತೊಂದರೆ ಅನುಭವಿಸಿ ಆಸರೆ ಮನೆಗಳಿಗೆ ಸ್ಥಳಾಂತರಗೊಂಡರೂ ಇಲ್ಲಿಯೂ ಜಲ ಕಂಟಕ ಎದುರಾಗಿದೆ ಎಂದು ಬೂದಿಹಾಳ ಗ್ರಾಮಸ್ಥರು ಗುರುವಾರ ಆಕ್ರೋಶ ವ್ಯಕ್ತಪಡಿಸಿದರು.

ನೀರು ಮನೆಗಳಿಗೆ ನುಗ್ಗಿ ದವಸ, ಧಾನ್ಯಗಳು, ಮನೆಬಳಕೆ ವಸ್ತುಗಳು ನೀರು ಪಾಲಾಗಿವೆ. ನೀರು ನುಗ್ಗಿದ್ದರಿಂದ ಮನೆಗಳು ವಾಸ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮದ ಶಾಲೆಯನ್ನು ಕಾಳಜಿ ಕೇಂದ್ರವಾಗಿ ಪರಿವರ್ತಿಸಿ ಅಲ್ಲಿಯೇ ಉಳಿದುಕೊಳ್ಳಲು ತಾಲ್ಲೂಕು ಆಡಳಿತ ವ್ಯವಸ್ಥೆ ಮಾಡಿದೆ.

ADVERTISEMENT

ವಿಷಯ ತಿಳಿದ ತಹಶೀಲ್ದಾರ್ ಮಹೇಂದ್ರ ಗುರುವಾರ ಸ್ಥಳಕ್ಕೆ ಭೇಟಿ ನೀಡಿದಾಗ ಬೂದಿಹಾಳ ಗ್ರಾಮಸ್ಥರು ತಹಶೀಲ್ದಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‌

ತಹಶೀಲ್ದಾರ್‌ಗೆ ಘೇರಾವ್: ‘ಇಡಿ ರಾತ್ರಿ ನಾವು ನೀರಿನಲ್ಲಿ ಕಾಲ ಕಳೆಯುವಂತಾಗಿದೆ. ಹಲವಾರು ಸಲ ಮನವಿ ಮಾಡಿದರೂ ಈ ಸಮಸ್ಯೆ ಪರಿಹಾರ ಮಾಡಿಲ್ಲ’ ಎಂದು ಹರಿಹಾಯ್ದರು. ಈ ಸಮಸ್ಯೆಗೆ ಪರಿಹಾರ ಸೂಚಿಸುವವರೆಗೂ ಇಲ್ಲಿಂದ ಅವರನ್ನು ತೆರಳಲು ಬಿಡುವುದಿಲ್ಲ ಎಂದು ಘೇರಾವು ಹಾಕಿದ ಘಟನೆಯೂ ನಡೆಯಿತು. ಗ್ರಾಮಸ್ಥರು ಸಮಸ್ಯೆಗಳ ಸರಮಾಲೆಯನ್ನೇ ತೆರೆದಿಟ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪರಿಹಾರಕ್ಕೆ ಕ್ರಮ: ಜಲಾವೃತವಾಗಿದ್ದರ ಬಗ್ಗೆ ಎಲ್ಲ ವಿವರ ಪಡೆಯಲಾಗಿದೆ. ಈ ಸಮಸ್ಯೆ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ. ಶೀಘ್ರವೇ ಸಮಸ್ಯೆ ಪರಿಹರಿಸುವುದಾಗಿ ತಹಶೀಲ್ದಾರ್ ಮಹೇಂದ್ರ ಗ್ರಾಮಸ್ಥರನ್ನು ಸಮಾಧಾನಗೊಳಿಸಿದರು.

ಜಿ.ಪಂ. ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ ಭೇಟಿ ನೀಡಿ ಸಮಸ್ಯೆ ಆಲಿಸಿದರು. ವಾಸನ ಹೊಸ ಗ್ರಾಮದ ಶೆಡ್‍ಗಳಿಗೂ ನೀರು ನುಗ್ಗಿದ್ದು ಅಲ್ಲಿಯ ನಿವಾಸಿಗಳು ಕೂಡ ರಾತ್ರಿ ಮಳೆನೀರಿನ ಮಧ್ಯೆಯೇ ಕಾಲ ಕಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.