ADVERTISEMENT

9 ವರ್ಷವಾದರೂ ಬೆಳಗದ ದೀಪ - ಕಣ್ಣುಮುಚ್ಚಿ ಕುಳಿತ ಪಟ್ಟಣ ಪಂಚಾಯ್ತಿ ಅಧಿಕಾರಿಗಳು

ನಾಚಿಕೆಗೇಡು ಎಂದ ಸ್ಥಳೀಯರು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 17 ಮಾರ್ಚ್ 2021, 5:06 IST
Last Updated 17 ಮಾರ್ಚ್ 2021, 5:06 IST
ನರೇಗಲ್‌ನ ಹೊಸ ಬಸ್ ನಿಲ್ದಾಣದ ಸರ್ಕಲ್ ಸಮೀಪದಲ್ಲಿ ಹೈಮಾಸ್ಟ್‌ ಕಂಬದ ಸ್ವಿಚ್ ಬಾಕ್ಸ್ ತುಕ್ಕು ಹಿಡಿದಿರುವುದು
ನರೇಗಲ್‌ನ ಹೊಸ ಬಸ್ ನಿಲ್ದಾಣದ ಸರ್ಕಲ್ ಸಮೀಪದಲ್ಲಿ ಹೈಮಾಸ್ಟ್‌ ಕಂಬದ ಸ್ವಿಚ್ ಬಾಕ್ಸ್ ತುಕ್ಕು ಹಿಡಿದಿರುವುದು   

ನರೇಗಲ್:‌ 2011–12ನೇ ಸಾಲಿನಲ್ಲಿ ವಿವಿಧ ಓಣಿಗಳಲ್ಲಿ ಅಳವಡಿಸಲಾಗಿರುವ ಹೈಮಾಸ್ಟ್‌ ಬೀದಿ ದೀಪಗಳು ಬೆಳಕು ನೀಡದೆ ಇರುವುದರಿಂದ ಪಟ್ಟಣದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹಾಗೂ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೈಮಾಸ್ಟ್‌ ದೀಪಸ್ತಂಭಗಳು ಬೆದರುಗೊಂಬೆಯಂತೆ ಗೋಚರಿಸುತ್ತಿವೆ. ಆದರೆ, ಸೂರ್ಯಾಸ್ತವಾಗುತ್ತಿದ್ದಂತೆ ಬೆಳಕು ನೀಡದೆ ಪಟ್ಟಣವೆಲ್ಲ ಕಗ್ಗತ್ತಿಲಿನಿಂದ ಆವರಿಸುತ್ತದೆ.

ಸ್ಥಳೀಯ ಮಾಜಿಗೌಡರ ಮನೆಯ ಎದುರು, ಹೊಸ್ ಬಸ್ ನಿಲ್ದಾಣದ ಸಮೀಪ, ಪೊಲೀಸ್ ಠಾಣೆಯ ಸಮೀಪದ ರಸ್ತೆಯ ಬದಿಯಲ್ಲಿ, ಹಳೆ ಬಸ್ ನಿಲ್ದಾಣ, ಬೋಲ್ಡೋಜರ್ ನಗರ, ಕಾಯಿಪಲ್ಯೆ ಮಾರುಕಟ್ಟೆ, ಈರಣ್ಣನ ಪಾದಗಟ್ಟಿ, ಭೋವಿ ಓಣಿ, ನಾಗಪ್ಪ ನರಗುಂದ ಅವರ ಕಾಂಪ್ಲೆಕ್ಸ್ ಹತ್ತಿರ ಸೇರಿದಂತೆ ವಿವಿಧೆಡೆ 10ಕ್ಕೂ ಹೆಚ್ಚು ಹೈಮಾಸ್ಟ್‌ ದೀಪಗಳಿದ್ದು ಸುಮಾರು ₹50 ಲಕ್ಷಕ್ಕೂ ಹೆಚ್ಚು ಖರ್ಚು ಮಾಡಲಾಗಿದೆ. ಆದರೆ 2013ರಿಂದ ಯಾವೊಂದು ಕಾರ್ಯನಿರ್ವಹಿಸುತ್ತಿಲ್ಲ. ಈ ಕುರಿತು ಪಟ್ಟಣ ಪಂಚಾಯ್ತಿಯ ಯಾವ ಅಧಿಕಾರಿಯೂ ದುರಸ್ತಿಗೆ ಮುಂದಾಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

‘2012-13ನೇ ಸಾಲಿನಲ್ಲಿ ಮಜರೆ ದ್ಯಾಂಪುರ, ಮಲ್ಲಾಪುರ, ತೋಟಗಂಟಿ, ಕೋಚಲಾಪುರ ಹಾಗೂ ಕೋಡಿಕೊಪ್ಪಕ್ಕೂ ಗ್ರಾಮಕ್ಕೊಂದರಂತೆ ಹೈಮಾಸ್ಟ್‌ ಸ್ತಂಭಗಳನ್ನು ಅಳವಡಿಸಿದ್ದು ಅವುಗಳು ಸಹ ಒಂದೇ ವರ್ಷದಲ್ಲಿ ದುರಸ್ತಿಗೆ ಬಂದಿವೆ. ಆದರೆ ಇಲ್ಲಿಯವರೆಗೆ ಯಾರೂ ಕಾಳಜಿ ವಹಿಸಿಲ್ಲ’ ಎಂದು ಹಲಗೇರಿ ಓಣಿಯ ಹಿರಿಯ ರಾಜೇಂದ್ರ ಜಕ್ಕಲಿ ಹೇಳಿದರು.

‘ಈ ಕುರಿತು ಪಟ್ಟಣ ಪಂಚಾಯ್ತಿ ಸಿಬ್ಬಂದಿಯಿಂದ ವರದಿ ಪಡೆದು ಕಾರ್ಯನಿರ್ವಹಿಸದ ಹೈಮಾಸ್ಟ್‌ ದೀಪಗಳನ್ನು ಪರಿಶೀಲಿಸಿ ಮುಂಬರುವ ದಿನಗಳಲ್ಲಿ ದುರಸ್ತಿಗೆ ಮಾಡಿಸಲಾಗುವುದು’ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಮಹೇಶ ಬಿ. ನಿಡಶೇಸಿ ತಿಳಿಸಿದರು.

ತುಕ್ಕು ಹಿಡಿದ ಸ್ವಿಚ್ ಬಾಕ್ಸ್

‘ಹೈಮಾಸ್ಟ್‌ ದೀ‍‍ಪಸ್ತಂಭ ಹಾಗೂ ಅದರ ಸ್ವಿಚ್ ಬಾಕ್ಸ್‌ಗಳು ಮಳೆ ನೀರು ಹಾಗೂ ಬಿಸಿಲಿಗೆ ತುಕ್ಕು ಹಿಡಿದು ಸಾವಿರಾರು ವರ್ಷಗಳ ಪಳಯುಳಿಕೆಯಂತೆ ಗೋಚರಿಸುತ್ತಿವೆ’ ಎಂದು ಮರಿಯಪ್ಪ ಸಿವಿ, ಉಮೇಶ ಚಲವಾದಿ, ಹನಮಪ್ಪ ತಳವಾರ, ಮಂಜುನಾಥ ಮಾದರ ದೂರಿದ್ದಾರೆ.

‘ಪ್ರತಿ ಕಂಬಕ್ಕೆ 5 ಅಡಿ ಎತ್ತರದಲ್ಲಿ ಅಳವಡಿಸಿದ್ದ ಸ್ವಿಚ್ ಬಾಕ್ಸ್‌ಗಳು ಕೆಲವು ಕಡೆಗಳಲ್ಲಿ ನೆಲಕ್ಕುರುಳಿವೆ. ಕೆಲವು ಕಳ್ಳರ ಪಾಲಾಗಿವೆ. ಈ ವಿಚಾರ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ಬಂದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ವಿದ್ಯುತ್ ಪ್ರವಹಿಸಿದ ಕಾರಣಕ್ಕಾಗಿ ಪಂಚಾಯ್ತಿ ನೌಕರರು ಶಾಶ್ವತವಾಗಿ ವಿದ್ಯುತ್ ಸಂಪರ್ಕವಾಗದಂತೆ ಲೈನ್ ಕಟ್ ಮಾಡಿ ಕೈತೊಳೆದುಕೊಂಡಿದ್ದಾರೆ’ ಎಂದು ಆರೋಪ ಮಾಡಿದ್ದಾರೆ.

-----

ಪಟ್ಟಣ ಪಂಚಾಯ್ತಿ ಆಡಳಿತಾಧಿಕಾರಿ, ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದ್ದು, ಗ್ರಾಮದ ತುಂಬ ಕತ್ತಲು ಆವರಿಸಿದೆ.
ದಾವುದ್ ಅಲಿ ಕುದರಿ
ಪಟ್ಟಣ ಪಂಚಾಯ್ತಿ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.