ADVERTISEMENT

ಸಂಘಟನೆಯಿಂದಷ್ಟೇ ಬಲಿಷ್ಠರಾಗಲು ಸಾಧ್ಯ: ಸಚಿವ

ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿಯವರ 28ನೇ ವರ್ಧಂತಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 4:24 IST
Last Updated 1 ಫೆಬ್ರುವರಿ 2026, 4:24 IST
ಗದಗ ನಗರದ ಕುರಹಟ್ಟಿಪೇಟೆ ಹತ್ತಿರದ ವೀರಭಿಕ್ಷಾವತಿ ನೀಲಕಂಠ ಮಠದಲ್ಲಿ ಶನಿವಾರ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿಯವರ 28ನೇ ವರ್ಧಂತಿ ಮಹೋತ್ಸವ ಹಾಗೂ ನವೀಕೃತಗೊಂಡ ಮಠದ ಉದ್ಘಾಟನೆ ಕಾರ್ಯಕ್ರಮ ನಡೆಯಿತು
ಗದಗ ನಗರದ ಕುರಹಟ್ಟಿಪೇಟೆ ಹತ್ತಿರದ ವೀರಭಿಕ್ಷಾವತಿ ನೀಲಕಂಠ ಮಠದಲ್ಲಿ ಶನಿವಾರ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿಯವರ 28ನೇ ವರ್ಧಂತಿ ಮಹೋತ್ಸವ ಹಾಗೂ ನವೀಕೃತಗೊಂಡ ಮಠದ ಉದ್ಘಾಟನೆ ಕಾರ್ಯಕ್ರಮ ನಡೆಯಿತು   

ಗದಗ: ‘ಬೆಟಗೇರಿ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಕುರುಹಿನಶೆಟ್ಟಿ ಕಲ್ಯಾಣ ಮಂಟಪ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಿರುವ ₹25 ಲಕ್ಷ ಅನುದಾನವನ್ನು ಮಾರ್ಚ್‌ ಒಳಗೆ ಒದಗಿಸಿಕೊಡಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.

ನಗರದ ಕುರಹಟ್ಟಿಪೇಟೆ ಹತ್ತಿರದ ವೀರಭಿಕ್ಷಾವತಿ ನೀಲಕಂಠ ಮಠದಲ್ಲಿ ಶನಿವಾರ ನಡೆದ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿಯವರ 28ನೇ ವರ್ಧಂತಿ ಮಹೋತ್ಸವ ಹಾಗೂ ನವೀಕೃತಗೊಂಡ ಮಠದ ಉದ್ಘಾಟನೆ ಕಾರ್ಯಕ್ರಮದಲ್ಲಿ  ಮಾತನಾಡಿದರು.

‘ನೇಕಾರಿಕೆ ಕೌಶಲ ಆಧರಿತ ವೃತ್ತಿ. ಇಂತಹ ನೇಕಾರಿಕೆ ವೃತ್ತಿಯಲ್ಲಿ ತೊಡಗಿರುವ ಕುರುಹಿನಶೆಟ್ಟಿ, ಪದ್ಮಸಾಲಿ ಹಾಗೂ ದೇವಾಂಗ ಸಮಾಜದ ಜನರು ಸಂಘಟಿತರಾಗಬೇಕಿದೆ. ನೇಕಾರರೆಲ್ಲ ಒಂದಾಗಿ, ತಮ್ಮ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಮುಂದಾಗಬೇಕು. ನೇಕಾರರು ರೈತರಂತೆ ಗಟ್ಟಿ ಧ್ವನಿ ಹೊಂದಿದಾಗ ಮಾತ್ರ ಸರ್ಕಾರದ ಗಮನ ಸೆಳೆದು ತಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯವಾಗಲಿದೆ’ ಎಂದರು.

‘ಇಲ್ಲಿನ ಕುರುಹಿನಶೆಟ್ಟಿ ಮಠದ ಜತೆಗೆ ತುಂಬ ಹಿಂದಿನಿಂದಲೂ ಆತ್ಮೀಯ ಸಂಬಂಧ ಹೊಂದಿದ್ದೇನೆ. ಬಾಲ್ಯದಲ್ಲಿ ನಾನು, ಸ್ನೇಹಿತ ಬಾರಕೇರ ಅವರ ಜತೆಗೆ ನಿರಂತರವಾಗಿ ಮಠಕ್ಕೆ ಬರುತ್ತಿದ್ದೆ. ಸ್ನೇಹಿತ ಬಾರಕೇರ ಅವರು ಹಿಂದಿನ ಶ್ರೀಗಳ ಜತೆಗೆ ಆಧ್ಯಾತ್ಮ ಮತ್ತು ಧರ್ಮದ ಬಗ್ಗೆ ಚರ್ಚೆ ಮಾಡುತ್ತಿದ್ದರು’ ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ,  ‘₹1.20 ಕೋಟಿ ವೆಚ್ಚದಲ್ಲಿ ಕುರುಹಿನಶೆಟ್ಟಿ ಮಠದ ನವೀಕರಣ ಮಾಡಿರುವುದರಲ್ಲಿ ನೇಕಾರರ ಸ್ವಾಭಿಮಾನದ ಬದುಕು ಕಾಣಿಸುತ್ತದೆ. ತಾವು ದುಡಿದಿದ್ದರಲ್ಲಿ ಸ್ವಲ್ಪ ಉಳಿತಾಯ ಮಾಡಿ, ಸರ್ಕಾರದ ಅನುದಾನ ಇಲ್ಲದೇ ಇಂತಹ ಬೃಹತ್‌ ಮಟ್ಟದ ಮಠ ನವೀಕರಣ ಮಾಡಿರುವ ಸಾಧನೆ ಕುರುಹಿನಶೆಟ್ಟಿ ಸಮುದಾಯಕ್ಕೆ ಸಲ್ಲಲಿದೆ. ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನು ಉಜ್ವಲವಾಗಿ ಬೆಳಗಿಸಬೇಕು’ ಎಂದರು.

ಕುರುಹಿನಶೆಟ್ಟಿ ವರಿಷ್ಠ ಮಂಡಳದ ಅಧ್ಯಕ್ಷ ಮಲ್ಲಿಕಾರ್ಜುನ ಐಲಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ಮಠದ ನವೀಕರಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಆರಂಭದಲ್ಲಿ ಮೊದಲ ಮಹಡಿ ಕಟ್ಟುವ ಯೋಜನೆ ರೂಪಿಸಲಾಗಿತ್ತು. ಆದರೆ, ಸಮಾಜದವರ ಸಹಕಾರ ಮತ್ತು ಪ್ರೋತ್ಸಾಹದಿಂದಲೇ ಮೂರು ಮಹಡಿ ನಿರ್ಮಿಸಲಾಗಿದೆ. ಇದರ ಶ್ರೇಯಸ್ಸು ಸಮಾಜಕ್ಕೆ ಸಲ್ಲಲಿದೆ. ಶ್ರೀಗಳು ಇದೀಗ ಮಠದಲ್ಲಿ ಕೂರದೇ ಸಮಾಜ ಸಂಘಟನೆಯಲ್ಲಿ ತೊಡಗಿದ್ದಾರೆ. ಶ್ರೀಗಳು ಬಂದಾಗ ಅವರಿಗೆ ಅಗತ್ಯ ಸಹಕಾರ, ಪ್ರೋತ್ಸಾಹ ನೀಡಬೇಕು’ ಎಂದು ಮನವಿ ಮಾಡಿದರು.

ಕುರುಹಿನಶೆಟ್ಟಿ ಸಮಾಜದ ನೀಲಕಂಠ ಮಠದ ಮೂಲ ಪೀಠಾಧೀಶ್ವರ ನಾಲ್ಮಡಿ ನೀಲಕಂಠ ಪಟ್ಟದಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುರುಹಿನಶೆಟ್ಟಿ ನೇಕಾರ ಅಭಿವೃದ್ಧಿ ಸಂಘದ ಅಧ್ಯಕ್ಷ ದೇವೇದ್ರಪ್ಪ ಗೋಟೂರ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಎಂ. ಮಲ್ಲಿಕಾರ್ಜುನ ನಾಗಪ್ಪ, ಎಂ.ಆರ್.ರಮೇಶ, ಬೈಜುರಾಮ್ ಬಿ.ಎಸ್, ಕೇಶವ ಪ್ರಸಾದ, ಜಿ.ಸೋಮಶೇಖರ, ಬಿ. ಲಿಂಗೇಶ್ವರ, ಪುಟ್ಟಸ್ವಾಮಿ ಶೆಟ್ಟಿ, ಅನೂಪಕುಮಾರ ಬುಗಡೆ, ನಿಂಗಪ್ಪ ಚೇಗೂರ, ಜಿ. ರಮೇಶ, ಮುರಳೀಧರ ಮಾಚಾನಿ, ಶ್ರೀನಿವಾಸ ಕರಿ, ಶಂಕರ ಕಾಕಿ, ಸದಾನಂದ ಉಪ್ಪಳದ, ಶಂಕರಪ್ಪ ಮಾದಗುಂಡಿ, ನಾಗರಾಜ ಆಮ್ರದ, ವಾಸು ಜೋಗಿ, ಗೋಪಿನಾಥ ತುಕ್ಕಾ, ಶ್ರೀನಿವಾಸ ತಟ್ಟಿ, ಶಂಕರ ಉಪ್ಪಳದ, ನಾರಾಯಣ ಕುಣಗೇರಿ ಇದ್ದರು.

ರಕ್ಷಿತಾ ಪ್ರಾರ್ಥನಾ ಗೀತೆ ಹಾಡಿದರು. ತಾರಾ ಕೊಟ್ರೇಶ ಐಲಿ ಸ್ವಾಗತಿಸಿದರು. ಸಂಗಮೇಶ ಚೇಗೂರ ಹಾಗೂ ಸುವರ್ಣ ಕಾಮಾರ್ತಿ ನಿರೂಪಿಸಿದರು.

ಮೆರವಣಿಗೆಯಲ್ಲಿ ಪೂರ್ಣಕುಂಭದೊಂದಿಗೆ ಸಾಗಿದ ಮಹಿಳೆಯರು
ಬೆಟಗೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕುರುಹಿನಶೆಟ್ಟಿ ಕಲ್ಯಾಣ ಮಂಟಪ ಕಾಮಗಾರಿಗೆ ಈಗಾಗಲೇ ₹75 ಲಕ್ಷ ಅನುದಾನ ನೀಡಿದ್ದೇನೆ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ ₹25 ಲಕ್ಷ ಅನುದಾನವನ್ನು ಮಾರ್ಚ್‌ ಒಳಗಾಗಿ ಬಿಡುಗಡೆಗೊಳಿಸಲಾಗುವುದು
ಎಚ್‌.ಕೆ.ಪಾಟೀಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.