ಮುಂಡರಗಿ: ದೇಶದಾದ್ಯಂತ ಬಣ್ಣದೋಕುಳಿಯಾಟವು ಹೋಳಿ ಹುಣ್ಣಿಮೆಯ ಪ್ರಮುಖ ಭಾಗವಾಗಿದ್ದು, ಸ್ತ್ರೀ ಪುರುಷರೆಂಬ ಭೇದವಿಲ್ಲದೆ ಬಣ್ಣ ಎರಚಿಕೊಂಡು ಸಂಭ್ರಮಿಸುವುದು ಸರ್ವೇ ಸಾಮಾನ್ಯ.
ಆದರೆ, ಮುಂಡರಗಿ ಪಟ್ಟಣ ಹಾಗೂ ಅದರ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ರತಿ, ಮನ್ಮಥರ ಪ್ರತಿಷ್ಠಾಪನೆ, ಕಾಮ ದಹನ ಹಾಗೂ ಬಣ್ಣದೋಕುಳಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಟ್ಟಣದ ಕನಕಪ್ಪನ ಗುಡ್ಡದ ಮೇಲಿರುವ ಲಕ್ಷ್ಮೀಕನಕನರಸಿಂಹ ದೇವರಿರುವ ಕಾರಣದಿಂದ ಇಲ್ಲಿ ಹೋಳಿ ಹುಣ್ಣಿಮೆಯ ಸಡಗರ ಹಾಗೂ ಸಂಭ್ರಮವಿಲ್ಲ.
ಹೋಳಿ ಹುಣ್ಣಿಮೆಯಿಂದ ನಿರಂತರವಾಗಿ ಐದು ದಿನಗಳ ಕಾಲ ಲಕ್ಷ್ಮೀಕನಕನರಸಿಂಹನ ಜಾತ್ರೆ ಹಾಗೂ ಲಕ್ಷ್ಮಿ ಹಾಗೂ ಕನಕನರಸಿಂಹನ ಕಲ್ಯಾಣ ಕಾರ್ಯ ನಡೆಯುತ್ತವೆ. ಹೋಳಿ ಹುಣ್ಣಿಮೆಯ ಪ್ರಯುಕ್ತ ಜರುಗುವ ಕಾಮ ದಹನವು ಸೂತಕದ ಸಂಕೇತವಾಗಿದ್ದು, ಈ ಸಂದರ್ಭದಲ್ಲಿ ಯಾವುದೇ ಕಲ್ಯಾಣ ಕಾರ್ಯ ಕೈಗೊಳ್ಳಲು ಬರುವುದಿಲ್ಲ. ಈ ಕಾರಣದಿಂದ ಇಲ್ಲಿ 17ನೇ ಶತಮಾನದಿಂದ ಕಾಮದಹನ ಹಾಗೂ ಬಣ್ಣದೋಕುಳಿಯನ್ನು ನಿಷೇಧಿಸಲಾಗಿದೆ.
ವಿವಿಧ ಸಂದರ್ಭಗಳಲ್ಲಿ ಪಟ್ಟಣದ ಲಕ್ಷ್ಮೀಕನಕನರಸಿಂಹ ದೇವರು ತಾಲ್ಲೂಕಿನ ಶಿರೂಳ, ರಾಮೇನಹಳ್ಳಿ, ನಾಗರಳ್ಳಿ, ಬೆಣ್ಣಿಹಳ್ಳಿ, ಮಕ್ತುಂಪುರ, ಬರದೂರು ಹಾಗೂ ತಾಂಬ್ರಗುಂಡಿ ಗ್ರಾಮಗಳಿಗೆ ತೆರಳುತ್ತಾನೆ. ಈ ಗ್ರಾಮಗಳೊಂದಿಗೆ ಲಕ್ಷ್ಮೀಕನಕನರಸಿಂಹ ಅವಿನಾಭಾವ ಸಂಬಂಧ ಹೊಂದಿದ್ದಾನೆ. ಆದ್ದರಿಂದ ಈ ಏಳು ಗ್ರಾಮಗಳಲ್ಲಿ ಗ್ರಾಮಸ್ಥರು ಕಾಮ ದಹನ ಹಾಗೂ ಬಣ್ಣದೋಕುಳಿ ಆಡುವುದಿಲ್ಲ.
ಹೋಳಿ ಹುಣ್ಣಿಮೆಯ ಬದಲಾಗಿ ಏಳು ಗ್ರಾಮಗಳಲ್ಲಿ ಯುಗಾದಿ ಅಥವಾ ಆಯಾ ಗ್ರಾಮಗಳ ಜಾತ್ರೆ ಹಾಗೂ ಉತ್ಸವಗಳಲ್ಲಿ ಬಣ್ಣದೋಕುಳಿಯಾಡುತ್ತಾರೆ.
ಹೋಳಿ ಹುಣ್ಣಿಮೆಯ ಸಮಯದಲ್ಲಿ ಲಕ್ಷ್ಮೀಕನಕನರಸಿಂಹನ ಜಾತ್ರೆ ಜರುಗುತ್ತದೆ. ಹೀಗಾಗಿ 400 ವರ್ಷಗಳಿಂದ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಏಳು ಗ್ರಾಮಗಳಲ್ಲಿ ಕಾಮದಹನ ಹಾಗೂ ಬಣ್ಣದೋಕುಳಿ ನಿಷೇಧಿಸಲಾಗಿದೆವಿ.ಎಲ್.ನಾಡಗೌಡರ ರಂಗರಾವ್ ವಂಶಸ್ಥರು ಮುಂಡರಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.