
ನರೇಗಲ್: ‘ಯಾವುದು ಹೌದು, ಅದು ಅಲ್ಲ. ಯಾವುದು ಅಲ್ಲ, ಅದು ಹೌದು’ ಎನ್ನುವ ಆತ್ಮಾನುಭಾವದ ಅಮೃತವಾಣಿಯನ್ನು ಪ್ರಪಂಚಕ್ಕೆ ಬಿಟ್ಟು ಹೋದ ನರೇಗಲ್ ಮಜರೆ ಕೋಡಿಕೊಪ್ಪ ಗ್ರಾಮದ ವೀರಪ್ಪಜ್ಜನ ರಥೋತ್ಸವವು ಬುಧವಾರ ಸಂಜೆ ಸಾವಿರಾರು ಭಕ್ತರ ನಡುವೆ ಅತ್ಯಂತ ಸಡಗರ ಹಾಗೂ ವೈಭವದಿಂದ ಜರುಗಿತು.
ಬೆಳಿಗ್ಗೆ 6 ಗಂಟೆಯಿಂದ ಜಾತ್ರೆಯ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಟ್ಟಣದ ಸಂಕನಗೌಡ್ರ ಮನೆಯಿಂದ ತೇರಿನ ಕಳಸ ಹಾಗೂ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಸಿದ್ನೇಕೊಪ್ಪ ಗ್ರಾಮದಿಂದ ಭಕ್ತಿ ಪೂರ್ವಕವಾಗಿ ಮೆರವಣಿಗೆ ಮೂಲಕ ಭಕ್ತರು ರಥಕ್ಕೆ ಹಗ್ಗ ತಂದು ಶೃಂಗರಿಸಿದರು.
ಬಳಿಕ ಸಂಜೆ 6 ಗಂಟೆಗೆ ಮಹಾರಥವನ್ನು ಭಕ್ತ ಮಹಾಸಾಗರ ಮಠದಿಂದ ಪಾದಗಟ್ಟಿಯವರೆಗೆ ವಿಜೃಂಭಣೆಯಿಂದ ಎಳೆದರು. ಮೆರವಣಿಗೆ ಉದ್ದಕ್ಕೂ ಭಕ್ತರು ಹಠಯೋಗಿ ವೀರಪ್ಪಜ್ಜನವರಿಗೆ ಜೈ, ತ್ರಿಲೋಕಜ್ಞಾನಿ ಹುಚ್ಚೀರಪ್ಪಜ್ಜಗೆ ಜೈ ಎಂದು ಜಯಘೋಷ ಹಾಕಿದರು.
ರಥೋತ್ಸವದಲ್ಲಿ ಭಜನೆ, ಜಾಂಜ್ ಮೇಳ, ಡೊಳ್ಳು ಕುಣಿತ, ಕರಡಿ ಮಜಲು, ನಂದಿಕೋಲು ನೋಡುಗರ ಗಮನ ಸೆಳೆದವು. ಭಕ್ತರು ಭಕ್ತಿ ಭಾವದಿಂದ ಉತ್ತತ್ತಿ, ಬಾಳೆಹಣ್ಣುಗಳನ್ನು ಎಸೆದು ನಮನ ಸಲ್ಲಿಸಿದರು.
ರಥವು ಯಶಸ್ವಿಯಾಗಿ ಮರಳಿ ಸ್ವಸ್ಥಳಕ್ಕೆ ಬಂದು ನಿಂತಾಗ ಚಪ್ಪಾಳೆ ತಟ್ಟಿದ ಭಕ್ತರು ಭಕ್ತಿಭಾವ ಮೆರೆದರು. ಬಳಿಕ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಕಾಯಿ ಒಡೆಸಿ, ನೈವೇದ್ಯ ಅರ್ಪಿಸಿದರು.
ವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವದ ಕಾರಣ ಹೋಬಳಿಯ ಜನರಿಗೆ ಸಂಭ್ರಮ ನೀಡಿತು. ಈ ಭಾಗದ ದೊಡ್ಡ ಜಾತ್ರೆಯಾದ ಕಾರಣ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದರು. ಜಾತ್ರೆಯ ಪ್ರಯುಕ್ತ ನರೇಗಲ್ ಹಾಗೂ ಕೋಡಿಕೊಪ್ಪ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ಮನೆ, ರಸ್ತೆಗಳು ರಂಗೋಲಿಯಿಂದ ಸಿಂಗಾರಗೊಂಡಿತ್ತು.
ಜಾತ್ರೆಗೆ ಗಜೇಂದ್ರಗಡ, ಗದಗ, ರೋಣ, ಗುಜಮಾಗಡಿ, ಜಕ್ಕಲಿ, ಮಾರನಬಸರಿ, ಹಾಲಕೆರೆ, ತೋಟಗಂಟಿ, ಡ.ಸ.ಹಡಗಲಿ, ಯರೆಬೇಲೇರಿ, ನಿಡಗುಂದಿಕೊಪ್ಪದ, ರೋಣ, ಕೊತಬಾಳ, ಅಣ್ಣಿಗೇರಿ, ಯಲಬುರ್ಗಾದ ವಿವಿಧ ಭಾಗಗಳಿಂದ ಭಕ್ತರು ಟ್ರಾಕ್ಟರ್, ಎತ್ತಿನ ಬಂಡಿ ಮತ್ತು ಪಾದಯಾತ್ರೆ ಮೂಲಕ ಬಂದು ವೀರಪ್ಪಜ್ಜನ ದರ್ಶನವನ್ನು ಪಡೆದು ಹರಕೆ ತೀರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.