
ರೋಣ (ಹೊಳೆಆಲೂರ): ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಹೃದಯ ಭಾಗದಲ್ಲಿ ಸರ್ಕಾರದ ನಿಯಮ ಉಲ್ಲಂಘಿಸಿ ಮರಳು ಅಕ್ರಮ ಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಕುರಿತು ಕ್ರಮ ವಹಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಸಮೀಪದ ಕುರುವಿನಕೊಪ್ಪ ಗ್ರಾಮದ ಸ.ನಂ 31 ಹಾಗೂ 32ರ ಪೈಕಿ 5 ಎಕರೆ ಜಮೀನಿನಲ್ಲಿ ನಡೆಯುತ್ತಿರುವ ಅಕ್ರಮ ಗಣಿ ಚಟುವಟಿಕೆ ಕುರಿತು ವೃತ್ತ ಕಂದಾಯ ನಿರೀಕ್ಷಕರು ಪರವಾನಗಿ ಪಡೆದವರಿಗೆ ಮೂರು ಬಾರಿ ನೋಟಿಸ್ ನೀಡಿದರೂ ಮರಳು ಗಣಿಗಾರಿಕೆ ಮುಂದುವರಿಸಿದ್ದಾರೆ. ಇದರಿಂದ ಸರ್ಕಾರದ ಖಜಾನೆಗೆ ಅಪಾರ ನಷ್ಟ ಉಂಟಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ.
ಕುರುವಿನಿಕೊಪ್ಪ ಗ್ರಾಮದ ಸದರಿ ಜಮೀನಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಕುರಿತು ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತಂದರು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಇಲಾಖೆ ಅಧಿಕಾರಿಗಳು ವಿಫಲರಾಗಿದ್ದಾರೆ.
ಮರಳು ಸಾಗಣೆ ಲಾರಿಗಳ ತೂಕ ಮಾಡುವ ವೇಬ್ರೀಜ್ ಕೂಡ ಕೆಲಸ ಮಾಡದ ಸ್ಥಿತಿಯಲ್ಲಿದ್ದು, ನಿಗದಿಗಿಂತ ಹೆಚ್ಚು ಮರಳು ತುಂಬಿದರೂ ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ. ಇದರಿಂದ ಹೊಳೆ ಭಾಗದ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣವಾಗಿ ಹಾಳಾಗುತ್ತಿವೆ. ಮರಳು ತುಂಬಿದ ಲಾರಿಗಳಿಗೆ ಮೇಲೆ ಹೊದಿಕೆ ಹಾಕಬೇಕು ಎಂಬ ನಿಯಮವಿದ್ದರೂ ಯಾವುದೇ ಲಾರಿಗಳು ನಿಯಮ ಪಾಲಿಸದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಕುರುವಿನಕೊಪ್ಪ ಗ್ರಾಮದ ಮರಳು ಅಕ್ರಮ ಸಾಗಣೆ ಕುರಿತು ಗದಗ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕೆ ಮೂರು ಬಾರಿ ತಂದಿದ್ದೇವೆ. ಮುಂದಿನ ಕ್ರಮವನ್ನು ಅವರೇ ಕೈಗೊಳ್ಳಬೇಕುಮುತ್ತು ಪಾಟೀಲ ಕಂದಾಯ ನಿರೀಕ್ಷಕರು