ADVERTISEMENT

ಯುವ ವೈದ್ಯರು ಐಎಂಎ ಜತೆ ಒಗ್ಗೂಡಲಿ: ಟಿ.ವೀರಭದ್ರಯ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 2:50 IST
Last Updated 22 ಜನವರಿ 2026, 2:50 IST
ಗದಗ ನಗರದ ಲಯನ್ಸ್ ಸ್ಕೂಲ್ ಪ್ರಾಂಗಣದಲ್ಲಿ ನಡೆದ ಐಎಂಎ ಶತಮಾನೋತ್ಸವದ ವರ್ಷಾಚರಣೆ, ಲಾಂಛನ ಅನಾವರಣ ಕಾರ್ಯಕ್ರಮವನ್ನು ಐಎಂಎ ಅಧ್ಯಕ್ಷ ಟಿ.ವೀರಭದ್ರಯ್ಯ ಉದ್ಘಾಟಿಸಿದರು
ಗದಗ ನಗರದ ಲಯನ್ಸ್ ಸ್ಕೂಲ್ ಪ್ರಾಂಗಣದಲ್ಲಿ ನಡೆದ ಐಎಂಎ ಶತಮಾನೋತ್ಸವದ ವರ್ಷಾಚರಣೆ, ಲಾಂಛನ ಅನಾವರಣ ಕಾರ್ಯಕ್ರಮವನ್ನು ಐಎಂಎ ಅಧ್ಯಕ್ಷ ಟಿ.ವೀರಭದ್ರಯ್ಯ ಉದ್ಘಾಟಿಸಿದರು   

ಗದಗ: ‘ಸಾಧಕ ಯುವ ವೈದ್ಯರನ್ನು ಐಎಂಎ ಸಂಘಟನೆಯಲ್ಲಿ ಒಗ್ಗೂಡಿಸಿ, ಅವರನ್ನು ಸಮಾಜಮುಖಿಯಾಗಿ ಕಾರ್ಯ ಮಾಡಲು ಅಣಿಗೊಳಿಸಬೇಕಿದೆ’ ಎಂದು ರಾಜ್ಯ ಐಎಂಎ ಅಧ್ಯಕ್ಷ ಟಿ.ವೀರಭದ್ರಯ್ಯ ಹೇಳಿದರು.

ನಗರದ ಲಯನ್ಸ್ ಸ್ಕೂಲ್ ಪ್ರಾಂಗಣದಲ್ಲಿ ನಡೆದ ಗದಗ ಐಎಂಎ ಶತಮಾನೋತ್ಸವದ ವರ್ಷಾಚರಣೆ, ಲಾಂಛನ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಯುವ ವೈದ್ಯರನ್ನು ಐಎಂಎ ಸದಸ್ಯರನ್ನಾಗಿಸುವ ಮತ್ತು ಅವರನ್ನು ಅವಲಂಬಿಸಿರುವ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ರೂಪಿಸಲಾದ ಯೋಜನೆಗೆ ಒಳಪಡಿಸಲು ಹಿರಿಯ ವೈದ್ಯರು ಪ್ರೇರಣೆ ನೀಡಬೇಕು. ಕೆಎಸ್‍ಎಸ್‍ಎಸ್ ಯೋಜನೆಯಡಿ ವೈದ್ಯರ ಅವಲಂಬಿತರಿಗೆ ₹1 ಕೋಟಿವರೆಗೆ ಪರಿಹಾರವಿದೆ’ ಎಂದರು.

ADVERTISEMENT

‘1926 ಡಿಸೆಂಬರ್‌ನಲ್ಲಿ ಗದಗ ಐಎಂಎ ಪ್ರಾರಂಭಗೊಂಡು ಕಳೆದ 100 ವರ್ಷಗಳವರೆಗೆ ಕ್ರಿಯಾಶೀಲತೆಯಿಂದ ಕಾರ್ಯ ಮಾಡಿಕೊಂಡು ಬಂದಿದೆ. ಶತಮಾನೋತ್ಸವದ ಸಂಭ್ರಮದಲ್ಲಿ ಸಮಾಜಮುಖಿ ಹಲವಾರು ರಚನಾತ್ಮಕ ಕಾರ್ಯಯೋಜನೆಗಳನ್ನು ಡಾ.ಶ್ರೀಧರ ಕುರಡಗಿ ಅವರ ನೇತೃತ್ವದ ತಂಡ ಸೇವೆಗೆ ಸನ್ನದ್ಧಗೊಂಡಿದೆ. ಗದುಗಿನ ಐವರು ಹಿರಿಯ ವೈದ್ಯರು ರಾಜ್ಯ ಐಎಂಎ ಅಧ್ಯಕ್ಷರಾಗಿ ಇದುವರೆಗೆ ಸೇವೆ ಸಲ್ಲಿಸಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲೂ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ ಶ್ರೇಯಸ್ಸು ಗದುಗಿಗೆ ಸಲ್ಲುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಗದಗ ಐಎಂಎ ಅಧ್ಯಕ್ಷ ಡಾ.ಶ್ರೀಧರ ವಿ.ಕುರಡಗಿ ಮಾತನಾಡಿ, ‘ಶತಮಾನೋತ್ಸವ ಕೇವಲ ಕಾಟಾಚಾರಕ್ಕೆ ಆಗದಂತೆ ರಚನಾತ್ಮಕ ಕಾರ್ಯ ಮಾಡಲು ಹಿರಿಯ ವೈದ್ಯರ ಸಲಹೆಯೊಂದಿಗೆ 2026 ವರ್ಷದಾದ್ಯಂತ ಆರೋಗ್ಯಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸಿದ್ದು, ಹಂತಹಂತವಾಗಿ ಅನುಷ್ಠಾನಗೊಳಿಸಲಾಗುವುದು’ ಎಂದರು.

ಗದಗ ತಾಲ್ಲೂಕಿನ ಪಾಪನಾಶಿ ತಾಂಡಾವನ್ನು ದತ್ತು ಗ್ರಾಮವನ್ನಾಗಿ ಪಡೆದು ಜನರ ಆರೋಗ್ಯ ಸುಧಾರಣೆಗೆ ಕ್ರಮವಹಿಸಲಾಗುವುದು. ಗದಗ ಜಿಲ್ಲೆಯ ಪತ್ರಕರ್ತರು ಹಾಗೂ ಅವರನ್ನು ಅವಲಂಬಿಸಿರುವ ಕುಟುಂಬದವರಿಗೆ ಸಮಗ್ರ ಆರೋಗ್ಯ ತಪಾಸಣೆ ಕೈಗೊಂಡು ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ಮಹಿಳೆಯರನ್ನು ಬಹುವಾಗಿ ಕಾಡುವ ಗರ್ಭ, ಸ್ತನ ಕ್ಯಾನ್ಸರ್‌ ಬಗ್ಗೆ ಜಾಗೃತಿ ಸೇರಿದಂತೆ ಮುಂತಾದ ಯೋಜನೆ ರೂಪಿಸಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಕೈಗೊಳ್ಳಲಾಗುವುದು. ಈ ಕಾರ್ಯಕ್ಕೆ ಗದುಗಿನ ಹಿರಿಯ, ಕಿರಿಯ ತಜ್ಞ ವೈದ್ಯರ ತಂಡ ಸಹಕಾರ ನೀಡಲಿದೆ ಎಂದರು.

ಐಎಂಎ ಕಾರ್ಯದರ್ಶಿ ಡಾ.ರಾಹುಲ್ ಶಿರೋಳ ಐಎಂಎ ಪ್ರಾರ್ಥನೆ ಹೇಳಿದರು. ಡಾ.ದೀಕ್ಷಾ ಪ್ರಾರ್ಥಿಸಿದರು. ಶತಮಾನೋತ್ಸವ ಸಮಿತಿಯ ಚೇರಮನ್ ಡಾ.ಎಸ್.ಆರ್.ನಾಗನೂರ ಸ್ವಾಗತಿಸಿದರು. ಖಜಾಂಚಿ ಡಾ.ಜಯರಾಜ ಪಾಟೀಲ ಧ್ವಜ ವಂದನೆ ಸಲ್ಲಿಸಿದರು. ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ.ಸುನೀತಾ ಎಸ್.ಕುರಡಗಿ ಪರಿಚಯಿಸಿದರು.

ಡಾ.ಜಿ.ಎಸ್.ಪಲ್ಲೇದ ಹಾಗೂ ಡಾ.ಸಲೀಂ ಜಮಾದಾರ ನಿರೂಪಿಸಿದರು. ಡಾ.ಪವನ್ ಪಾಟೀಲ ವಂದಿಸಿದರು.

ರಾಜ್ಯದಲ್ಲಿ ವೈದ್ಯರ ಮೇಲೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆಯಂತಹ ಪ್ರಕರಣಗಳನ್ನು ರಾಜ್ಯ ಐಎಂಎ ಗಂಭೀರವಾಗಿ ಪರಿಗಣಿಸಿದೆ
–ಟಿ.ವೀರಭದ್ರಯ್ಯ ರಾಜ್ಯ ಐಎಂಎ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.