
ಮುಂಡರಗಿ: ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಸೇವೆಗಳನ್ನು ಅಂಚೆ ಇಲಾಖೆಯ ಮೂಲಕ ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆಯಬೇಕು’ ಎಂದು ಗದಗ ವಿಭಾಗೀಯ ಅಂಚೆ ಅಧೀಕ್ಷಕ ಎಸ್.ಎಸ್.ಶಿರಹಟ್ಟಿ ಹೇಳಿದರು.
ತಾಲ್ಲೂಕಿನ ಹಮ್ಮಿಗಿಯ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಅಂಚೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಗ್ರಾಹಕರ ನಿರೀಕ್ಷೆಗೆ ತಕ್ಕಂತ ಸೇವೆ ನೀಡುವುದರಿಂದಾಗಿ ಗ್ರಾಹಕರು ತಮ್ಮ ದಿನನಿತ್ಯದ ಅಗತ್ಯಗಳಿಗೆ ಅಂಚೆ ಇಲಾಖೆ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಅಂಚೆ ಇಲಾಖೆ ಕೇವಲ ಪತ್ರ ವ್ಯವಹಾರಕ್ಕೆ ಸೀಮಿತವಾಗದೇ ಬ್ಯಾಂಕಿಂಗ್, ಉಳಿತಾಯ ಯೋಜನೆಗಳು, ವಿಮೆ, ಪಿಂಚಣಿ ವಿತರಣೆ, ಆನ್‌ಲೈನ್ ಪಾವತಿ, ಪಾರ್ಸೆಲ್ ವಿತರಣಾ ಸೇವೆ ಸೇರಿದಂತೆ ಹಲವು ಸೇವೆ ನೀಡಲಾಗುತ್ತದೆ’ ಎಂದರು.
ಐಪಿಪಿಬಿ ಮ್ಯಾನೇಜರ್ ಆನಂದ ಸಾಗರ ಮಾತನಾಡಿ, ‘ವಿದ್ಯುನ್ಮಾನ ಹಣಕಾಸು ವಹಿವಾಟು ಸೇವೆ ಕ್ಷೇತ್ರದಲ್ಲಿ ಹೊಸ ಭಾಷ್ಯ ಐಪಿಪಿಬಿ (ಇಂಡಿಯಾ ಪೊಸ್ಟ್ ಮೆಂಟ್ ಬ್ಯಾಂಕ್) ಪಡೆದುಕೊಂಡಿದೆ. ಕೇವಲ 7 ವರ್ಷದಲ್ಲಿ ದೇಶದ 10 ಕೋಟಿ ಜನರಿಗೆ ಡಿಬಿಟಿ ಸೇವೆ ಕಲ್ಪಿಸಿದೆ. ಹಾಗಾಗಿ 7 ವರ್ಷದಲ್ಲಿ ಈ ಮಹತ್ವದ ಸಾಧನೆ ತೋರಿದ ಡಿಬಿಟಿ ಬ್ಯಾಂಕ್ ಆಫ್ ಇಂಡಿಯಾ ಎಂಬ ಮಹತ್ವದ ಯೋಜನೆಗೆ ಅನುಷ್ಠಾನ ಆಗಲಿದೆ’ ಎಂದರು.
ಸಹಾಯಕ ಅಂಚೆ ಅಧೀಕ್ಷಕ ವಿ. ಸುನೀಲಕುಮಾರ, ನಾಗರಾಜ ಮದ್ದಿನ ಮಾತನಾಡಿದರು. ಬಸಯ್ಯ ಕಲ್ಮಠ ಸಾನ್ನಿಧ್ಯ ವಹಿಸಿದ್ದರು.
ಉಪ ಅಂಚೆ ಪಾಲಕ ಹಾಲಪ್ಪ ವಾಮನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಾನಂದ ಮೇಟಿ, ಸದಸ್ಯರಾದ ಎ.ಎಚ್.ಬಹದ್ದೂರದೇಸಾಯಿ, ಜಲಾನಸಾಬ ವಡ್ಡಟ್ಟಿ, ಅಂಚೆ ಸಹಾಯಕ ಮಧುಕುಮಾರ ಶಿರೋರ, ಅಂಚೆ ಮೇಲ್ವಿಚಾರಕರಾದ ರವಿ ಜಾಧವ, ನಾಗರಾಜ ವಿಭೂತಿ, ಅಮರೇಶ ರಾಠೋಡ, ಹಮ್ಮಿಗಿ ಶಾಖಾ ಅಂಚೆ ಪಾಲಕಿ ಐಶ್ವರ್ಯ ಹಿರೇಮಠ, ಅಂಚೆ ಇಲಾಖೆ ಸಿಬ್ಬಂದಿ ಅಶ್ವಿನಿ ಇನಾಮತಿ, ಹಾಲೇಶ ಹಂಸಭಾವಿ ಇದ್ದರು.
ಗ್ರಾಮದ ನೂರಾರು ಗ್ರಾಹಕರು ಅಂಚೆ ಇಲಾಖೆ ಅಂಚೆ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡು ವಿವಿಧ ಸೇವೆಗಳನ್ನು ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.