ಗದಗ: ‘ಯುರೋಪ್, ಥಾಯ್ಲೆಂಡ್, ಬ್ಯಾಂಕಾಕ್ ಸೇರಿದಂತೆ ವಿವಿಧ ದೇಶಗಳ ಪ್ರವಾಸೋದ್ಯಮ ಶೈಲಿಗಿಂತಲೂ ಭಾರತದ ಪ್ರವಾಸೋದ್ಯಮ ಕ್ಷೇತ್ರ ಶ್ರೇಷ್ಠವಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಹೇಳಿದರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಗರದ ಮಹಾತ್ಮಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದಲ್ಲಿ ಶನಿವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಕೆಲವು ದೇಶಗಳ ಪ್ರವಾಸೋದ್ಯಮದಲ್ಲಿ ಜೂಜು, ನೃತ್ಯ, ಮದ್ಯ ಒಳಗೊಂಡ ನೈಟ್ ಲೈಫ್ ಮುಖ್ಯ ಆಕರ್ಷಣೆಯಾಗಿದೆ. ಜನರಿಗೆ ಮದ್ಯ ಕುಡಿಸಿ, ರಾತ್ರಿಯಿಡಿ ಕುಣಿಸಿ ಆದಾಯ ಪಡೆಯುವುದು ಪ್ರವಾಸೋದ್ಯಮ ಅಲ್ಲ. ಸಂದರ್ಭ ಸಿಕ್ಕರೆ ಅಂತಹ ದೇಶಗಳಿಗೆ ಪ್ರವಾಸೋದ್ಯಮ ಕ್ಷೇತ್ರದ ನೈತಿಕ ಮಟ್ಟ ಉಳಿಸಿಕೊಳ್ಳಿರಿ ಎಂದು ಕಿವಿಮಾತು ಕೂಡ ಹೇಳುವೆ’ ಎಂದು ಹೇಳಿದರು.
‘ಭಾರತದ ಪ್ರವಾಸೋದ್ಯಮ ಕಲೆ, ಸಂಸ್ಕೃತಿ, ದೇವಸ್ಥಾನ ಮತ್ತು ಪರಂಪರೆಯಿಂದ ಜಗದ್ವಿಖ್ಯಾತವಾಗಿದೆ. ಸವದತ್ತಿ ಯಲ್ಲಮ್ಮನ ಕ್ಷೇತ್ರಕ್ಕೆ ಪ್ರತಿವರ್ಷ 1.25 ಕೋಟಿ ಮಂದಿ ಭೇಟಿ ನೀಡುತ್ತಾರೆ. ದಸರಾ ಸಂದರ್ಭದಲ್ಲಿ ಪ್ರಪಂಚದಲ್ಲಿರುವ ಒಟ್ಟು ದೇಶಗಳ ಪೈಕಿ ಶೇ 50ರಷ್ಟು ವಿದೇಶಿ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುತ್ತಾರೆ. ಇದು ನಮ್ಮ ದೇಶದ ಸಾಂಸ್ಕೃತಿಕ ಪ್ರವಾಸೋದ್ಯಮದ ತಾಕತ್ತು’ ಎಂದು ಹೇಳಿದರು.
‘ಪ್ರವಾಸೋದ್ಯಮ ಕ್ಷೇತ್ರ ಆದಾಯದ ದೊಡ್ಡ ಸೆಲೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಪ್ರವಾಸೋದ್ಯಮ ದುಡ್ಡಿಗಾಗಿ ಮಾಡುವುದಲ್ಲ. ಅದು ಐಷಾರಾಮಿ ಜನರ ಖುಷಿಗಾಗಿ ಇರುವ ಉದ್ಯಮ ಕೂಡ ಅಲ್ಲ. ಜನರ ಬದುಕಿನಲ್ಲಿ ಮಾನಸಿಕ ಬದಲಾವಣೆ ತರುವುದಾಗಿದೆ. ಕೋಶ ಓದು; ದೇಶ ಸುತ್ತು ಎಂಬ ನಾಣ್ಣುಡಿಯಂತೆ ದೇಶ ಸುತ್ತುವುದರಿಂದ ಜ್ಞಾನ ವೃದ್ಧಿಸುತ್ತದೆ. ದೇಶದ ಪ್ರವಾಸೋದ್ಯಮದ ಮೂಲ ಆಶಯವೇ ಜ್ಞಾನಾರ್ಜನೆಯಾಗಿದೆ’ ಎಂದು ಹೇಳಿದರು.
‘2024–2029ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ನೀತಿ ಅಡಿ ರಾಜ್ಯದಲ್ಲಿ 1,275 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಇದರಲ್ಲಿ ಗದಗ ಜಿಲ್ಲೆಯ 48 ತಾಣಗಳು ಸ್ಥಾನ ಪಡೆದಿವೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದರು.
ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವ್ಯವಹಾರ ಅಧ್ಯಯನ ವಿಭಾಗದ ಸಹಪ್ರಾಧ್ಯಾಪಕ ಡಾ. ಗಣಪತಿ ಬಿ. ಸಿನ್ನೂರ ವಿಶೇಷ ಉಪನ್ಯಾಸ ನೀಡಿದರು. ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಎಸ್.ವಿ.ನಾಡಗೌಡರ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.
ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಎಡಿಸಿ ಡಾ. ದುರಗೇಶ್ ಕೆ.ಆರ್., ಗದಗ ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೋಶ್ವರ ವಿಭೂತಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ, ವಿತ್ತಾಧಿಕಾರಿ ಪ್ರಶಾಂತ್ ಜೆ.ಸಿ. ಇದ್ದರು.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಗದಗ ಜಿಲ್ಲೆಯ ಛಾಪು
‘ಲಕ್ಕುಂಡಿ ಸೂಡಿ ಡಂಬಳ ಮುಳಗುಂದ ಸೇರಿದಂತೆ ಗದಗ ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ಪ್ರವಾಸಿ ತಾಣಗಳಿದ್ದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ’ ಎಂದು ಸಚಿವ ಎಚ್.ಕೆ.ಪಾಟೀಲ ಹೇಳಿದರು. ಐತಿಹಾಸಿಕ ಲಕ್ಕುಂಡಿಯ ಶಿಲ್ಪಕಲಾ ವೈಭವ ಸದ್ಯದಲ್ಲೇ ವಿಶ್ವ ಪಾರಂಪರಿಕ ತಾಣಗಳ ತಾತ್ಕಾಲಿಕ ಪಟ್ಟಿಯಲ್ಲಿ ಸೇರ್ಪಡೆ ಆಗುವ ವಿಶ್ವಾಸ ಇದೆ. ಕಪ್ಪತ್ತಗುಡ್ಡದ ಪ್ರಾಕೃತಿಕ ಸೊಬಗು ಇಂದು ನಾಡಿನ ಅನೇಕ ಜನರ ಗಮನ ಸೆಳೆದಿದೆ. ಬಿಂಕದಕಟ್ಟಿ ಮೃಗಾಲಯದಲ್ಲಿ ಶೀಘ್ರದಲ್ಲೇ ನೈಟ್ ಸಫಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.