ADVERTISEMENT

ಖರ್ಗೆಗೆ ನಿಂದನೆ | ಸಂವಿಧಾನ ವಿರೋಧಿ ನಡೆ: ಸಾಹಿತಿ ಬಸವರಾಜ ಸೂಳಿಭಾವಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:14 IST
Last Updated 16 ಅಕ್ಟೋಬರ್ 2025, 5:14 IST
ಬಸವರಾಜ ಸೂಳಿಭಾವಿ
ಬಸವರಾಜ ಸೂಳಿಭಾವಿ   

ಗದಗ: ‘ತಮಿಳುನಾಡಿನಲ್ಲಿ ಧಾರ್ಮಿಕ ಸಂಘಟನೆಗಳು ಸರ್ಕಾರದ ಜಾಗವನ್ನು ಬಳಕೆ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ. ಅದೇರೀತಿ, ಕರ್ನಾಟಕದಲ್ಲಿ ಕೂಡ ಕಾಯ್ದೆ ಜಾರಿಗೆ ತರಬೇಕು’ ಎಂದು ಸಾಹಿತಿ ಬಸವರಾಜ ಸೂಳಿಭಾವಿ ಆಗ್ರಹಿಸಿದರು.

‘ಸಚಿವ ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ಆರ್‌ಎಸ್ಎಸ್ ನಿಷೇಧ ಮಾಡಬೇಕು ಎಂದು ಹೇಳಿಲ್ಲ. ಸರ್ಕಾರಿ ಜಾಗದಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ಮಾಡಬಾರದು ಅಂತ ಹೇಳಿದ್ದಾರೆ. ಆದರೆ, ಅವರ ಮೇಲೆ ವೈಯಕ್ತಿಕ ದಾಳಿ ಹಾಗೂ ನಿಂದನೆ ಮಾಡಲಾಗುತ್ತಿದೆ. ಇದು ಸಂವಿಧಾನ ವಿರೋಧಿ ನಡೆ’ ಎಂದು ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ 100 ವರ್ಷಗಳನ್ನು ಪೂರೈಸಿದೆ. ಆದರೆ, ಈ ಸಂಘಟನೆ ಇನ್ನೂ ನೋಂದಣಿ ಆಗಿಲ್ಲ. ಈ ಸಂಘಟನೆ ದೇಶದ ಸಹಕಾರ ಸಂಘ ಹಾಗೂ ಕಾನೂನಿನ ವ್ಯಾಪ್ತಿಯಲ್ಲಿ ಬರುವುದಿಲ್ಲ. ದೇಶಕ್ಕಿಂತ ದೊಡ್ಡವರು ನಾವು ಎನ್ನುವ ಮನೋಭಾವ ಆರ್‌ಎಸ್‌ಎಸ್‌ನವರಲ್ಲಿದೆ. ಸಂವಿಧಾನ ಮತ್ತು ದೇಶಕ್ಕೆ ಅಗೌರವ ತೋರಿಸುವ ಕಾರಣಕ್ಕಾಗಿ ಇನ್ನೂ ನೋಂದಣಿ ಆಗಿಲ್ಲ. ನೂರು ವರ್ಷದ ಸಂಘಟನೆಗೆ ಹಣಕಾಸಿನ ಮೂಲದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಇಲ್ಲ’ ಎಂದರು.

ADVERTISEMENT

‘ಕಳೆದ 50 ವರ್ಷಗಳಿಂದ ಆರ್‌ಎಸ್‌ಎಸ್ ತನ್ನ ಕಾರ್ಯಾಲಯದ ಮೇಲೆ ಭಾರತದ ಧ್ವಜ ಹಾರಿಸಿಲ್ಲ. 100 ವರ್ಷಗಳ ಅವಧಿಯ ಪಥಸಂಚಲನ ಮಾಡುವ ಸಂದರ್ಭದಲ್ಲಿಯೂ ಒಂದೇ ಒಂದು ತ್ರಿವರ್ಣ ಧ್ವಜ ಪ್ರದರ್ಶನ ಮಾಡಲಿಲ್ಲ. ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಕೆಲಸವನ್ನು ಈ ಸಂಘ ಮಾಡುತ್ತಿಲ್ಲ. ಈ ಧೋರಣೆಯನ್ನು ಪ್ರಶ್ನೆ ಮಾಡಬೇಕಿದೆ’ ಎಂದರು.

ಚಿಂತಕ ಅಶೋಕ ಬರಗುಂಡಿ ಮಾತನಾಡಿ, ‘ಸಂವಿಧಾನ ಉಳಿಸುವ ನಿಟ್ಟಿನಲ್ಲಿ ಮತೀಯ ಭಾವನೆ ಬೆಳೆಸುವ ಸಂಸ್ಥೆಗೆ ರಾಜ್ಯ ಸರ್ಕಾರ ನಿರ್ಬಂಧ ಹೇರಬೇಕು. ಸರ್ಕಾರಿ ಜಾಗದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಸುತ್ತಾ ಹೋದರೆ ಸಂವಿಧಾನಕ್ಕೆ ಗೌರವ ಇರುವುದಿಲ್ಲ’ ಎಂದರು.

‘ಪೂರ್ವಾನುಮತಿ ಪಡೆಯದೇ ಆರ್‌ಎಸ್‌ಎಸ್ ತನ್ನ ಚಟುವಟಿಕೆಯನ್ನು ದೇಶದಲ್ಲಿ ಮಾಡುತ್ತಿದೆ. ಕೂಡಲೇ ಇಂತಹ ಸಂಘಟನೆಗೆ ನಿರ್ಬಂಧ ಹೇರಬೇಕು’ ಎಂದು ಆಗ್ರಹಿಸಿದರು. 

ಪ್ರಗತಿಪರರಾದ ಮುತ್ತು ಬಿಳೆಯಲಿ, ಬಿ.ಕೆ.ಪೂಜಾರ, ಬಾಲರಾಜ ಅರಬರ, ಯಲ್ಲಪ್ಪ ರಾಮಗೇರಿ, ಪರಸು ಕಾಳೆ, ಅನಿಲ ಕಾಳೆ, ಬಸವರಾಜ ಬಿಳೆಯಲಿ ಇದ್ದರು.

ಕೈಯಲ್ಲಿ ಲಾಠಿ ಹಿಡಿದು ಸಮಾಜದಲ್ಲಿ ಭಯ ಹುಟ್ಚಿಸುವ ಕೆಲಸವನ್ನು ಆರ್‌ಎಸ್‌ಎಸ್ ಮಾಡುತ್ತಿದೆ. ಸರ್ಕಾರಿ ಜಾಗದಲ್ಲಿ ಸಂಘದ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ತನ್ನ ಅಧಿಕಾರ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಬೇಕು
ಬಸವರಾಜ ಸೂಳಿಭಾವಿ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.