ಗದಗ: ‘ತಂದೆ, ಮಕ್ಕಳು, ಪರಿವಾರವನ್ನು ತನ್ನ ತಾಳ್ಮೆಯಿಂದಲೇ ನೋಡಿಕೊಂಡು ಸಂಸ್ಕಾರವನ್ನು ನೀಡುವ ಮಹಾಶಕ್ತಿ ಮಹಿಳೆ. ‘ಮಹಿ’ ಎಂದರೆ ಭೂಮಿ. ‘ಇಳೆ’ ಎಂದರೂ ಭೂಮಿ. ಅಂತೆಯೇ ಮಹಿಳೆ ಭೂಮಿ ತೂಕದವಳು. ಮಕ್ಕಳಿಗೆ ಅವಳ ಅನುಕರಣೆಯೇ ಸಂಸ್ಕಾರ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಆಶ್ರಯದಲ್ಲಿ ನಗರದ ತೋಂಟದಾರ್ಯ ಮಠದಲ್ಲಿ ಈಚೆಗೆ ನಡೆದ 2,736ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ತಾಯಿಯಾದವಳು ಮಕ್ಕಳಿಗೆ ಸಂಸ್ಕಾರದ ಪ್ರತಿಬಿಂಬ, ಆದರ್ಶ ಮತ್ತು ಧೈರ್ಯ. ಬಸವಾದಿ ಶಿವಶರಣರು ಜಾತಿ ಮತ ಪಂಥ ಭೇದ ಅಳಿಸಿ ಸಮಾನತೆಯ ಭಾವವನ್ನು ಭಿತ್ತಿದರು. ಪುರುಷ ಪ್ರಧಾನ ಎಂಬುದು ಬದಲಾವಣೆ ಆಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿ ಇದ್ದಾರೆ’ ಎಂದು ಹೇಳಿದರು.
ಅಧ್ಯಾತ್ಮ ವಿದ್ಯಾಶ್ರಮದ ಶರಣೆ ಮೈತ್ರಾದೇವಿ ಮಾತನಾಡಿ, ‘ಒಡಹುಟ್ಟಿದ ಅಕ್ಕನಿಗಾಗಿ ಕ್ರಾಂತಿ ಮಾಡಿದ ಬಸವಣ್ಣನವರು ಮಹಿಳೆಯರಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಇಂದು ಎಲ್ಲ ರಂಗಗಳಲ್ಲಿ ಮಹಿಳೆಯರು ಸಮಾನವಾದ ಅವಕಾಶವನ್ನು ಪಡೆಯಲು ಸಾಧ್ಯವಾಗಿದೆ’ ಎಂದರು.
ಬಾಗಲಕೋಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಸುಮಂಗಲಾ ಮೇಟಿ ಮಾತನಾಡಿ, ‘ಮಹಿಳೆ ಮನಸ್ಸು ಮಾಡಿದರೆ ಜಗತ್ತನ್ನು ಬದಲಾವಣೆ ಮಾಡುವ ಶಕ್ತಿಯಿದೆ’ ಎಂದರು.
ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ ಸುಧಾ ಹುಚ್ಚಣ್ಣನವರ ಹಾಗೂ ಗದಗ ಜಿಲ್ಲೆಯ ಏಳು ತಾಲ್ಲೂಕುಗಳ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳು ಇದ್ದರು.
ಸಾರಿಗೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡುತ್ತಿರುವ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀದೇವಿ ಕೇಸರಪ್ಪನವರ ಹಾಗೂ ಆಟೊರಿಕ್ಷಾ ಚಾಲಕಿ ರೇಖಾ ಸಂತೋಷ ಹುಲ್ಲೂರು ಅವರನ್ನು ಸನ್ಮಾನಿಸಲಾಯಿತು.
ಪಂಚಾಕ್ಷರಿ ಗವಾಯಿಗಳ ಸಂಗೀತ ಮಹಾವಿದ್ಯಾಲಯ ಗದಗ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ವಚನ ಸಂಗೀತ ನಡೆಸಿದರು. ಸಾಕ್ಷಿ ಜೋಗಿನ ಧರ್ಮಗ್ರಂಥ ಪಠಿಸಿದರು. ವೀಣಾ ತುಪ್ಪದ ವಚನ ಚಿಂತನ ನಡೆಸಿಕೊಟ್ಟರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಉಮೇಶ್ ಪುರದ ಹಾಗೂ ವಿದ್ಯಾ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹ ಕಾರ್ಯದರ್ಶಿ ಸೋಮನಾಥ ಪುರಾಣಿಕ, ನಾಗರಾಜ್ ಹಿರೇಮಠ, ಸಹಕಾರ್ಯದರ್ಶಿ ಮಹೇಶ್ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿಯ ಚೇರ್ಮನ್ ಐ.ಬಿ. ಬೆನಕೊಪ್ಪ, ಸಹಚೇರ್ಮನ್ ಶಿವಾನಂದ ಹೊಂಬಳ ಹಾಗೂ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.