ADVERTISEMENT

ಜನತಾ ಪ್ಲಾಟ್; ಬಯಲುಶೌಚ ಜೀವಂತ

ಸೌಲಭ್ಯ ವಂಚಿತ ನಿವಾಸಿಗಳು, ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 5:16 IST
Last Updated 28 ಏಪ್ರಿಲ್ 2021, 5:16 IST
ಗಜೇಂದ್ರಗಡದ ಜನತಾ ಪ್ಲಾಟ್‌ನಲ್ಲಿರುವ ಮುಖ್ಯ ಚರಂಡಿಯ ದುರವಸ್ಥೆ.
ಗಜೇಂದ್ರಗಡದ ಜನತಾ ಪ್ಲಾಟ್‌ನಲ್ಲಿರುವ ಮುಖ್ಯ ಚರಂಡಿಯ ದುರವಸ್ಥೆ.   

ಗಜೇಂದ್ರಗಡ: ಪಟ್ಟಣದ 22ನೇ ವಾರ್ಡ್‌ನ ಜನತಾ ಪ್ಲಾಟ್‌ನಲ್ಲಿ ಸುಸಜ್ಜಿತ ಚರಂಡಿ, ರಸ್ತೆಗಳಿಲ್ಲದ ಕಾರಣ ಅಲ್ಲಿನ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದು, ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಜನತಾ ಪ್ಲಾಟ್‌ನಲ್ಲಿ 120ಕ್ಕೂ ಹೆಚ್ಚು ಬಡ ಕುಟುಂಬಗಳು ವಾಸವಾಗಿದ್ದು, ಅಲ್ಲಿನ ನಿವಾಸಿಗಳು ಕೂಲಿ, ಸಣ್ಣ ಪುಟ್ಟ ವ್ಯಾಪಾರ ಮಾಡಿ ಬದುಕು ನಡೆಸುತ್ತಿದ್ದಾರೆ. ಆದರೆ ಈ ಬಡಾವಣೆಯಲ್ಲಿನ ಹಲವು ಚರಂಡಿಗಳು ಕಟ್ಟಿಕೊಂಡು ದುರ್ನಾತ ಬೀರುತ್ತಿವೆ. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟ, ಅದು ಸಾಲದೆಂಬಂತೆ ಕೆಲ ಮನೆಗಳ ಮುಂದೆಯೇ ಜನರು ಬಯಲು ಶೌಚಕ್ಕೆ ಹೋಗುವುದರಿಂದ ಅದರ ದುರ್ನಾತವನ್ನು ಅಲ್ಲಿನ ನಿವಾಸಿಗಳು ಸಹಿಸಿಕೊಂಡು ಜೀವನ ನಡೆಸುವಂತಾಗಿದೆ. ಬಡಾವಣೆ ತುಂಬ ಹಂದಿಗಳ ಕಾಟವೂ ಹೆಚ್ಚಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರುತ್ತಿದ್ದಾರೆ.‌

ಈ ಬಡಾವಣೆ ಹಿಂದೆ ಪಟ್ಟಣದ ಪ್ರಮುಖ ಚರಂಡಿಗಳ ನೀರು ಹರಿದು ಹೋಗುತ್ತದೆ. ಆದರೆ ವ್ಯವಸ್ಥಿತವಾದ ಚರಂಡಿ ನಿರ್ಮಿಸದ ಕಾರಣ ಎಲ್ಲೆಂದರಲ್ಲಿ ಮುಳ್ಳು ಕಂಟಿಗಳು ಬೆಳೆದಿದ್ದು, ಕೊಳಚೆ ನೀರು ನಿಂತು ಗಬ್ಬೆದ್ದು ನಾರುವುದರ ಜೊತೆಗೆ ಹಂದಿಗಳ ಆವಾಸ ಸ್ಥಾನವಾಗಿದೆ.

ADVERTISEMENT

‘ನಮ್ಮ ಮನೆ ಮುಂದೆಯೇ ಪುರಸಭೆಯವರು ಶೌಚಾಲಯ ನಿರ್ಮಿಸಿದ್ದಾರೆ. ಅಲ್ಲದೆ ಮನೆ ಮುಂದಿನ ಬಯಲಿನಲ್ಲಿ ಜನರು ಶೌಚಕ್ಕೆ ಹೋಗುತ್ತಾರೆ. ಇದರಿಂದಾಗಿ ನಾವು ಮನೆಯಲ್ಲಿ ಕುಳಿತು ಊಟ ಮಾಡದಂತಹ ಸ್ಥಿತಿ ಇದೆ’ ಎನ್ನುತ್ತಾರೆ ಎಂದು ಜನತಾ ಪ್ಲಾಟ್ ನಿವಾಸಿ ರುಕ್ಷ್ಮೀಣಿ ಗೊಂದಳೆ ತಮ್ಮ ಅಳಲು ತೋಡಿಕೊಂಡರು.

‘ಮನೆಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದೇವೆ. ಅಲ್ಲದೆ ಬಹುತೇಕ ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳಿದ್ದರೂ ಜನರು ಬಳಸುತ್ತಿಲ್ಲ. ಬದಲಾಗಿ ನಮ್ಮ ಮನೆಯ ಮುಂದಿನ ಬಯಲಿನಲ್ಲಿ ಶೌಚಕ್ಕೆ ಹೋಗುತ್ತಾರೆ. ಇದರಿಂದ ತೊಂದರೆಯಾಗುತ್ತಿದೆ’ ಎನ್ನುತ್ತಾರೆ ಜನತಾ ಪ್ಲಾಟ್ ನಿವಾಸಿ ನಾಗರಾಜ.

‘ಪುರಸಭೆಯವರು ನಮ್ಮ ಬಡಾವಣೆಯ ಹಿಂದಿರುವ ದೊಡ್ಡ ಚರಂಡಿಗೆ ಕಾಂಕ್ರಿಟ್ ಚರಂಡಿ ನಿರ್ಮಿಸಿ ಅದರ ಮೇಲೆ ಸಮುದಾಯ ಶೌಚಾಲಯ ನಿರ್ಮಿಸಬೇಕು’ ಎಂದರು.

ನಮ್ಮ ಮನೆಗೆ ಬೀಗರೂ ಸಹ ಬರುವುದಿಲ್ಲ. ನೀವೇ ನಮ್ಮ ಊರಿಗೆ ಬಂದು ಬಿಡಿ. ನಿಮ್ಮ ಮನೆಯಲ್ಲಿ ವಾಸನೆ ಸಹಿಸಿಕೊಳ್ಳಲು ಆಗುವುದಿಲ್ಲ ಎನ್ನುತ್ತಾರೆ ನೆಂಟರು.

ರುಕ್ಷ್ಮೀಣಿ ಗೊಂದಳೆ
ಜನತಾ ಪ್ಲಾಟ್ ನಿವಾಸಿ

ಶೌಚಾಲಯ ಪ್ರಾರಂಭಿಸಲು ಸ್ಥಳೀಯರ ವಿರೋಧ ಇರುವುದರಿಂದ ಪ್ರಾರಂಭಿಸಿಲ್ಲ. ಶುಚಿತ್ವದ ಕುರಿತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು

ಲಕ್ಷ್ಮೀ ಮುಧೋಳ, ಪುರಸಭೆ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.