ADVERTISEMENT

ಮಧುಮೇಹ ತಡೆಗೆ ಜನಜಾಗೃತಿ ಜಾಥಾ

‘ಶಿಕ್ಷಣದಿಂದ ಭವಿಷ್ಯದ ರಕ್ಷಣೆ’– ಘೋಷವಾಕ್ಯ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2022, 5:37 IST
Last Updated 15 ನವೆಂಬರ್ 2022, 5:37 IST
ವಿಶ್ವ ಮಧುಮೇಹ ದಿನದ ಅಂಗವಾಗಿ ಸೋಮವಾರ ನಂದಿಕೇಶ್ವರ ನಗರದಲ್ಲಿ ಮಧುಮೇಹ ಕುರಿತು ಅರಿವು ಮೂಡಿಸುವ ಜನಜಾಗೃತಿ ಜಾಥಾಕ್ಕೆ ಡಿಎಚ್‌ಒ ಡಾ. ಜಗದೀಶ್‌ ನುಚ್ಚಿನ ಚಾಲನೆ ನೀಡಿದರು
ವಿಶ್ವ ಮಧುಮೇಹ ದಿನದ ಅಂಗವಾಗಿ ಸೋಮವಾರ ನಂದಿಕೇಶ್ವರ ನಗರದಲ್ಲಿ ಮಧುಮೇಹ ಕುರಿತು ಅರಿವು ಮೂಡಿಸುವ ಜನಜಾಗೃತಿ ಜಾಥಾಕ್ಕೆ ಡಿಎಚ್‌ಒ ಡಾ. ಜಗದೀಶ್‌ ನುಚ್ಚಿನ ಚಾಲನೆ ನೀಡಿದರು   

ಗದಗ: ‘ಅಸಾಂಕ್ರಾಮಿಕ ರೋಗಗಳಲ್ಲಿ ಮಧುಮೇಹ ಪ್ರಮುಖವಾಗಿದ್ದು, ಇದರಿಂದಾಗಿ ಕುರುಡುತನ, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು ಮತ್ತು ಅಂಗವೈಕಲ್ಯಕ್ಕೆ ತುತ್ತಾಗುವ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ’ ಎಂದು ಡಿಎಚ್‌ಒ ಡಾ. ಜಗದೀಶ್‌ ನುಚ್ಚಿನ ಕಳವಳ ವ್ಯಕ್ತಪಡಿಸಿದರು.

ವಿಶ್ವ ಮಧುಮೇಹ ದಿನದ ಅಂಗವಾಗಿ ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ರ ಆಶ್ರಯದಲ್ಲಿ ಸೋಮವಾರ ನಂದಿಕೇಶ್ವರ ನಗರದಲ್ಲಿ ನಡೆದ ಮಧುಮೇಹ ಕುರಿತು ಅರಿವು ಮೂಡಿಸುವ ಜನಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

‘ಶಿಕ್ಷಣದಿಂದ ಭವಿಷ್ಯದ ರಕ್ಷಣೆ’ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದ್ದು, ಮಧುಮೇಹ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ನೀಡಿದಲ್ಲಿ ಮಧುಮೇಹದ ತೀವ್ರತೆ ಮತ್ತು ಮಧುಮೇಹದಿಂದಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು’ ಎಂದು ತಿಳಿಸಿದರು.

ADVERTISEMENT

‘ದೇಶದಲ್ಲಿ ಸುಮಾರು 7.70 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. 2045ಕ್ಕೆ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ 13.40 ಕೋಟಿ ಆಗಬಹುದು ಎಂದು ಸಂಶೋಧನಾ ವರದಿ ತಿಳಿಸಿದೆ’ ಎಂದು ಹೇಳಿದರು.

‘ಅನಾರೋಗ್ಯಕರ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳ ಕೊರತೆ, ತಂಬಾಕು ಬಳಕೆ, ಮದ್ಯಪಾನ ಹಾಗೂ ಮಾನಸಿಕ ಒತ್ತಡದಿಂದ ಮಧುಮೇಹಿಳಗ ಸಂಖ್ಯೆ ಹೆಚ್ಚುತ್ತಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯನ್ನು ಪ್ರತಿ ಗ್ರಾಮಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್.ಸಿ.ಡಿ. ಕ್ಲಿನಿಕ್‍ಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಅಸಾಂಕ್ರಾಮಿಕ ಕಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧ ವಿತರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು 2025ರ ಒಳಗಾಗಿ ಸುಮಾರು ಶೇ 25 ಅಸಾಂಕ್ರಾಮಿಕ ಕಾಯಿಲೆಗಳಿಂದ ಮರಣ ಹೊಂದುವುದನ್ನು ತಡೆಯುವ ಗುರಿ ಹೊಂದಿದೆ ಎಂದು ತಿಳಿಸಿದರು.

ಮದರ್ ತೆರೇಸಾ ನರ್ಸಿಂಗ್ ಕಾಲೇಜು ಪ್ರಾಂಶುಪಾಲ ಶಿವಕುಮಾರ ಬಿ.ಕಾತರಕಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ರೂಪಸೇನ ಚವ್ಹಾಣ್‌ ಮಾತನಾಡಿದರು.

ಮದರ್ ಥೆರೇಸಾ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳಿಂದ ಮಧುಮೇಹ ಕುರಿತು ಅರಿವು ಮೂಡಿಸುವ ಜಾಥಾ
ಕೈಗೊಳ್ಳಲಾಯಿತು.

ಡಾ. ರವಿ ಮ. ಕಡಗಾವಿ, ಉಮೇಶ ಕರಮುಡಿ, ವಿಠ್ಠಲ ನಾಯಕ್, ಫಯಾಜ್‌ ಮಕಾನದಾರ, ಪುಷ್ಪಾ ಪಾಟೀಲ, ಗೀತಾ ಎಸ್ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.