ADVERTISEMENT

ಗದಗ| ಹೊಸ ಪೀಳಿಗೆ ಅವಿಭಕ್ತ ಕುಟುಂಬದ ಶಕ್ತಿ ಅರಿಯಿರಿ: ಹೊಸಳ್ಳಿ ಶ್ರೀ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 6:08 IST
Last Updated 3 ಫೆಬ್ರುವರಿ 2026, 6:08 IST
ಗದುಗಿನ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಲೋಕಾರ್ಪಣೆಗೊಂಡಿತು
ಗದುಗಿನ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಲೋಕಾರ್ಪಣೆಗೊಂಡಿತು   

ಗದಗ: ‘ಅವಿಭಕ್ತ ಕುಟುಂಬದಲ್ಲಿರುವ ಪ್ರೀತಿ, ಅಂತಃಕರಣ, ವಿಶಾಲ ಮನೋಭಾವ, ಒಗ್ಗಟ್ಟು ಇವುಗಳನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಜವಾಬ್ದಾರಿ ಪಾಲಕರ ಮೇಲಿದೆ’ ಎಂದು ಹೊಸಳ್ಳಿ ಬೂದೀಶ್ವರ ಸಂಸ್ಥಾನ ಮಠದ ಬೂದೀಶ್ವರ ಸ್ವಾಮೀಜಿ ಹೇಳಿದರು.

ಇಲ್ಲಿನ ವಿವೇಕಾನಂದ ನಗರದ ಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ರಾಮಪ್ಪ ರಂಗಪ್ಪ ಕಾಶಪ್ಪನವರ ಅಭಿಮಾನಿ ಬಳಗದ ಸಹಕಾರದೊಂದಿಗೆ ನಡೆದ ‘ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಅವಿಭಕ್ತ ಕುಟುಂಬವನ್ನು ಈಗಲೂ ಮುನ್ನಡೆಸುತ್ತಿರುವ ಪ್ರೀತಿ, ಬಾಂಧವ್ಯಗಳನ್ನು ಗಟ್ಟಿಯಾಗಿ ಜೋಪಾನವಾಗಿರಿಸಿಕೊಂಡಿರುವ ರಾಮಪ್ಪ ಕಾಶಪ್ಪನವರ ಕುಟುಂಬ ವರ್ಗ ಇತರರಿಗೆ ಮಾದರಿ’ ಎಂದರು.

ADVERTISEMENT

ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಿ.ಆರ್.ಪಾಟೀಲ ಗ್ರಂಥ ಬಿಡುಗಡೆ ಮಾಡಿದರು.

ಅಭಿನಂದನಾ ನುಡಿಗಳನ್ನಾಡಿದ ಗದಗ ಸಾಯಿ ಮಂದಿರದ ಸಂಸ್ಥಾಪಕ ಅಧ್ಯಕ್ಷ ಎಸ್.ಬಿ.ಶೆಟ್ಟರ, ಕಾಶಪ್ಪನವರ ಸಾಮಾಜಿಕ ಕಾರ್ಯ ಹಾಗೂ ಅವಿಭಕ್ತ ಕುಟುಂಬವನ್ನು ಮುನ್ನಡೆಸಿಕೊಂಡು ಬಂದಿರುವ ರೀತಿ ಸಮಾಜಕ್ಕೆ ಮಾದರಿ ಎಂದರು.

‘ಅವಿಭಕ್ತ ಕುಟುಂಬದ ಸಾರಥಿ’ ಗ್ರಂಥ ಬರೆದ ಅಂದಾನೆಪ್ಪ ವಿಭೂತಿ ಅವರು, ರಾಮಪ್ಪ ಕಾಶಪ್ಪನವರು ನಡೆದು ಬಂದ ಬದುಕಿನ ದಾರಿ ಹಾಗೂ ಗ್ರಂಥದ ಬಗ್ಗೆ ವಿವರಿಸಿದರು.

ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಫಕ್ಕೀರಪ್ಪ ಹೆಬಸೂರ ಆಶಯ ನುಡಿಗಳನ್ನಾಡಿದರು. ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕನಕದಾಸ ಶಿಕ್ಷಣ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಬಿ.ಎಫ್.ದಂಡಿನ ಅಧ್ಯಕ್ಷತೆ ವಹಿಸಿದ್ದರು. ಗಣ್ಯರಾದ ಶಾಂತಣ್ಣ ಕಡಿವಾಲ, ಬಿ.ಎನ್.ಯರನಾಳ, ಶಂಕರ ಹಾನಗಲ್ಲ, ಎಂ.ಎನ್.ಕಾಮನಹಳ್ಳಿ, ಎ.ಕೆ.ತಮ್ಮಣ್ಣವರ, ಮಹೇಶ ತಲೇಗೌಡ್ರ, ಎಸ್.ಎಫ್.ಜಕಬಾಳ, ಸಿದ್ಧಣ್ಣ ಪಟ್ಟಣಶೆಟ್ಟಿ, ಎ.ಟಿ.ನರೇಗಲ್ಲ, ಎಸ್.ಎಸ್.ಪಾಟೀಲ, ವಿ.ಕೆ.ಗುರುಮಠ, ಎಸ್.ಕೆ.ವಂಡಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.