ADVERTISEMENT

ಗದಗ: ಬಾಳು ಬೆಳಗುವ ಕೈವಲ್ಯಪದ್ಧತಿ ಗ್ರಂಥ

ಪತ್ರಿವನಮಠದ ಗುರು ಸಿದ್ದವೀರ ಶಿವಯೋಗಿ ಶಿವಾಚಾರ್ಯರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 8:02 IST
Last Updated 21 ನವೆಂಬರ್ 2025, 8:02 IST
ನರಗುಂದದ ಪುಣ್ಯಾರಣ್ಯ ಪತ್ರಿವನ ಮಠದಲ್ಲಿ ಛಟ್ಟಿ ಅಮವಾಸ್ಯೆ ಅಂಗವಾಗಿ ನಡೆದ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ ಕಾರ್ತೀಕೋತ್ಸವವನ್ನು ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು ಉದ್ಘಾಟಿಸಿದರು 
ನರಗುಂದದ ಪುಣ್ಯಾರಣ್ಯ ಪತ್ರಿವನ ಮಠದಲ್ಲಿ ಛಟ್ಟಿ ಅಮವಾಸ್ಯೆ ಅಂಗವಾಗಿ ನಡೆದ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ ಕಾರ್ತೀಕೋತ್ಸವವನ್ನು ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು ಉದ್ಘಾಟಿಸಿದರು    

ನರಗುಂದ: ‘ನಿಜಗುಣ ಶಿವಯೋಗಿ ಅವರು ಕವಿ ಹೃದಯ ಉಳ್ಳವರಾಗಿದ್ದರು. ಅವರು ಬರೆದ ಕೈವಲ್ಯಪದ್ಧತಿ ಗ್ರಂಥವು ಪ್ರತಿಯೊಬ್ಬರ ಬಾಳು ಬೆಳಗಲಿದೆ’ ಎಂದು ಪತ್ರಿವನಮಠದ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು. 

ಪಟ್ಟಣದ ಪುಣ್ಯಾರಣ್ಯ ಪತ್ರಿವನ ಮಠದಲ್ಲಿ ಛಟ್ಟಿ ಅಮಾವಾಸ್ಯೆ ಅಂಗವಾಗಿ ಗುರುವಾರ ನಡೆದ ನಿಜಗುಣ ಶಿವಯೋಗಿಗಳ ಜಯಂತ್ಯುತ್ಸವ ಹಾಗೂ ಕಾರ್ತೀಕೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಯೋಗಸಾಧನೆ ಮಾಡುತ್ತಿದ್ದಾಗಲೇ ತಮ್ಮ ಅನುಭವಗಳನ್ನು ಕವಿತೆಗಳ ರೂಪದಲ್ಲಿ ಹಾಡುತ್ತಿದ್ದರು. ಅವರು ರಚಿಸಿದ ಗ್ರಂಥವು ಶ್ರದ್ಧಾ, ಭಕ್ತಿಯೊಂದಿಗೆ ಧಾರ್ಮಿಕ ಕಾರ್ಯದಲ್ಲಿ ತೊಡಗಲು ಪ್ರೇರೇಪಿಸುತ್ತದೆ. ಬದುಕಿಗೆ ಮಾರ್ಗದರ್ಶನ ಮಾಡುತ್ತದೆ’ ಎಂದರು.

ADVERTISEMENT

‘ಕೈವಲ್ ಯಎಂದರೆ ಮುಕ್ತಿ, ಪದ್ಧತಿ ಎಂದರೆ ಮಾರ್ಗ ಎಂದರ್ಥ. ಈ ಗ್ರಂಥದಲ್ಲಿ ಮುಕ್ತಿ  ಪಡೆಯುವ ಮಾರ್ಗ ತೋರಿಸಿದ್ದಾರೆ. ಹೆಚ್ಚಿನ ಮೌಲ್ಯ ಹೊಂದಿರುವ ಗ್ರಂಥವನ್ನು ಎಲ್ಲರೂ ಅಧ್ಯಯನ ಮಾಡಬೇಕು’ ಎಂದು ತಿಳಿಸಿದರು.

ಕೊಣ್ಣೂರ ವಿರಕ್ತಮಠದ ಚನ್ನವಿರೇಶ್ವರ ಸ್ವಾಮೀಜಿ, ಬಸಯ್ಯಸ್ವಾಮಿ ಹಿರೇಮಠ, ದ್ಯಾಮಣ್ಣ ಸವದತ್ತಿ, ಚಂದ್ರು ಪವಾರ, ಚಂದ್ರಶೇಖರ ಹುಣಶಿಕಟ್ಟಿ ಮಾತನಾಡಿದರು. ಗುರಪ್ಪ ಸುಳ್ಳದ ಅವರನ್ನು ಸನ್ಮಾನಿಸಲಾಯಿತು.

ಉಮೇಶ ಯಳ್ಳೂರ, ಉಮೇಶ ಯಮೋಜಿ, ಯರಗುಪ್ಪಿ, ಕೊಣ್ಣೂರ, ಬಾಳಪ್ಪ ಚಕ್ರಸಾಲಿ, ರುದ್ರಗೌಡ ಹಿರೇಗೌಡ್ರ, ಮಲ್ಲಪ್ಪ ಸಿದ್ಧಗಿರಿ, ಎಂ.ಡಿ. ಗುದಗಿ, ಆರ್. ಬಿ. ಚಿನಿವಾಲರ, ಪ್ರಶಾಂತ ಅಳಗವಾಡಿ ಸೇರಿದಂತೆ ತಲೆಮೊರಬ, ಕಲಹಾಳ, ಕುರ್ಲಗೇರಿ, ಸಿದ್ಧಾಪೂರ, ಬೂದಿಹಾಳ ಗ್ರಾಮಗಳ ಭಕ್ತರು ಹಾಜರಿದ್ದರು. 

‘ದೀಪ ಪರಿಶುದ್ಧತೆ ಸಂಕೇತ’

‘ಭಾರತೀಯರ ಬದುಕನ್ನು ಉದ್ಧಾರ ಮಾಡಲು ನಿಜಗುಣ ಶರಣರು ಕೈವಲ್ಯ ಪದ್ದತಿ ಗ್ರಂಥ ಬರೆದಿದ್ದಾರೆ. ಇಂತಹ ಗ್ರಂಥಗಳು ದೀಪದಂತೆ ಪ್ರತಿಯೊಬ್ಬರ ಬದುಕನ್ನು ಬೆಳಗುತ್ತವೆ’ ಎಂದು ಬ್ಯಾಹಟ್ಟಿ ಹಿರೇಮಠದ ಮರುಳಸಿದ್ಧ ಶಿವಾಚಾರ್ಯರು ಹೇಳಿದರು. ಈರಾಲಿಂಗೇಶ್ವರ ಮಠದ ಸಿದ್ಧಪ್ರಭು ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ‘ಕೈವಲ್ಯ ಪದ್ದತಿ ಗ್ರಂಥವು ಆರು ಶಾಸ್ತ್ರಗಳನ್ನು ಹೊಂದಿದೆ. ದೀಪಕ್ಕೆ ಜಾತಿ ಭೇದ ಇಲ್ಲ ಮೇಲು–ಕೀಳು ಎಂಬುದಿಲ್ಲ. ದೀಪವು ಪರಿಶುದ್ಧತೆ ಹೊಂದಿದೆ. ಹಾಗಾಗಿ ದೇಶದಾದ್ಯಂತ ಮಂದಿರಗಳಲ್ಲಿ ಕಾರ್ತೀಕೋತ್ಸವ ಆಚರಿಸಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.