ADVERTISEMENT

ಮುಂಡರಗಿ: ರಾಜಸ್ಥಾನ ಕುಟುಂಬದ ಕನ್ನಡಾಭಿಮಾನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:42 IST
Last Updated 1 ನವೆಂಬರ್ 2025, 4:42 IST
   

ಮುಂಡರಗಿ: ಇತ್ತೀಚಿನ ದಶಕಗಳಲ್ಲಿ ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಮಾತನಾಡುವವರು ವಿರಳವಾಗುತ್ತಿದ್ದು, ಇಂಗ್ಲಿಷ್ ಸೇರಿದಂತೆ ರಾಜ್ಯದಲ್ಕಿ ಅನ್ಯಭಾಷೆಗಳನ್ನು ಮಾತನಾಡುವವರ ಸಂಖ್ಯೆ ಹೆಚ್ಚಾಗತೊಡಗಿದೆ.

ನಾಲ್ಕು ದಶಕಗಳ ಹಿಂದೆ ದೂರದ ರಾಜಸ್ಥಾನದಿಂದ ವ್ಯಾಪಾರ ಮಾಡಲು ಮುಂಡರಗಿ ಪಟ್ಟಣಕ್ಕೆ ಆಗಮಿಸಿದ ಗೌತಮ್ ಚಂದ್ ಚೋಪ್ರಾ ಎಂಬ ಜೈನ ಕುಟುಂಬವೊಂದು ಕನ್ನಡವನ್ನೆ ತಮ್ಮ ಉಸಿರನ್ನಾಗಿ ಮಾಡಿಕೊಂಡು ಕನ್ನಡಿಗರು ನಾಚುವಂತೆ ದೈನಂದಿನ ವ್ಯಾಪಾರ, ವಹಿವಾಟುಗಳನ್ನೆಲ್ಲ ಕನ್ನಡದಲ್ಲಿಯೇ ಮಾಡುತ್ತಲಿದ್ದಾರೆ. ಆ ಮೂಲಕ ಕನ್ನಡಿಗರು ನಾಚುವಂತೆ ಭಾಷಾಭಿಮಾನ ಮೆರೆಯುತ್ತಿದ್ದಾರೆ.

ವ್ಯಾಪಾರಕ್ಕಾಗಿ ಪಟ್ಟಣಕ್ಕೆ ಆಗಮಿಸಿದ ಗೌತಮ್ ಚಂದ್ ಚೋಪ್ರಾ ಕುಟುಂಬವು ಮೊದಲು ಪಟ್ಟಣದಲ್ಲಿ ಒಂದು ಸಣ್ಣ ಕಿರಾಣಿ ಅಂಗಡಿ ಆರಂಭಿಸಿತು. ನಿಧಾನವಾಗಿ ಕನ್ನಡ ಭಾಷೆ ಮಾತನಾಡುವುದನ್ನು ಕಲಿತು, ಗ್ರಾಹಕರ ವಿಶ್ವಾಸ ಗಳಿಸಿ ಮುಂದೆ ಎಪಿಎಂಸಿಗೆ ತಮ್ಮ ವ್ಯಾಪಾರವನ್ನು ವಿಸ್ತರಿಸಿದರು. ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಮನೆಯಲ್ಲಿಯೂ ಕನ್ನಡವು ಚೋಪ್ರಾ ಕುಟುಂಬದ ಮಾತೃಭಾಷೆಯಾಯಿತು.

ADVERTISEMENT
ಕನ್ನಡ ನಾಡು ನಮಗೆ ಅನ್ನ ಆಶ್ರಯ ಹಾಗೂ ಮುಖ್ಯವಾಗಿ ಪ್ರೀತಿ ಗೌರವ ನೀಡಿದೆ. ಹೀಗಾಗಿ ನಾವು ಕನ್ನಡ ಕರ್ನಾಟಕ ಕನ್ನಡಿಗರೊಂದಿಗೆ ಬೆರೆತು ಹೋಗಿದ್ದು ನಾವು ಪರಕೀಯರು ಎನ್ನುವ ಭಾವ ಮರೆಯಾಗಿ ಹೋಗಿದೆ
ಗೌತಮ್ ಚಂದ್ ಚೋಪ್ರಾ, ಎಪಿಎಂಸಿ ವ್ಯಾಪಾರಿ ಮುಂಡರಗಿ

ಚೋಪ್ರಾ ಅವರ ಕನ್ನಡ ಭಾಷಾ ಪ್ರೇಮ ಕೇವಲ ಮಾತಿಗೆ ಮಾತ್ರ ಸಿಮಿತವಾಗಿರದೇ ಬರಹಕ್ಕೂ ಕನ್ನಡ ಭಾಷೆ ಮಿಸಲಾಯಿತು. ಇಂದು ಸಾಕಷ್ಟು ಕನ್ನಡಿಗರು ತಮ್ಮ ವ್ಯವಹಾರದ ಲೆಕ್ಕಪತ್ರಗಳಲ್ಲಿ ಇಂದಿಗೂ ಇಂಗ್ಲಿಷ್ ಅಂಕಿ, ಸಂಖ್ಯೆಗಳನ್ನು ಬಳಸುತ್ತಿದ್ದಾರೆ. ಆದರೆ ರಾಜಸ್ಥಾನದಿಂದ ಆಗಮಿಸಿರುವ ಚೋಪ್ರಾ ಕುಟುಂಬವು ಈಗಲೂ ತಮ್ಮ ಲೆಕ್ಕ, ಪತ್ರಗಳಲ್ಲಿ ಕನ್ನಡದ ಅಂಕಿ, ಸಂಖ್ಯೆಗಳನ್ನು ಬಳಸುತ್ತಿದ್ದಾರೆ.
ಸಾಮಾನ್ಯವಾಗಿ ಅನ್ಯ ರಾಜ್ಯಗಳಿಂದ ವ್ಯಾಪಾರಕ್ಕಾಗಿ ಆಗಮಿಸಿರುವ ವ್ಯಾಪಾರಸ್ಥರು ತಮ್ಮ ವ್ಯವಹಾರಗಳನ್ನು ಹಿಂದಿ ಅಥವಾ ತಮ್ಮ ಮಾತೃಭಾಷೆಯಲ್ಲಿ ಮಾಡುತ್ತಾರೆ. ಆದರೆ ಚೋಪ್ರಾ ಕುಟುಂಬದವರು ತಮ್ಮ ವ್ಯವಹಾರದ ಎಲ್ಲ ಖಾತೆ, ಖಿರ್ದಿ ಹಾಗೂ ಪಾವತಿ ಪುಸ್ತಕಗಳನ್ನು ಅಚ್ಚ ಕನ್ನಡದಲ್ಲಿಯೇ ಬರೆಯುತ್ತಿದ್ದಾರೆ ಮತ್ತು ಇಂಗ್ಲಿಷ್ ಅಂಕಿಗಳ ಬದಲಾಗಿ ಕನ್ನಡ ಅಂಕಿಗಳನ್ನೇ ಬಳಸುತ್ತಿದ್ದಾರೆ.

ದೀಪಾವಳಿ ಹಬ್ಬದಲ್ಲಿ ಮಹಾಲಕ್ಷ್ಮಿಯೊಂದಿಗೆ ಕನ್ನಡಾಂಬೆಯ ಭಾವಚಿತ್ರಕ್ಕೂ ಪೂಜೆ ಸಲ್ಲಿಸಿರುವ ಮುಂಡರಗಿಯ ಗೌತಮ್ ಚಂದ್ ಚೋಪ್ರಾ ಕುಟುಂಬ

ಪ್ರತೀ ವರ್ಷ ದೀಪಾವಳಿಯಂದು ಮಹಾಲಕ್ಷ್ಮಿ ಭಾವಚಿತ್ರದ ಜೊತೆಗೆ ಕನ್ನಡಾಂಬೆಯ ಭಾವಚಿತ್ರಕ್ಕೂ ಪೂಜೆ ಸಲ್ಲಿಸುತ್ತಿದ್ದಾರೆ. ರಾಜ್ಯೋತ್ಸವ ಸೇರಿದಂತೆ ನಾಡು, ನುಡಿಯ ಎಲ್ಲ ಆಚರಣೆಗಳಲ್ಲಿಯೂ ಮುಕ್ತವಾಗಿ ಪಾಲ್ಗೊಳ್ಳುತ್ತಿದ್ದಾರೆ. ಅವರ ಕನ್ನಡ ಭಾಷಾಭಿಮಾನ ಅನುಕರಣೀಯ.

ಮುಂಡರಗಿಯ ಗೌತಮ್ ಚಂದ್ ಚೋಪ್ರಾ ಅವರು ಕನ್ನಡದ ಅಂಕಿ ಸಂಖ್ಯೆಗಳನ್ನು ಬಳಸಿ ಬರೆಯುತ್ತಿರುವ ಖಾತೆ ಖಿರ್ದಿ ಪುಸ್ತಕಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.