ADVERTISEMENT

ಬಳ್ಳಾರಿಯನ್ನು ಕರ್ನಾಟಕದಲ್ಲಿ ಉಳಿಸಿಕೊಂಡ ದೊಡ್ಡಮೇಟಿ

ಏಕೀಕರಣ ರೂವಾರಿಯ ಪ್ರತಿಮೆ, ಸ್ಮಾರಕ ನಿರ್ಮಾಣವಾಗಿಲ್ಲ; ಸಮಾಧಿಗೂ ದುಸ್ಥಿತಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 31 ಅಕ್ಟೋಬರ್ 2019, 19:30 IST
Last Updated 31 ಅಕ್ಟೋಬರ್ 2019, 19:30 IST
   

ನರೇಗಲ್: ‘ಕರುನಾಡು ಇಲ್ಲದೆ ಭಾರತವನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಹೇಳಿ, ಜೀವನದುದ್ದಕ್ಕೂ ಕರ್ನಾಟಕದ ಅಭಿವೃದ್ಧಿಯನ್ನೇ ಉಸಿರಾಗಿಸಿಕೊಂಡಿದ್ದವರು ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿಯವರು.

ತಮ್ಮ ಮನೆಯಲ್ಲಿರುವ ಕನ್ನಡಮ್ಮನಿಗೆ ಹಾಗೂ ಹಂಪಿಯಲ್ಲಿರುವ ಭುವನೇಶ್ವರಿ ದೇವಿಗೆ ಅಗ್ರಪೂಜೆ ಮಾಡಿಸುತ್ತಿದ್ದರು. ದೊಡ್ಡಮೇಟಿ ಮನೆತನದಲ್ಲಿ ಇಂದಿಗೂ ಈ ಪದ್ಧತಿಯ ಕಾಣಬಹುದು. ಅಂದಾನಪ್ಪನವರು ಮೊದಲ ರಾಜ್ಯೋತ್ಸವವನ್ನು ಹಂಪಿಯಲ್ಲೆ ಆಚರಣೆ ಮಾಡಿದ್ದರು. ಬಳ್ಳಾರಿಯನ್ನು ಆಂದ್ರಪ್ರದೇಶಕ್ಕೆ ಸೇರಿಸುವಾಗ ಬಳ್ಳಾರಿಯಲ್ಲಿಯೇ ಇದ್ದು ಎಲೆ ತಿಮ್ಮಪ್ಪನವರ ತೋಟದಲ್ಲಿ ಜನರನ್ನು ಸೇರಿಸಿ ಭುವನೇಶ್ವರಿ ಪೂಜೆ ನೆರವೇರಿಸಿದರು. ನಂತರ ಸರಣಿ ಸಭೆಗಳನ್ನು ಕೈಗೊಂಡು ಜಾಗೃತಿ ಮೂಡಿಸಿ ಬಳ್ಳಾರಿಯನ್ನು ಕರ್ನಾಟಕದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.

1940 ರಿಂದ 60ರ ದಶಕದಲ್ಲಿ ರಾಜ್ಯದ ಪ್ರಭಾವಿ ಮುಖಂಡರಾಗಿದ್ದ ಇವರು ರಾಷ್ಟ್ರ ನಾಯಕರೊಂದಿಗೆ ನೇರ ಸಂಪರ್ಕ ಹೊಂದಿದ್ದರು. ಆಂಧ್ರಪ್ರದೇಶಕ್ಕಾಗಿ ಕೊಟ್ಟಿ ಶ್ರೀರಾಮಲು ಉಪವಾಸ ಸತ್ಯಾಗ್ರಹಕ್ಕೆ ಕುಳಿತ ದಿನವೇ ಇವರು ಸಹ ಜಕ್ಕಲಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದರು. ರಾಮಲು ಅವರ ಮರಣದಿಂದಾಗಿ ರಾಷ್ಟ್ರದಾದ್ಯಂತ ಭುಗಿಲೆದ್ದ ಗಲಭೆ, ಹೋರಾಟಗಳಿಂದ ಸತ್ಯಾಗ್ರಹ ಮೊಟಕುಗೊಳಿಸಿದರು. ಸಮಗ್ರ ಜಿಲ್ಲೆಯ ಧಾರವಾಡ ಉತ್ತರ ಕ್ಷೇತ್ರದಿಂದ ಬಾಂಬೆ ವಿಧಾನಸಭೆಗೆ ಆಯ್ಕೆಯಾದ ಮೇಲೆ ಮುಂಬೈ ಅಸೆಂಬ್ಲಿಯಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡಿಗರಿಗಾಗಿ ಧ್ವನಿ ಎತ್ತಿದರು.

ADVERTISEMENT

ಪ್ರತಿಮೆ ಇಲ್ಲ: ಕನ್ನಡಕ್ಕಾಗಿ ಜೀವನ ಮುಡಿಪಾಗಿಟ್ಟ ಅಂದಾನಪ್ಪ ದೊಡ್ಡಮೇಟಿಯವರ ಹೆಸರು ಜನ ಮಾನಸದಲ್ಲಿ ನೆಲೆ ನಿಲ್ಲುವಂತೆ ಎಲ್ಲಿಯೂ ಅವರ ಪ್ರತಿಮೆ, ಸ್ಮಾರಕ, ಸಮುದಾಯ ಭವನವನ್ನು ಸರ್ಕಾರ ನಿರ್ಮಿಸಿಲ್ಲ. ಗದಗ, ಗಜೇಂದ್ರಗಡ, ರೋಣ ತಾಲ್ಲೂಕನಲ್ಲಿ ಉದ್ಯಾನ,ವೃತ್ತ, ಗ್ರಂಥಾಲಯ, ಸಾಹಿತ್ಯ ಭವನಗಳಿಗೆ ಇವರ ಹೆಸರು ಇಲ್ಲದಿರುವುದು ದುರದೃಷ್ಟಕರ ಸಂಗತಿ.ಅಂದಾನಪ್ಪ ದೊಡ್ಡಮೇಟಿ ಹಾಗೂ ಸರಳ ಸಾತ್ವಿಕ ಜೀವನ ನಡೆಸಿ ಹೆಸರಾಗಿದ್ದ ಸಾಹಿತಿ, ರಾಜಕಾರಿ ಜ್ಞಾನದೇವ ದೊಡ್ಡಮೇಟಿಯವರ ಸಮಾಧಿಗಳು ಸ್ಥಳೀಯ ಆಡಳಿತ, ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುಸ್ಥಿತಿಯಲ್ಲಿದ್ದು ಅನಾಥವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.