ADVERTISEMENT

ಗದಗ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ: ಮತದಾನ ಇಂದು

ಸಂಜೆ 7ರ ವೇಳೆಗೆ ಫಲಿತಾಂಶ ಪ್ರಕಟ– ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳ ಭವಿಷ್ಯ ಇಂದೇ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 5:04 IST
Last Updated 21 ನವೆಂಬರ್ 2021, 5:04 IST

ಗದಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಗೆ ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಮತದಾನ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ 7 ಗಂಟೆ ವೇಳೆಗೆ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನುಡಿ ತೇರು ಎಳೆಯಲು ಪೈಪೋಟಿ ನಡೆಸಿರುವ ನಿಕಟಪೂರ್ವ ಅಧ್ಯಕ್ಷ ಡಾ. ಶರಣು ಗೋಗೇರಿ, ಸಾಹಿತಿ, ಶಿಕ್ಷಕ ವಿವೇಕಾನಂದಗೌಡ ಪಾಟೀಲ, ಹಿರಿಯ ಸಾಹಿತಿ ಐ.ಕೆ.ಕಮ್ಮಾರ, ಶಿಕ್ಷಕ ಹಾಗೂ ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಚುನಾವಣಾ ಕಣದಲ್ಲಿ ಇದ್ದಾರೆ. ಮತದಾನ ಆರಂಭಗೊಳ್ಳುವ ಕೊನೆ ಕ್ಷಣದವರೆಗೆ ಬಿರುಸಿನ ಪ್ರಚಾರ ನಡೆಸಿರುವ ಅಭ್ಯರ್ಥಿಗಳು ಮತದಾರರ ಮನವೊಲಿಸಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ.ಜಿಲ್ಲೆಯಲ್ಲಿ ಒಟ್ಟು 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು , 5,999 ಮತದಾರರು ಇದ್ದಾರೆ. ಗದಗ ಹೋಬಳಿಯಲ್ಲಿ 1,000, ಬೆಟಗೇರಿ 901, ಶಿರಹಟ್ಟಿ 298, ಲಕ್ಷ್ಮೇಶ್ವರ 613, ರೋಣ 453, ನರೇಗಲ್‌ 196, ಹೊಳೆಆಲೂರ 300, ಗಜೇಂದ್ರಗಡ 794 ಹಾಗೂ ನರಗುಂದ 662 ಹಾಗೂ ಮುಂಡರಗಿ ತಾಲ್ಲೂಕಿನಲ್ಲಿ 782 ಮಂದಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಗದಗ ನಗರದಲ್ಲಿ ಎರಡು, ಶಿರಹಟ್ಟಿ, ಲಕ್ಷ್ಮೇಶ್ವರ, ರೋಣ, ನರೇಗಲ್‌, ಹೊಳೆಆಲೂರ, ಗಜೇಂದ್ರಗಡ, ನರಗುಂದ ಹಾಗೂ ಮುಂಡರಗಿಯಲ್ಲಿ ತಲಾ ಒಂದು ಮತಗಟ್ಟೆಗಳನ್ನು ತೆರೆಯಲಾಗಿದೆ.

ADVERTISEMENT

‘ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆ ನ.21ರಂದು ನಡೆಯಲಿದ್ದು, ಶಾಂತಿಯುತವಾಗಿ ನಡೆಸಲು ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 10 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಪ್ರತಿ ಮತಗಟ್ಟೆಗೆ ಒಬ್ಬರು ಪಿಆರ್‌ಒ, ಮೂವರು ಸಿಬ್ಬಂದಿ, ಒಬ್ಬರು ಆಶಾಕಾರ್ಯಕರ್ತೆ ಹಾಗೂ ಡಿ ಗ್ರೂಪ್‌ ನೌಕರರನ್ನು ನಿಯೋಜಿಸಲಾಗಿದೆ. ಚುನಾವಣೆಯಲ್ಲಿ ಭಾಗವಹಿಸುವವರಿಗೆ ತರಬೇತಿ ನೀಡಲಾಗಿದೆ’ ಎಂದು ಗದಗ ತಹಶೀಲ್ದಾರ್‌ ಕಿಶನ್‌ ಕಲಾಲ್‌ ತಿಳಿಸಿದ್ದಾರೆ.

ಜಿಲ್ಲೆಗೆ ಪಿಂಕ್‌ ಬ್ಯಾಲೆಟ್‌

ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷರ ಚುನಾವಣೆಗೆ ಕ್ರಮವಾಗಿ ಬಿಳಿ ಹಾಗೂ ಪಿಂಕ್‌ ಬಣ್ಣದ ಬ್ಯಾಲೆಟ್‌ ಇರಲಿದೆ. ಮತದಾರರು ಎರಡೂ ಬಣ್ಣದ ಬ್ಯಾಲೆಟ್‌ ಪಡೆದು ರಾಜ್ಯ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಗೆ ತಲಾ ಒಂದು ಮತವನ್ನು ಪ್ರತ್ಯೇಕವಾಗಿ ಚಲಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.