ADVERTISEMENT

ರಾಜ್ಯದಲ್ಲಿ ಮುಚ್ಚಲಿರುವ ಕನ್ನಡ ಶಾಲೆಗಳು: ಆತಂಕ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:19 IST
Last Updated 18 ಜನವರಿ 2026, 4:19 IST
ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜ.ಅ.ವಿದ್ಯಾ ಸಮಿತಿಯ ಶತಮಾನೋತ್ಸವ ಸಮಾರಂಭವನ್ನು ಬಸವರಾಜ ಹೊರಟ್ಟಿ ಉದ್ಘಾಟಿಸಿದರು
ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜ.ಅ.ವಿದ್ಯಾ ಸಮಿತಿಯ ಶತಮಾನೋತ್ಸವ ಸಮಾರಂಭವನ್ನು ಬಸವರಾಜ ಹೊರಟ್ಟಿ ಉದ್ಘಾಟಿಸಿದರು   

ಮುಂಡರಗಿ: ‘ಕಡಿಮೆ ಹಾಜರಾತಿಯ ಕಾರಣದಿಂದ ರಾಜ್ಯದ ಗ್ರಾಮೀಣ ಭಾಗದ ಸುಮಾರು 900 ಕನ್ನಡ ಪ್ರಾಥಮಿಕ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದು, ಕನ್ನಡ ಶಾಲೆಗಳು ಮುಚ್ಚಿಹೋದರೆ ನಮ್ಮ ನಾಡ ಹಬ್ಬ, ರಾಷ್ಟ್ರೀಯ ಹಬ್ಬ ಹಾಗೂ ವಿವಿಧ ಆಚರಣೆಗಳು ಕಣ್ಮರೆಯಾಗಲಿವೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದರು.

ಇಲ್ಲಿಯ ಜಗದ್ಗುರು ಅನ್ನದಾನೀಶ್ವರ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಗದ್ಗರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಮ್ಮ ನಾಡಿನ ಮಠ, ಮಾನ್ಯಗಳು ಶಾಲಾ, ಕಾಲೇಜುಗಳನ್ನು ಹಾಗೂ ಉಚಿತ ಪ್ರಸಾದ ನಿಲಯಗಳನ್ನು ಸ್ಥಾಪಿಸಿ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ನೀಡಿದವು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡಲಾರದಷ್ಟು ಕೆಲಸ ಕಾರ್ಯಗಳನ್ನು ಇಲ್ಲಿಯ ಅನ್ನದಾನೀಶ್ವರ ವಿದ್ಯಾ ಸಮಿತಿಯು ಮಾಡಿರುವುದು ಶ್ಲಾಘನೀಯ’ ಎಂದು ಹರ್ಷವ್ಯಕ್ತಪಡಿಸಿದರು.

ADVERTISEMENT

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಮಾತನಾಡಿ, ‘ರಾಜ್ಯದ ಅನುದಾನಿತ ಪಿಯು ಕಾಲೇಜುಗಳ ಭೋದಕ ಸಿಬ್ಬಂದಿ ಭರ್ತಿಗೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ಒಳಮೀಸಲಾತಿ ಅನುಷ್ಠಾನ ಸೇರಿದಂತೆ ಹಲವು ತಾಂತ್ರಿಕ ತೊಂದರೆಗಳ ಕಾರಣದಿಂದ ಅದನ್ನು ಮುಂದೂಡಲಾಯಿತು. ಈಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅನ್ನದಾನೀಶ್ವರ ಸ್ವಾಮೀಜಿ ಮಾತನಾಡಿ, ‘ಖಾಸಗಿ ಅನುದಾನಿತ ಶಾಲೆ, ಕಾಲೇಜುಗಳ ಖಾಲಿ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡದಿರುವುದರಿಂದ ಶಾಲಾ, ಕಾಲೇಜುಗಳನ್ನು ನಿರ್ವಹಿಸುವುದು ಕಷ್ಟವಾಗುತ್ತಲಿದೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕಿಂತ ಅವುಗಳನ್ನು ನಿರ್ವಹಿಸುವುದು ತುಂಬಾ ಕಷ್ಟ’ ಎಂದು ತಿಳಿಸಿದರು.

ಕ.ರಾ.ಬೆಲ್ಲದ ನೂತನ ಪದವಿ ಕಾಲೇಜು ಕಟ್ಟಡದ ಭೂಮಿಪೂಜೆ ನೆರವೇರಿಸಲಾಯಿತು. ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ನೂತನ ಕಟ್ಟಡ ನಿರ್ಮಾಣಕ್ಕೆ ನೆರವು ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು. ‘ಮೃಡಗಿರಿಯ ಹೊಸಬೆಳಕು’ ಸಂಸ್ಮರಣ ಸಂಚಿಕೆ, ‘ವಿದ್ಯಾ ಕಿರಣ’ ಸ್ಮರಣ ಸಂಚಿಕೆ ಹಾಗೂ ‘ಜೇಂಗೊಡ’ ಗ್ರಂಥಗಳನ್ನು ಬಿಡುಗಡೆ ಮಾಡಲಾಯಿತು. ಶ್ರೀಮಠದ ಉತ್ತರಾಧಿಕಾರಿ ಮಲ್ಲಿಕಾರ್ಜುನ ಸ್ವಾಮೀಜಿ ಇದ್ದರು.

ಮಾನಸ ಹೊಳ್ಳ ಪ್ರಾರ್ಥಿಸಿದರು. ಎಸ್.ಆರ್.ರಿತ್ತಿ ಸ್ವಾಗತಿಸಿದರು. ಆಡಳಿತಾಧಿಕಾರಿ ಬಿ.ಜಿ.ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುದೇವ ಸ್ವಾಮೀಜಿ ನಿರೂಪಿಸಿದರು. ದೀಪುಶ್ರೀ ಕಣವಿ ವಂದಿಸಿದರು.

ಮುಂಡರಗಿಯ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಶತಮಾನೋತ್ಸವ ಸಮಾರಂಭದಲ್ಲಿ ಗಣ್ಯರು ಮೂರು ಗ್ರಂಥಗಳನ್ನು ಬಿಡುಗಡೆಗೊಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.