ನರೇಗಲ್: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಪಟ್ಟಣದ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅನ್ನದಾನೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಬಿಸಿಎ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಐ.ಕ್ಯೂ.ಎ.ಸಿ ಹಾಗೂ ಕನ್ನಡ ವಿಭಾಗದ ವತಿಯಿಂದ ಒಂದು ದಿನದ ರಾಜ್ಯಮಟ್ಟದ ವಿಶೇಷ ಕಮ್ಮಟವು ನವೆಂಬರ್ 21ರಂದು ಬೆಳಿಗ್ಗೆ 10.30ಕ್ಕೆ ಜರುಗಲಿದೆ.
ಸಾಹಿತಿ ಚಂದ್ರಶೇಖರ ವಸ್ತ್ರದ ಉದ್ಘಾಟಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯೆ ದಾಕ್ಷಾಯಣಿ ಹುಡೇದ ಪಾಲ್ಗೊಳ್ಳುವರು. ನಿವೃತ್ತ ಪ್ರಾಚಾರ್ಯ ಹೊಳಿಯಪ್ಪ ಯಲಬುರ್ಗಿ ಅವರು ‘ಸಹಕಾರ ಕ್ಷೇತ್ರ ಮತ್ತು ಗದಗ ಜಿಲ್ಲೆ’ ಕುರಿತು ವಿಶೇಷ ಉಪನ್ಯಾಸ ನೀಡುವರು.
ಮಧ್ಯಾಹ್ನ 12 ಗಂಟೆಗೆ ನಡೆಯುವ ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಗದಗ ಪಿ.ಪಿ.ಜೆ. ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಜಶೇಖರ ದಾನರೆಡ್ಡಿ ವಹಿಸಲಿದ್ದಾರೆ. ಮುಳಗುಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ರಮೇಶ ಕಲ್ಲನಗೌಡರ, ‘ಕುಮಾರವ್ಯಾಸ ಮತ್ತು ಕನ್ನಡದ ದೇಸಿತನ’, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಸಾರಂಗ ನಿರ್ದೇಶಕ ಸಂತೋಷ ನಾಯಕ ಆರ್. ಅವರು ‘ಶಿಕ್ಷಣ ಆಯೋಗಗಳು–ಶಿಫಾರಸ್ಸು–ಅನುಷ್ಠಾನ’ ಕುರಿತು ವಿಶೇಷ ಉಪನ್ಯಾಸ ನೀಡುವರು.
ಮಧ್ಯಾಹ್ನ 2.30ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಕೆ. ರವೀಂದ್ರನಾಥ ಅಧ್ಯಕ್ಷತೆ ವಹಿಸುವರು. ಹುಲಕೋಟಿಯ ಗದಗ ಸಹಕಾರ ಜವಳಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರ್ಜುನ ಗೊಳಸಂಗಿ ಅವರು, ‘ಕರ್ನಾಟಕ ಏಕೀಕರಣ ಮತ್ತು ಗದಗ ಜಿಲ್ಲೆ’, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಸುಜಾತಾ ಬರದೂರ ಅವರು, ‘ಮುದ್ರಣ ಕ್ಷೇತ್ರ ಮತ್ತು ಗದಗ ಜಿಲ್ಲೆ’ ಕುರಿತು ಮಾತನಾಡುವರು.
ಸಂಜೆ 4 ಗಂಟೆಗೆ ಸಂವಾದ ಜರುಗಲಿದ್ದು, ನರೇಗಲ್‌ನ ಕಲ್ಲಯ್ಯ ಹಿರೇಮಠ, ಪುಂಡಲೀಕ ಮಾದರ, ಎಫ್.ಎನ್. ಹುಡೇದ, ಶಿವಮೂರ್ತಿ ಕುರೇರ, ಗದಗನ ಅಂದಯ್ಯ ಅರವಟಗಿಮಠ, ನಾಗರಾಜ ಬಳಿಗಾರ, ಸಿದ್ದಲಿಂಗೇಶ ಸಜ್ಜನಶೆಟ್ಟರ ಮತ್ತು ಮುಂಡರಗಿಯ ಜೆ. ಕುಮಾರನಾಯಕ ಪಾಲ್ಗೊಳ್ಳುವರು.
4.30ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಎಸ್.ಎ. ಪಾಟೀಲ ವಹಿಸಲಿದ್ದಾರೆ. ಎಸ್‌ಎವಿವಿಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್.ಆರ್. ಗೌಡರ, ಐ.ಕ್ಯು.ಎ.ಸಿ ಸಂಚಾಲಕ ಡಿ.ಎಲ್. ಪವಾರ ಪಾಲ್ಗೊಳ್ಳುವರು ಎಂದು ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.