ADVERTISEMENT

ಜಿಲ್ಲೆಯ 13 ಗ್ರಾಮಗಳಲ್ಲಿ ಪ್ರವಾಹ ಭೀತಿ

ಗಂಜಿ ಕೇಂದ್ರ ಆರಂಭ; ಶಾಲೆ,ಕಾಲೇಜುಗಳಿಗೆ ರಜೆ ಘೋಷಣೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 7:49 IST
Last Updated 9 ಆಗಸ್ಟ್ 2019, 7:49 IST
ಹೊಳೆಆಲೂರು ಸಮೀಪ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿಗೆ ಸಮೀಪದ ಕುರುವಿನಕೊಪ್ಪ ಗ್ರಾಮಸ್ಥರನ್ನು ಜಿಲ್ಲಾಡಳಿತ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದೆ. ಬುಧವಾರ ಗ್ರಾಮಸ್ಥರು ಸೇತುವೆಯ ಮೇಲೆ ನಿಂತು ಆತಂಕದಿಂದ ನದಿ ನೀರು ಏರುತ್ತಿರುವುದನ್ನು ನೋಡುತ್ತಿರುವುದು
ಹೊಳೆಆಲೂರು ಸಮೀಪ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಇಲ್ಲಿಗೆ ಸಮೀಪದ ಕುರುವಿನಕೊಪ್ಪ ಗ್ರಾಮಸ್ಥರನ್ನು ಜಿಲ್ಲಾಡಳಿತ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಿದೆ. ಬುಧವಾರ ಗ್ರಾಮಸ್ಥರು ಸೇತುವೆಯ ಮೇಲೆ ನಿಂತು ಆತಂಕದಿಂದ ನದಿ ನೀರು ಏರುತ್ತಿರುವುದನ್ನು ನೋಡುತ್ತಿರುವುದು   

ಗದಗ: ಜಿಲ್ಲೆಯ ಒಂದು ಬದಿ ಹರಿದಿರುವ ಮಲಪ್ರಭಾ,ಇನ್ನೊಂದು ಬದಿಯಿಂದ ಹರಿದಿರುವ ತುಂಗಭದ್ರಾ, ಜಿಲ್ಲೆಯ ನಡುವಿನಿಂದಲೇ ಹರಿದು ಹೋಗಿರುವ ಬೆಣ್ಣೆಹಳ್ಳ ಇವು ಮೂರರಲ್ಲೂ ನೀರಿನ ಒಳ ಹರಿವು ಹೆಚ್ಚಿದ್ದು, ನದಿದಂಡೆಯ 13 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

ನರಗುಂದ ತಾಲ್ಲೂಕಿನ ಲಕುಮಾಪುರದಿಂದ ರೋಣ ತಾಲ್ಲೂಕಿನ ಕುರುವಿನಕೊಪ್ಪ ವ್ಯಾಪ್ತಿಯ ಗ್ರಾಮಗಳಿಗೆ ಯಾವುದೇ ಕ್ಷಣದಲ್ಲಿ ಬೇಕಾದರೂ ಮಲಪ್ರಭಾ ನದಿ ನೀರು ನುಗ್ಗುವ ಸಾಧ್ಯತೆ ಇದ್ದು, ಜಿಲ್ಲಾಡಳಿತವು ಈಗಾಗಲೇ ಇಲ್ಲಿನ ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ.

ನವಿಲುತೀರ್ಥ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಬುಧವಾರ 70 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗಿದೆ. ಇದರಿಂದ ಮಲಪ್ರಭಾ ನದಿಪಾತ್ರದಲ್ಲಿ ಬರುವ ನರಗುಂದ ತಾಲ್ಲೂಕಿನ ಲಕಮಾಪುರ, ವಾಸನ, ಬೆಳ್ಳೇರಿ, ಬೂದಿಹಾಳ, ಕಪ್ಪಲಗಿ, ಕಲ್ಲಾಪುರ, ಶಿರೋಳ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಮಂಗಳವಾರ ರಾತ್ರಿಯೇ ಈ ಗ್ರಾಮಗಳಿಂದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿದೆ. ಕೆಲವರು ಇನ್ನೂ ಗ್ರಾಮಗಳಲ್ಲೇ ಉಳಿದುಕೊಂಡಿದ್ದು, ಬುಧವಾರ ಸಂಜೆ ಅವರನ್ನು ಸ್ಥಳಾಂತರಿಸಲಾಯಿತು.

ADVERTISEMENT

ರೋಣ ತಾಲ್ಲೂಕಿನ ಹೊಳೆಆಲೂರು, ಕುರುವಿನಕೊಪ್ಪ, ಹೊಳೆಹಡಗಲಿ, ಹೊಳೆಮಣ್ಣೂರು, ಗಾಡಗೋಳಿ, ಮೆಣಸಗಿ, ಬಿ.ಎಸ್‌ ಬೇಲೇರಿ, ಗುಳಗುಂದಿ, ಅಮರಗೋಳ ಗ್ರಾಮಗಳು ಮಲಪ್ರಭಾ ಪ್ರವಾಹ ಭೀತಿ ಎದುರಿಸುತ್ತಿದ್ದು, 2010ರಲ್ಲಿ ಇಲ್ಲಿ ಪ್ರವಾಹ ಉಂಟಾದಾಗ ಜಿಲ್ಲಾಡಳಿತವು ಇವರಿಗಾಗಿ 1 ಸಾವಿರಕ್ಕೂ ಹೆಚ್ಚು ಆಸರೆ ಮನೆಗಳನ್ನು ನಿರ್ಮಿಸಿತ್ತು. ಈ ಆಸರೆ ಮನೆಗಳಿಗೆ ಜನರು ಸ್ಥಳಾಂತರಗೊಂಡರು.

ಗಂಜಿ ಕೇಂದ್ರ ಆರಂಭ: ನರಗುಂದ ತಾಲ್ಲೂಕಿನಲ್ಲಿ 4 ಹಾಗೂ ರೋಣ ತಾಲ್ಲೂಕಿನಲ್ಲಿ 2 ಸೇರಿದಂತೆ ಒಟ್ಟು 6 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇಲ್ಲಿ ಸದ್ಯ 2,857 ಕುಟುಂಬಗಳ 13, 398 ಜನರಿಗೆ ಆಶ್ರಯ ಒದಗಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ತಿಳಿಸಿದರು.

ತುಂಬಿ ಹರಿಯುತ್ತಿರುವ ಬೆಣ್ಣೆ ಹಳ್ಳ: ಶಿಗ್ಗಾಂವಿ ತಾಲ್ಲೂಕಿನ ದುಂಡಸಿಯಿಂದ ಆರಂಭಗೊಂಡು, ನರಗುಂದ ತಾಲ್ಲೂಕಿನ ಕುರ್ಲಗೇರಿ, ಸುರಕೋಡ, ಯಾವಗಲ್‌, ಮೆಣಸಗಿ, ಹೊಳೆ ಆಲೂರು ಮಾರ್ಗವಾಗಿ ಹರಿದು ಹೋಗುವ ಬೆಣ್ಣೆಹಳ್ಳದಲ್ಲೂ ಸದ್ಯ ನೀರಿನ ಒಳಹರಿವು ಹೆಚ್ಚಿದೆ. ಈ ಹಳ್ಳದಲ್ಲಿ ನೀರಿನ ಪ್ರಮಾಣ ಹೆಚ್ಚಿದರೆ ಇದರ ವ್ಯಾಪ್ತಿಗೆ ಬರುವ ಕುರ್ಲಗೇರಿ, ಸುರಕೋಡ, ಗಂಗಾಪುರ, ಖಾನಾಪುರ, ಯಾಸ ಹಡಗಲಿ, ಗ್ರಾಮಗಳಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.