ADVERTISEMENT

ನಾಡದೇವತೆ ಚಿತ್ರ: ಅಭಿಪ್ರಾಯ ಸಂಗ್ರಹಿಸಿ ಅಧಿಕೃತಗೊಳಿಸಿ

ಅಧಿಕೃತಗೊಳಿಸುವ ಮುನ್ನ ಸಾರ್ವಜನಿಕವಾಗಿ ಚರ್ಚೆಯಾಗಲಿ– ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 3:58 IST
Last Updated 24 ನವೆಂಬರ್ 2022, 3:58 IST
ಗದುಗಿನ ಚಿತ್ರಕಲಾವಿದ ಸಿ.ಎನ್.ಪಾಟೀಲ ಅವರು 1953ರಲ್ಲಿ ರಚಿಸಿರುವ ಭುವನೇಶ್ವರಿ ತೈಲವರ್ಣ ಚಿತ್ರ
ಗದುಗಿನ ಚಿತ್ರಕಲಾವಿದ ಸಿ.ಎನ್.ಪಾಟೀಲ ಅವರು 1953ರಲ್ಲಿ ರಚಿಸಿರುವ ಭುವನೇಶ್ವರಿ ತೈಲವರ್ಣ ಚಿತ್ರ   

ಗದಗ: ‘ಏಕೀಕರಣದ ರೂವಾರಿ ಅಂದಾನಪ್ಪ ದೊಡ್ಡಮೇಟಿ ಅವರ ಪರಿಕಲ್ಪನೆಯಂತೆ ಕಲಾವಿದ ಸಿ.ಎನ್‌.ಪಾಟೀಲರು 1953ರಲ್ಲಿ ರಚಿಸಿದ ಭುವನೇಶ್ವರಿ ತೈಲವರ್ಣದ ಚಿತ್ರದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಾಕಷ್ಟು ಮಾಹಿತಿ ಇದೆ. ಆ ಚಿತ್ರರಚನೆಯ ಹಿಂದಿನ ಭಾವನೆಗಳ ಅರಿವು ಕೂಡ ಇದೆ. ಏಕೀಕರಣ ಚಳವಳಿಗೆ ವಿವಿಧ ಸ್ತರಗಳಲ್ಲಿ ಸ್ಫೂರ್ತಿ ತುಂಬಿದ ಈ ಚಿತ್ರವನ್ನೇ ಸರ್ಕಾರ ಅಧಿಕೃತಗೊಳಿಸಬೇಕು’ ಎಂದು ಗದುಗಿನ ಸಾಹಿತಿಗಳು, ಚಿತ್ರಕಲಾವಿದರು ಹಾಗೂ ಸಾಂಸ್ಕೃತಿಕ ಚಿಂತಕರು ಆಗ್ರಹಿಸಿದ್ದಾರೆ.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ನಾಡಿನ ಅಸ್ಮಿತೆಯ ಸಂಕೇತಗಳನ್ನು ಪ್ರಮಾಣೀಕರಿಸಬೇಕು ಎಂಬ ಸರ್ಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಆದರೆ, ಅದು ಸಾರ್ವತ್ರಿಕವಾಗಿ ಬಂದರೆ ಇನ್ನಷ್ಟು ಅರ್ಥಪೂರ್ಣವಾಗಿರುತ್ತದೆ’ ಎಂದು ಪ್ರತಿಪಾದಿಸಿದರು.

ಅಂದಾನಪ್ಪ ದೊಡ್ಡಮೇಟಿ ಸಂಸ್ಕೃತಿ, ಕಲೆಯ ಆರಾಧಕರಾಗಿದ್ದರು. ಸಾಹಿತ್ಯದ ಒಲವುಳ್ಳವರಾಗಿದ್ದರು. ಚಿತ್ರಬ್ರಹ್ಮ ಸಿ.ಎನ್‌.ಪಾಟೀಲರ ಜತೆಗೆ ಚರ್ಚಿಸಿ ರಚಿಸಿದ ಈ ಚಿತ್ರದ ಚಾರಿತ್ರಿಕ ಹಿನ್ನಲೆ ಅಧ್ಯಯನ ನಡೆಸಿ, ವರದಿ ತರಿಸಿಕೊಂಡು ಈ ಚಿತ್ರವನ್ನೇ ಸರ್ಕಾರ ಅಧಿಕೃತಗೊಳಿಸಬೇಕು ಎಂಬ ಆಗ್ರಹ ಕೇಳಿಬಂತು.

ADVERTISEMENT

ಮಕ್ಕಳ ಸಾಹಿತಿ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ‘ಐದು ಮಂದಿ ಕಲಾವಿದರ ಸಮಿತಿ ರಚಿಸಿದ ನಾಡದೇವತೆ ಚಿತ್ರವನ್ನು ಅಧಿಕೃತಗೊಳಿಸಲು ಸರ್ಕಾರಕ್ಕೆ ಶಿಫಾರಸು ಮಾಡಿರುವ ವಿಷಯ ಕೇಳಿ ಅಚ್ಚರಿಯಾಯಿತು. ಕನ್ನಡ ಹಾಗೂ ಏಕೀಕರಣದ ಇತಿಹಾಸ ಗೊತ್ತಿರುವವರಿಗೆಲ್ಲರಿಗೂ ಇದು ಆಘಾತಕಾರಿ ವಿಷಯ’ ಎಂದರು.

‘ಇದು ಕಾಲ್ಪನಿಕವಲ್ಲ; ಪರಂಪರೆಯ ತಳಹದಿಯ ಮೇಲೆ ನಿರ್ಮಿತವಾದ ಪಾರಂಪರಿಕ ಚಿತ್ರ. ಇದನ್ನೇ ಅಧಿಕೃತಗೊಳಿಸಬೇಕು’ ಎಂದು ಕಲಾವಿದ ಅನ್ನದಾನಿ ಹಿರೇಮಠ ಒತ್ತಾಯಿಸಿದರು.

ಸಾಹಿತಿ ಡಾ.ಜಿ.ಬಿ.ಪಾಟೀಲ ಮಾತನಾಡಿ, ‘ನಾಡದೇವತೆ ಚಿತ್ರವನ್ನು ಅಧಿಕೃತಗೊಳಿಸುವ ವಿಚಾರ ಹೋರಾಟದ ಸ್ವರೂಪಕ್ಕೆ ಹೋಗಬಾರದು ಎಂಬುದು ನಮ್ಮ ಇಚ್ಛೆ. ಹಾಗಾಗಿ, ಭುವನೇಶ್ವರಿ ಚಿತ್ರದ ಬಗ್ಗೆ ಚೆನ್ನಾಗಿ ಅರಿವಿರುವ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಾರ್ವಜನಿಕ ಚರ್ಚೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಜಕ್ಕಲಿ ಗ್ರಾಮದಲ್ಲಿರುವ ಭುವನೇಶ್ವರಿ ಚಿತ್ರ ಕನ್ನಡಿಗರ ಆಸ್ತಿ. ಏಕೀಕರಣ ಚಳವಳಿಗೆ ಸ್ಫೂರ್ತಿ ತುಂಬಿದ ಈ ಚಿತ್ರವನ್ನೇ ಅಧಿಕೃತಗೊಳಿಸುವಂತೆ ಎಲ್ಲ ಕನ್ನಡಿಗರು ಒತ್ತಾಯಿಸಬೇಕು
–ರವೀಂದ್ರನಾಥ ದೊಡ್ಡಮೇಟಿ, ಅಂದಾನಪ್ಪ ದೊಡ್ಡಮೇಟಿ ಮೊಮ್ಮಗ

ಕರ್ನಾಟಕದ ಸಮಸ್ತ ಜನರ ಭಾವಸಿಂಹಾಸನ ಆಳುತ್ತಿರುವುದು ಈ ತೈಲಚಿತ್ರ. ಚರ್ಚೆಗೆ ಇಡದೇ ಅಧಿಕೃತಗೊಳಿಸುವುದಕ್ಕೆ ಸಾಹಿತಿಗಳು, ಕಲಾವಿದರ ವಿರೋಧ ಇದೆ
–ಚಂದ್ರಶೇಖರ ವಸ್ತ್ರದ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.