
ನರಗುಂದ: ಅಭಿವೃದ್ಧಿ ಬಗ್ಗೆ ಆಡಳಿತ ಪಕ್ಷದ ಯಾವೊಬ್ಬ ಶಾಸಕರು ಮಾತಾಡುತ್ತಿಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಆಂತರಿಕ ಒಳಜಗಳಗಳು ಹೆಚ್ಚಾಗಿವೆ. ಇದನ್ನೆಲ್ಲ ನೋಡಿದರೆ, ಅವಧಿ ಪೂರ್ವ ಚುನಾವಣೆ ನಡೆಯುವ ಸಂಭವ ಹೆಚ್ಚಾಗಿದೆ ಎಂದು ಶಾಸಕ ಸಿ.ಸಿ.ಪಾಟೀಲ ಭವಿಷ್ಯ ನುಡಿದರು.
ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸಚಿವ ಎಚ್.ಕೆ.ಪಾಟೀಲರು. ಗ್ಯಾರಂಟಿ ಯೋಜನೆಗಳಿಂದ ಜನರ ಬಡತನ ನಿರ್ಮೂಲಗೊಂಡಿದೆ ಎಂದಿರುವುದು ಸಂತಸ. ಆದರೆ ಗ್ಯಾರಂಟಿ ಯೋಜನೆಗೆ ನಮ್ಮ ವಿರೋಧವಿಲ್ಲ. ಬಡತನ ಹೋಗಿದ್ದರೆ, ಬಿಪಿಎಲ್ ಕಾರ್ಡ್ ಏಕೆ ಬೇಕು? ಎಂದು ಪ್ರಶ್ನಿಸಿದರು.
ಜನರ ಜೀವನಮಟ್ಟದ ಸತ್ಯಾಸತ್ಯತೆ ಬಗ್ಗೆ ಉಸ್ತುವಾರಿ ಜಿಲ್ಲಾ ಕಾರ್ಯದರ್ಶಿ ಮೂಲಕ ಮಾಹಿತಿ ಪಡೆಯಬೇಕು. ಸಚಿವ ಪ್ರಿಯಾಂಕ್ ಖರ್ಗೆ ನಿರ್ಲಕ್ಷ್ಯದಿಂದ ರಾಜ್ಯಕ್ಕೆ ಬರಬೇಕಾದ ಆರ್ಟಿಪಿಷಿಯಲ್ ಇಂಟ್ಲಿಜೆನ್ಸಿ (ಎಐ) ಕಂಪನಿಗಳು ರಾಜ್ಯ ಬಿಟ್ಟು ಹೋಗಿವೆ. ಖರ್ಗೆ ತನ್ನ ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಯಾವುದೇ ಪಕ್ಷ ಮತ್ತು ಜಾತಿಗೆ ಸಿಮೀತವಲ್ಲದ ದೇಶಭಕ್ತ ಆರ್.ಎಸ್.ಎಸ್ ಸಂಘಟನೆ ಪಥಸಂಚಲನಕ್ಕೆ ವಿರೋಧ ವ್ಯಕ್ತಪಡಿಸಿ, ಜನರ ದಿಕ್ಕನ್ನು ತಪ್ಪಿಸುತ್ತಿದ್ದಾರೆಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಮಾಡದೇ ಇದ್ದರೂ ಕೊನೆ ಪಕ್ಷ ರಸ್ತೆ ಗುಂಡಿ ಮುಚ್ಚಲು ಆಗುತ್ತಿಲ್ಲ. ಇದಕ್ಕೆ ಮುಚ್ಚಲು ಸಂಪನ್ಮೂಲ ಕ್ರೋಡೀಕರಿಸಿ ಎಂದು ಮುಖ್ಯಮಂತ್ರಿಗಳೇ 3 ಬಾರಿ ರಸ್ತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ನೋಡಿದರೆ ರಾಜ್ಯ ಸರ್ಕಾರದ ಆಡಳಿತ ಗೊತ್ತಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಎನ್‌ಡಿಆರ್‌ಎಫ್ ಅಡಿಯಲ್ಲಿ ಬೆಳೆಹಾನಿ ಪರಿಹಾರವನ್ನು ಇನ್ನೆರಡು ದಿನದಲ್ಲಿ ನೀಡಲಾಗುತ್ತಿದೆ. ಇದರಲ್ಲಿ ರಾಜ್ಯ ಸರ್ಕಾರ ತಮ್ಮ ಪಾಲಿನ ಹೆಚ್ಚಿನ ಪರಿಹಾರವನ್ನು ಸೇರಿಸಿ ನೀಡಬೇಕು ಎಂದು ಆಗ್ರಹಿಸಿದರು.
ಸಚಿವ ಎಚ್ ಕೆ ಪಾಟೀಲ ನೇತ್ರತ್ವದಲ್ಲಿ ಇಂದು ಮೂರು ಕಟ್ಟಡಗಳು ಉದ್ಘಾಟನೆಗೊಂಡಿವೆ. ಪುರಸಭೆ ಕಟ್ಟಡವು ₹ 1.50 ಲಕ್ಷ ಅನುದಾನದಲ್ಲಿ ಭೂಮಿಪೂಜೆ ಆಗಿತ್ತು. ನಂತರ 2018-23 ಅವಧಿಯಲ್ಲಿ ನಾನೇ ಶಾಸಕನಾಗಿದ್ದೆ, ಹೆಚ್ಚಿನ ಅನುದಾನ ತಂದು ವಿಳಂಬವಾಗಿದ್ದ ಕಾಮಗಾರಿಯನ್ನು ಪೂರ್ಣಗೊಳಿಸಿ ಈ ದಿನ ಉದ್ಘಾಟನೆ ಮಾಡಿದ್ದೇವೆ. ಪುರಸಭೆ ಕಟ್ಟಡವು ಒಟ್ಟು ₹5.34 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡು ಸುಂದರವಾಗಿ ತಲೆಯೆತ್ತಿ ನಿಂತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪುರಸಭೆ ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ದೇಸಾಯಿಗೌಡ ಪಾಟೀಲ, ಅಜ್ಜಪ್ಪ ಹುಡೇದ, ಉಮೇಶಗೌಡ ಪಾಟೀಲ, ಎಸ್.ಆರ್.ಪಾಟೀಲ, ಚಂದ್ರು ದಂಡಿನ, ಗುರಪ್ಪ ಆದೆಪ್ಪನವರ, ಮಲ್ಲಪ್ಪ ಮೇಟಿ, ರಾಚನಗೌಡ ಪಾಟೀಲ, ಅನೀಲ ಧರಿಯಣ್ಣವರ, ವಿಠ್ಠಲ ಹವಾಲ್ದಾರ, ಸಂತೋಷ ಹಂಚಿನಾಳ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.