ADVERTISEMENT

ಡಂಬಳ ಕೆರೆಗೆ ಬಾಗಿನ ಅರ್ಪಣೆ ಇಂದು: ಎಲ್ಲೆಡೆ ಮಲೆನಾಡಿನ ವಾತಾವರಣ

ಭರ್ತಿಯಾದ ಕೆರೆ

ಲಕ್ಷ್ಮಣ ಎಚ್.ದೊಡ್ಡಮನಿ
Published 1 ಡಿಸೆಂಬರ್ 2024, 4:59 IST
Last Updated 1 ಡಿಸೆಂಬರ್ 2024, 4:59 IST
ಐತಿಹಾಸಿಕ ಡಂಬಳ ಕೆರೆ ಕೋಡಿ ಬಿದ್ದಿದೆ
ಐತಿಹಾಸಿಕ ಡಂಬಳ ಕೆರೆ ಕೋಡಿ ಬಿದ್ದಿದೆ   

ಡಂಬಳ: ಐತಿಹಾಸಿಕ ಗೋಣಸಮುದ್ರ ಕೆರೆ (ವಿಕ್ಟೋರಿಯಾ ಮಹಾರಾಣಿ ಕೆರೆ) ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಅಪಾರ ಜಲರಾಶಿಯಿಂದ ಸಮುದ್ರದಂತೆ ಕಾಣಿಸುವ ಕೆರೆಯ ಸೊಗಬನ್ನು ನೋಡಿ ರೈತರು ಹಾಗೂ ಪ್ರವಾಸಿಗರು ಹರ್ಷ ವ್ಯಕ್ತಪಡಿಸಿದ್ದಾರೆ. ಚಳಿಗಾಲವಾದ್ದರಿಂದ ಗ್ರಾಮದಲ್ಲಿ ಈಗ ಮಲೆನಾಡಿದ ವಾತವರಣ ನಿರ್ಮಾಣವಾಗಿದೆ.

ಈ ಭಾಗದ ಮಹತ್ವಕಾಂಕ್ಷೆ ಯೋಜನೆಯಾದ ಸಿಂಗಟಲೂರ ಏತ ನೀರಾವರಿ ಯೋಜನೆ ಮೂಲಕ ಕೆರೆಗೆ ತುಂಗಭದ್ರಾ ನೀರು ಹರಿಸಲಾಗುತ್ತಿದೆ. ಸತತ ಒಂದು ತಿಂಗಳ ಕಾಲ ನೀರು ಹರಿಸಿದ್ದರಿಂದ ಕೆರೆ ಭರ್ತಿಯಾಗಿ ಕೋಡಿ ಹರಿಯುತ್ತಿದೆ. ಬರಗಾಲದಿಂದ ನಾಶವಾಗಿದ್ದ ಇಲ್ಲಿನ ಪ್ರಸಿದ್ಧ ಪೇರಲ, ಸಿಹಿಬಾರಿ ಹಣ್ಣಿನ ತೋಟಗಳಿಗೆ ಮರುಜೀವ ಬಂದಿದೆ. ಅಂತರ್ಜಲ ಕುಸಿತದಿಂದ ಬತ್ತಿಹೋಗಿದ್ದ ನೂರಾರು ಕೊಳವೆಬಾವಿಗಳು ಮರುಪೂರಣಗೊಂಡಿವೆ. ಪುರಾತನ ಕಾಲದ ಬಾವಿಗಳಲ್ಲಿ ಜೀವ ಜಲ ಬಂದಿದೆ.

‘ಕೆರೆನೀರು ಹಳ್ಳದಲ್ಲಿ ಹರಿಯುತ್ತಿರುವುದರಿಂದ ಹಸಿರು ಬೆಳೆದಿದೆ. ಹಸುಗಳಿಗೆ ಹುಲ್ಲು ಮೇವು ಸಿಗುತ್ತಿದೆ. ಮಳೆ ಕೈಕೊಟ್ಟರೂ ಕೆರೆಯ ನೀರನ್ನು ನಂಬಿ ಈರುಳ್ಳಿ, ಮೆಣಸಿನಕಾಯಿ, ಹತ್ತಿ, ಮೆಕ್ಕೆಜೋಳ, ಬಾಳೆ, ಪೇರಲ, ಜವಾರಿ ಸಿಹಿಬಾರಿ ಹಣ್ಣು ಸೇರಿದಂತೆ ಕೃಷಿ ಮತ್ತು ವಿವಿಧ ತೋಟಗಾರಿಕೆ ಬೆಳೆಗಳಿಗೂ ಆಸರೆಯಾಗಿದೆ’ ಎಂದು ರೈತ ಬಸವರಾಜ ಪೂಜಾರ ತಿಳಿಸಿದ್ದಾರೆ.

ADVERTISEMENT

‘ಡಂಬಳ ಕೆರೆಯಿಂದ 3,000 ಎಕರೆ ರೈತರ ಜಮೀನಿಗೆ ನೀರಾವರಿಯಾಗಲಿವೆ. ಸಣ್ಣ ನೀರಾವರಿ ಇಲಾಖೆಯು ಕಾಲುವೆ ದುರಸ್ತಿಗೆ ಆದ್ಯತೆ ನೀಡಲಿದೆ. ರೈತರು ನೀರನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಪ್ರವೀಣ ಪಾಟೀಲ ತಿಳಿಸಿದ್ದಾರೆ.

‘ಕೆರೆ ತುಂಬಿರುವುದರಿಂದ ಸ್ಥಳೀಯರು ಮಹಾನಗರಗಳಿಗೆ ಗುಳೆ ಹೋಗುವುದು ತಪ್ಪಿದೆ. ಸ್ಥಳೀಯವಾಗಿ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಗ್ರಾಮದ ಗತಕಾಲದ ವೈಭವ ಮರುಕಳಿಸಿದ್ದು ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕೃಷಿ ಮತ್ತು ಹೈನುಗಾರಿಕೆಯತ್ತ ಜನರು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಭಾನುವಾರ ನಡೆಯುವ ಕೆರೆ ಬಾಗಿನ ಅರ್ಪಣೆಗೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಡಂಬಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿವಲೀಲಾ ದೇವಪ್ಪ ಬಂಡಿಹಾಳ.

ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ: ಶಾಸಕ

‘ಶಿಂಗಟಾಲೂರ ಏತನೀರಾವರಿ ಯೋಜನೆಯಡಿ ಮುರಡಿ ಬಸಾಪೂರ ಪೇಠಾಲೂರ ಜಂತಲಿಶಿರೂರ ಹಿರೇವಡ್ಡಟ್ಟಿ ತಾಮ್ರಗುಂಡಿ ಮುಂತಾದ ಗ್ರಾಮಗಳ ಕೆರೆಗೆ ನೀರು ಭರ್ತಿ ಮಾಡಲಾಗುತ್ತದೆ. ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದೆ. ಹಂತ ಹಂತವಾಗಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ರೈತರ ಬದುಕು ಸುಧಾರಣೆಯಾಗಬೇಕು. ಲಿಂ.ತೋಂಟದಾರ್ಯ ಸಿದ್ಧಲಿಂಗ ಸ್ವಾಮೀಜಿ ಸಲಹೆಯಂತೆ ನೀರನ್ನು ತುಪ್ಪದಂತೆ ರೈತರು ಹಾಗೂ ಸಾರ್ವಜನಿಕರು ಬಳಕೆ ಮಾಡಬೇಕು’ ಎಂದು ರೋಣ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.