ಗದಗ: 2024–2029ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ರಾಜ್ಯದಾದ್ಯಂತ ಒಟ್ಟು 1,275 ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಗದಗ ಜಿಲ್ಲೆಯ 48 ತಾಣಗಳು ಸ್ಥಾನ ಪಡೆದಿವೆ.
ಪ್ರವಾಸಿಗರು ಭೇಟಿ ನೀಡುವ ಅಂಕಿ ಅಂಶ ಸೇರಿದಂತೆ ವಿವಿಧ ಮಾನದಂಡಗಳನ್ನು ಇರಿಸಿಕೊಂಡು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಿತಿಯಿಂದ ಸ್ವೀಕರಿಸಿದ ವರದಿ ಆಧರಿಸಿ ಹೊಸ ಪ್ರವಾಸಿ ತಾಣಗಳನ್ನು ಗುರುತಿಸಲಾಗಿದೆ. ಹೊಸ ತಾಣಗಳ ಗುರುತಿಸುವಿಕೆಯಿಂದಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿ ಆಗಬಹುದು ಎಂಬ ನಿರೀಕ್ಷೆಗಳು ಈಗ ಗರಿಗೆದರಿವೆ.
ಪ್ರವಾಸೋದ್ಯಮ ಇಲಾಖೆಯ ಅಧೀನ ಕಾರ್ಯದರ್ಶಿ ಮುಹಮ್ಮದ್ ಇಬ್ರಾಹಿಂ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಹೊಸದಾಗಿ ಗುರುತಿಸಲಾದ ತಾಣಗಳ ಅಭಿವೃದ್ಧಿಗೆ ಅಗತ್ಯ ಕ್ರಿಯಾಯೋಜನೆ ಮತ್ತು ಅಂದಾಜು ವೆಚ್ಚ ಸಿದ್ಧಪಡಿಸಿ, ಅನುಮೋದನೆ ಪಡೆದ ನಂತರ ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದಾರೆ.
ಸಂಗೀತ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಅನೇಕ ದಿಗ್ಗಜರನ್ನು ನೀಡಿರುವ ಜಿಲ್ಲೆ ಗದಗ. ಅದ್ಭುತ ಕಲಾ ಶ್ರೀಮಂತಿಕೆಯ ದೇಗುಲಗಳನ್ನು ಹೊಂದಿರುವ ಜಿಲ್ಲೆಯಾಗಿಯೂ ಗುರುತಿಸಿಕೊಂಡಿದೆ. ದೇಸಿ ಪರಂಪರೆಯ ಘಮಲನ್ನು ಇಂದಿಗೂ ಉಳಿಸಿಕೊಂಡಿರುವುದು ಇಲ್ಲಿನ ಹೆಚ್ಚುಗಾರಿಕೆ. ಆದರೆ ಇಲ್ಲಿನ ಕೆಲವೇ ಕೆಲವು ತಾಣಗಳನ್ನು ಹೊರತುಪಡಿಸಿದರೆ, ಜಿಲ್ಲೆಯ ಹಲವು ತಾಣಗಳು ಇಂದಿಗೂ ಪ್ರವಾಸಿಗರಿಗೆ ಮರೆಯಾಗಿಯೇ ಉಳಿದಿವೆ.
ಪ್ರವಾಸಿ ತಾಣಗಳ ಮೂಲಸೌಕರ್ಯ ಅಭಿವೃದ್ಧಿಗೆ ಸಿಗಬೇಕಿದೆ ಒತ್ತು:
ದೇಗುಲಗಳ ತೊಟ್ಟಿಲು ಎನಿಸಿಕೊಂಡಿರುವ ಲಕ್ಕುಂಡಿ ವಿದೇಶಿ ಪ್ರವಾಸಿಗರನ್ನು ಸೆಳೆಯುವಷ್ಟು ಸತ್ವ ಹೊಂದಿದೆ. ಆದರೆ, ಇಲ್ಲಿ ಪ್ರವಾಸಿಗರಿಗೆ ಬೇಕಿರುವ ಮೂಲಸೌಕರ್ಯಗಳ ಕೊರತೆ ಇದೆ. ಜಿಲ್ಲೆಯಲ್ಲಿನ ಬಹುತೇಕ ಪ್ರವಾಸಿತಾಣಗಳ ಸ್ಥಿತಿಯೂ ಇದೇ ರೀತಿಯಲ್ಲಿದೆ.
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಮಾಹಿತಿ ಮತ್ತು ಸೂಚನಾ ಫಲಕಗಳ ಕೊರತೆ ಇದೆ. ಪ್ರವಾಸಿ ತಾಣ ತಲುಪಲು ಸುಸಜ್ಜಿತ ರಸ್ತೆಗಳು ಮತ್ತು ಸಾರಿಗೆ ಸೌಲಭ್ಯಗಳಿಲ್ಲ. ಕೆಲವು ಕಡೆಗಳಲ್ಲಿ ಸ್ಮಾರಕಗಳ ರಕ್ಷಣೆಯೂ ಅತ್ಯಂತ ಕಳಪೆಯಾಗಿದೆ. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಯಾತ್ರಿ ನಿವಾಸಗಳು ಆರಂಭಗೊಳ್ಳಬೇಕಿದೆ.
‘ಗದಗ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಎಚ್.ಕೆ.ಪಾಟೀಲ ಅವರ ವಿಶೇಷ ಆಸಕ್ತಿ ಮೇರೆಗೆ ₹804 ಕೋಟಿ ವೆಚ್ಚದ ಸಮಗ್ರ ವರದಿ ತಯಾರಿಸಲಾಗಿದ್ದು, ಐದು ವರ್ಷಗಳ ಅವಧಿಯಲ್ಲಿ ಇದು ಅನುಷ್ಠಾನಗೊಂಡರೆ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಚಿತ್ರಣ ಬದಲಾಗಲಿದೆ’ ಎನ್ನುತ್ತಾರೆ ಅಧಿಕಾರಿಗಳು.
‘ಗದಗ ಡೆಸ್ಟಿನೇಷನ್’ ಯೋಜನೆ ಅಡಿ ಗದಗ ಜಿಲ್ಲೆಯ ಪ್ರವಾಸಿ ತಾಣಗಳ ಬ್ರ್ಯಾಂಡಿಂಗ್‌ಗೆ ಕ್ರಮವಹಿಸಲಾಗಿದೆ. ಹೋರ್ಡಿಂಗ್ಸ್, ಲೋಗೊ, ಎಚ್‌ಡಿ ವಿಡಿಯೊಗಳು, ಬ್ರೋಷರ್‌ಗಳು, ಡಾಕ್ಯುಮೆಂಟರಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ಪ್ರಚಾರ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
‘ಹೊಸ ಪ್ರವಾಸೋದ್ಯಮ ನೀತಿಯಿಂದಾಗಿ ಗದಗ ಜಿಲ್ಲೆಗೂ ಸಾಕಷ್ಟು ಅನುಕೂಲ ಆಗಲಿದೆ. ಜಿಲ್ಲೆಯಲ್ಲಿನ ಐತಿಹಾಸಿಕ ಸ್ಮಾರಕಗಳ ಮೂಲ ಉಳಿಸಿಕೊಂಡು ಸುಂದರಗೊಳಿಸುವ ಪ್ರಯತ್ನಗಳಿಗೆ ಈ ನೀತಿ ಬಲ ತುಂಬಲಿದೆ’ ಎಂಬ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರ ಭರವಸೆಯ ಮಾತುಗಳು ಅನುಷ್ಠಾನದ ರೂಪ ಪಡೆದರೆ ಗದಗ ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲೂ ತನ್ನದೇ ಹೆಜ್ಜೆ ಗುರುತು ಮೂಡಿಸಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಹೊಸ ಪ್ರವಾಸಿತಾಣಗಳ ಪಟ್ಟಿ ಗದಗ ತಾಲ್ಲೂಕು
* ಭೀಷ್ಮ ಕೆರೆ (116 ಅಡಿ ಎತ್ತರದ ಬಸವೇಶ್ವರ ಮೂರ್ತಿ
)* ವೀರನಾರಾಯಣ ದೇವಸ್ಥಾನ* ತ್ರಿಕೂಟೇಶ್ವರ ದೇವಸ್ಥಾನ* ಸೋಮೇಶ್ವರ ದೇವಸ್ಥಾನ
* ರಾಮೇಶ್ವರ ದೇವಸ್ಥಾನ
* ತೋಂಟದಾರ್ಯ ಮಠ
ವೀರೇಶ್ವರ ಪುಣ್ಯಾಶ್ರಮ* ಜಾಮಿಯಾ ಮಸೀದಿ* ಬೆಟಗೇರಿ ಚರ್ಚ್
* ಸಬರಮತಿ ಆಶ್ರಮ* ರಾಮಕೃಷ್ಣ ಆಶ್ರಮ* ವೆಂಕಟೇಶ್ವರ ದೇವಸ್ಥಾನ ವೆಂಕಟಾಪುರ
* ದಾವಲಮಲಿಕ್ ದರ್ಗಾ ಮುಳಗುಂದ
* ಸಿದ್ದೇಶ್ವರ ದೇವಸ್ಥಾನ ಮುಳಗುಂದ
* ಚಂದ್ರನಾಥ ಬಸದಿ ಮುಳಗುಂದ
* ಪಾರ್ವತಿ-ಪರಮೇಶ್ವರ ದೇವಸ್ಥಾನ ಹರ್ತಿ
* ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ
* ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
* ಬೆಟಗೇರಿಯ ವೀರಗಲ್ಲುಗಳು
* ಸರ್ಕಾರಿ ವಸ್ತು ಸಂಗ್ರಹಾಲಯ
* ಬ್ರಹ್ಮ ಜೀನಾಲಯ ದೇವಸ್ಥಾನ ಲಕ್ಕುಂಡಿ
* ನನ್ನೇಶ್ವರ ದೇವಸ್ಥಾನ ಲಕ್ಕುಂಡಿ
* ಮುಸಕಿನ ಭಾವಿ ಲಕ್ಕುಂಡಿ
* ಕಾಶೀ ವಿಶ್ವೇಶ್ವರ ದೇವಸ್ಥಾನ ಲಕ್ಕುಂಡಿ
* ಹಾಲಗುಂಡಿ ಬಸವೇಶ್ವರ ದೇವಸ್ಥಾನ ಲಕ್ಕುಂಡಿ
* ವಸ್ತು ಸಂಗ್ರಹಾಲಯ ಲಕ್ಕುಂಡಿಮುಂಡರಗಿ ತಾಲ್ಲೂಕು
* ವೀರಭದ್ರೇಶ್ವರ ದೇವಸ್ಥಾನ ಸಿಂಗಟಾಲೂರು
* ಹಮ್ಮಿಗಿ ಬ್ಯಾರೇಜ್ ಹಮ್ಮಿಗಿ
* ಅನ್ನದಾನೇಶ್ವರ ಮಠ ಮುಂಡರಗಿ
* ಕಪ್ಪತ್ತಗುಡ್ಡ
* ದೊಡ್ಡಬಸಪ್ಪ ದೇವಸ್ಥಾನ ಡಂಬಳ
* ಸೋಮೇಶ್ವರ ದೇವಸ್ಥಾನ ಡಂಬಳ
* ವಿಕ್ಟೋರಿಯಾ ರಾಣಿ ಕೆರೆ ಡಂಬಳ
* ಜಪದ ಬಾವಿ ಡಂಬಳ ರೋಣ ಹಾಗೂ ಗಜೇಂದ್ರಗಡ
* ಕಲ್ಲೇಶ್ವರ ದೇವಸ್ಥಾನ ರೋಣ
* ಗಜೇಂದ್ರಗಡ ಕೋಟೆ ಗಜೇಂದ್ರಗಡ
* ಕಾಲಕಾಲೇಶ್ವರ ಕ್ಷೇತ್ರ ಗಜೇಂದ್ರಗಡ
* ನಾಗೇಶ್ವರ ದೇವಸ್ಥಾನ (ಜೋಡು ಕಳಸ) ಸೂಡಿ
* ರಸದ ಬಾವಿ ನಾಗನ ಹೊಂಡ ಗಜೇಂದ್ರಗಡ
* ಭೀಮಾಂಬಿಕ ದೇವಸ್ಥಾನ ಇಟಗಿ * ಶಂಭುಲಿಂಗ ದೇವಸ್ಥಾನ ಇಟಗಿ ಶಿರಹಟ್ಟಿ ತಾಲ್ಲೂಕು * ಫಕೀರೇಶ್ವರ ಮಠ ಶಿರಹಟ್ಟಿ
* ಹೊಳಲಮ್ಮದೇವಿ ದೇವಸ್ಥಾನ ಶ್ರೀಮಂತಗಡ
* ಕೋಟೆ ಶಿರಹಟ್ಟಿ
* ವರವಿ ಮೌನೇಶ್ವರ ದೇವಸ್ಥಾನ ಶಿರಹಟ್ಟಿ
* ಮಾಗಡಿ ಕೆರೆ (ಪಕ್ಷಿ ಧಾಮ) ಶಿರಹಟ್ಟಿ ಲಕ್ಷ್ಮೇಶ್ವರ ತಾಲ್ಲೂಕು
* ಸೋಮೇಶ್ವರ ದೇವಸ್ಥಾನ ಲಕ್ಷ್ಮೀಶ್ವರ
* ಶಂಖ ಬಸದಿ ಲಕ್ಷ್ಮೀಶ್ವರ ನರಗುಂದ ತಾಲ್ಲೂಕು * ವೆಂಕಟೇಶ್ವರ ದೇವಸ್ಥಾನ ನರಗುಂದ
ಕಪ್ಪತ್ತಗುಡ್ಡ ಮೃಗಾಲಯದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಗದಗ ಜಿಲ್ಲಾ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಜನರನ್ನು ಆಕರ್ಷಿಸುತ್ತಿರುವುದು ಕಪ್ಪತ್ತಗುಡ್ಡ ಮತ್ತು ಬಿಂಕದಕಟ್ಟಿ ಮೃಗಾಲಯ. ಕಪ್ಪತ್ತಗುಡ್ಡ ತನ್ನ ಪ್ರಾಕೃತಿಕ ಸೊಬಗಿನಿಂದ ಪ್ರತಿವರ್ಷ ಸಾವಿರಾರು ಮಂದಿ ಪ್ರವಾಸಿಗರನ್ನು ಸೆಳೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತಹ ಉಪಕ್ರಮಗಳನ್ನೂ ಕೂಡ ಕೈಗೊಳ್ಳಲಾಗಿದೆ. ಸೂಚನಾ ಫಲಕಗಳ ಅಳವಡಿಕೆ ಸೆಲ್ಫಿ ಪಾಯಿಂಟ್ ಕ್ಯಾಂಟೀನ್ ಸಾರಿಗೆ ವ್ಯವಸ್ಥೆ ಸಫಾರಿ ಸೇರಿದಂತೆ ಅಚ್ಚುಕಟ್ಟಾದ ಸೌಲಭ್ಯಗಳನ್ನು ಒದಗಿಸಲಾಗಿದೆ. ಅದೇರೀತಿ ಬಿಂಕದಕಟ್ಟಿ ಮೃಗಾಲಯದಲ್ಲೂ ಪ್ರವಾಸಿ ಸ್ನೇಹಿ ವ್ಯವಸ್ಥೆ ಇದೆ. ಕಪ್ಪತ್ತಗುಡ್ಡ ಮತ್ತು ಮೃಗಾಲಯದಲ್ಲಿರುವ ಪ್ರವಾಸಿ ಸ್ನೇಹಿ ವ್ಯವಸ್ಥೆಗಳು ಜಿಲ್ಲೆಯ ಇತರೆ ತಾಣಗಳಿಗೂ ವಿಸ್ತರಣೆ ಆದರೆ ಜಿಲ್ಲೆಯ ಪ್ರವಾಸೋದ್ಯಮ ಇನ್ನಷ್ಟು ಖ್ಯಾತಿ ಗಳಿಸಲಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.