ADVERTISEMENT

ಚರಂಡಿಗಳಿಲ್ಲದ ಕುಂದ್ರಳ್ಳಿ: ಗ್ರಾಮ ಪಂಚಾಯತ್‌ನಿಂದ ನಿರ್ಲಕ್ಷ್ಯ

ನಾಗರಾಜ ಎಸ್‌.ಹಣಗಿ
Published 19 ಫೆಬ್ರುವರಿ 2025, 4:52 IST
Last Updated 19 ಫೆಬ್ರುವರಿ 2025, 4:52 IST
<div class="paragraphs"><p>ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಗಲೀಜು ನೀರು ಸಂಗ್ರಹವಾದ ನೋಟ</p></div>

ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಗಲೀಜು ನೀರು ಸಂಗ್ರಹವಾದ ನೋಟ

   

ಲಕ್ಷ್ಮೇಶ್ವರ: ತಾಲ್ಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದಲ್ಲಿ ಚರಂಡಿಗಳೇ ಇಲ್ಲ. ಹೀಗಾಗಿ ಇದಕ್ಕೆ ಚರಂಡಿ ಇಲ್ಲದ ಊರು ಎಂದೂ ಕರೆಯುತ್ತಾರೆ.

ಬಟ್ಟೂರು ಹೊರತು ಪಡಿಸಿದರೆ ಕುಂದ್ರಳ್ಳಿಯಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಗ್ರಾಮಸ್ಥರು ಬಳಕೆ ಮಾಡಿದ ಗಲೀಜು ನೀರು ಇರುವ ಕಚ್ಚಾ ರಸ್ತೆಗಳ ಮೇಲೆಯೆ ಹರಿಯುತ್ತಿದೆ. ಗ್ರಾಮದ ಊರ ಹೊರಗಿನ ರಸ್ತೆ ಅಂದರೆ ಕುಂದ್ರಳ್ಳಿ ತಾಂಡಾದಿಂದ ಕುಂದ್ರಳ್ಳಿಯಿಂದ ಬಟ್ಟೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಂತೂ ವರ್ಷವಿಡೀ ಗಲೀಜಿನಿಂದ ತುಂಬಿರುತ್ತದೆ.

ADVERTISEMENT

ನಿವಾಸಿಗಳು ಬಟ್ಟೆಬರೆ ತೊಳೆದ ಹಾಗೂ ಸ್ನಾನ ಮಾಡಿದ ನೀರು ರಸ್ತೆಯಲ್ಲಿ ಹರಿಯುವುದರಿಂದ ರಾಡಿ ನೀರು ಜನರಿಗೆ ಪ್ರತಿದಿನ ಪ್ರೋಕ್ಷಣೆ ಆಗುತ್ತದೆ. ಸದಾಕಾಲ ಹೊಲಸು ನೀರು ಹರಿಯುವುದರಿಂದ ಈ ಭಾಗದಲ್ಲಿ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ವರ್ಷವಿಡೀ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುವುದರಿಂದ ಗ್ರಾಮಸ್ಥರಿಗೆ ರೋಗಬಾಧೆ ಕಾಡುತ್ತಿದೆ. ಅಲ್ಲದೆ ಮಲಿನ ನೀರು ಮನೆ ಎದುರು ಹರಿಯುವುದರಿಂದ ಗಬ್ಬು ವಾಸನೆಗೆ ನಿವಾಸಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ.

ಇನ್ನು ಇದೇ ಪರಿಸ್ಥಿತಿ ಊರಿನ ಬಸವಣ್ಣ ಮತ್ತು ಮಾರುತಿ ದೇವರ ದೇವಸ್ಥಾನದ ಎದುರು ಇದೆ. ಅಲ್ಲಿಯೂ ಮಲಿನ ವಾತಾವರಣ ಎದ್ದು ಕಾಣುತ್ತಿದೆ. ದೇವಸ್ಥಾನದ ಮುಂದೆ ಯಾವಾಗಲೂ ಗಲೀಜು ನೀರು ಹರಿಯುತ್ತಲೇ ಇರುತ್ತದೆ. ಇಷ್ಟಕ್ಕೆಲ್ಲ ಕಾರಣ ಚರಂಡಿಗಳ ಕೊರತೆ.

ಗ್ರಾಮದ ಮೇಲ್ಭಾಗದಿಂದ ಬರುವ ಗಲೀಜು ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಅನಿವಾರ್ಯವಾಗಿ ಗ್ರಾಮಸ್ಥರು ಮಲಿನ ವಾತಾವರಣದಲ್ಲಿಯೇ ಬದುಕು ಸಾಗಿಸುತ್ತಿದ್ದಾರೆ.

’ಪೂರ್ವ ದಿಕ್ಕಿನ ಅಂಗನವಾಡಿ ಕೇಂದ್ರದಿಂದ ಬಸ್ ನಿಲ್ದಾಣದ ಬಾವಿವರೆಗೆ ಮತ್ತು ಅದೇ ಬಾವಿಯಿಂದ ಪೂರ್ವ ದಿಕ್ಕಿನ ರಸ್ತೆಯಿಂದ ನೀರಿನ ಸಂಪ್ವರೆಗೆ ಚರಂಡಿ ಇಲ್ಲ. ಹೀಗಾಗಿ ಎರಡೂ ಮುಖ್ಯ ರಸ್ತೆಯಲ್ಲಿ ಯಾವಾಗಲೂ ಹೊಲಸು ತುಂಬಿಕೊಂಡಿರುತ್ತದೆ. ಕಾರಣ ಪಂಚಾಯ್ತಿಯವರು ಆದಷ್ಟು ಬೇಗನೆ ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳಬೇಕು’ ಎಂದು ಗ್ರಾಮದ ನಿವಾಸಿ ಶಿವಾನಂದ ದೇಸಾಯಿ ಒತ್ತಾಯಿಸಿದರು.

‘ಈಗಾಗಲೇ ದೇವಸ್ಥಾನದ ರಸ್ತೆಯಲ್ಲಿ ಚರಂಡಿ ನಿರ್ಮಿಸಲು ಕ್ರಮಕೈಗೊಳ್ಳಲಾಗಿದೆ. ಅದರಂತೆ ಬಸ್ ನಿಲ್ದಾಣದ ಬಾವಿಯಿಂದ ಸಂಪ್‍ವರೆಗಿನ ರಸ್ತೆಗುಂಟ ಚರಂಡಿ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಭಾಗದಲ್ಲಿ ರಸ್ತೆ ಇಕ್ಕಟ್ಟಾಗಿದೆ. ಹೀಗಾಗಿ ಚರಂಡಿ ನಿರ್ಮಿಸಲು ಬೇಕಾಗುವಷ್ಟು ಸ್ಥಳಾವಕಾಶ ಇಲ್ಲ. ಇದರಿಂದಾಗಿ ಸ್ವಲ್ಪ ಎತ್ತರವಾಗಿ ಸಿಸಿ ರಸ್ತೆ ನಿರ್ಮಿಸಿ ರಸ್ತೆಯ ಎರಡೂ ಬದಿಯಲ್ಲಿ ಗಲೀಜು ನೀರು ಹೋಗುವಂತೆ ಮಾಡಲು ತೀರ್ಮಾನಿಸಲಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಗಲೀಜು ನೀರು ಓರ್ವ ರೈತರ ಹೊಲದಲ್ಲಿ ಹಾಯ್ದು ಹಳ್ಳಕ್ಕೆ ಸೇರಬೇಕು. ಆದರೆ ಹೊಲದ ಮಾಲೀಕರು ಗಲೀಜು ನೀರು ಬಿಟ್ಟುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಸಭೆ ನಡೆಸಿ ಅವರ ಮನವೊಲಿಸಲು ಪ್ರಯತ್ನಿಸಲಾಗುವುದು’ ಎಂದು ಪಿಡಿಒ ಮಲ್ಲೇಶ ಮಾದರ ತಿಳಿಸಿದರು.

ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುಂದ್ರಳ್ಳಿ ಗ್ರಾಮದ ಬಸವಣ್ಣ ಮತ್ತು ಮಾರುತಿ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಹರಿಯುತ್ತಿರುವ ಮಲಿನ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.