ADVERTISEMENT

ಮೂಢನಂಬಿಕೆ: ಕುರಿಮರಿ ಬಲಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:25 IST
Last Updated 10 ಏಪ್ರಿಲ್ 2019, 17:25 IST
ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿಗೆ ತೆರಳುವ ಮಾರ್ಗಮಧ್ಯದಲ್ಲಿ ಕುರಿಮರಿಯನ್ನು ಗಿಡಕ್ಕೆ ನೇತು ಹಾಕಿರುವುದು
ಲಕ್ಷ್ಮೇಶ್ವರ ಸಮೀಪದ ಪುಟಗಾಂವ್ ಬಡ್ನಿಗೆ ತೆರಳುವ ಮಾರ್ಗಮಧ್ಯದಲ್ಲಿ ಕುರಿಮರಿಯನ್ನು ಗಿಡಕ್ಕೆ ನೇತು ಹಾಕಿರುವುದು   

ಲಕ್ಷ್ಮೇಶ್ವರ: ಕುರಿಗಳಿಗೆ ಯಾವುದೇ ಸಾಂಕ್ರಾಮಿಕ ರೋಗಗಳು ಬರಬಾರದು ಎಂಬ ಉದ್ಧೇಶದಿಂದ ಜೀವಂತ ಕುರಿಮರಿಯನ್ನು ಬಲಿ ನೀಡುತ್ತಿರುವ ಘಟನೆಗಳು ತಾಲ್ಲೂಕಿನ ವಿವಿಧ ಕಡೆ ಕಂಡು ಬರುತ್ತಿವೆ.

ಸಮೀಪದ ಗೊಜನೂರು, ಪುಟಗಾಂವ್ ಬಡ್ನಿ, ಬಟ್ಟೂರು ಗ್ರಾಮಗಳಲ್ಲಿ ಜೀವಂತ ಕುರಿಮರಿಯನ್ನು ದೇವರಿಗೆ ಬಲಿಕೊಟ್ಟು ಜಾಲಿ ಗಿಡಕ್ಕೆ ನೇತು ಹಾಕಿರುವುದು ಕಂಡು ಬಂದಿದೆ. ಸದಾಕಾಲ ಅರಣ್ಯದಲ್ಲಿ ಕುರಿಗಳೊಂದಿಗೆ ವಾಸಿಸುವ, ವಿಶೇಷವಾಗಿ ಮಹಾರಾಷ್ಟ್ರ ಭಾಗದ ಕುರುಬರು ಇಂಥ ಆಚರಣೆ ನಡೆಸುತ್ತಾರೆ ಎಂದು ಹೇಳಲಾಗುತ್ತಿದೆ.

ದೂರದ ಮಹಾರಾಷ್ಟ್ರದ ಸಾಂಗ್ಲಿ, ಗಡಹಿಂಗ್ಲಜ, ಕೊಲ್ಲಾಪುರಗಳಿಂದ ಕುರಿಗಳನ್ನು ಮೇಯಿಸುತ್ತ ಬರುವ ಕುರುಬರು ಇಂಥ ಮೂಢನಂಬಿಕೆಯನ್ನು ಆಚರಿಸುತ್ತಾರೆ. ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗುತ್ತಿರುವ ಸಂದರ್ಭದಲ್ಲಿ ಕುರಿ ಮರಿಯನ್ನು ದೇವಿಗೆ (ಅಮ್ಮ) ಅಥವಾ ದೈವಕ್ಕೆ ಬಲಿ ಕೊಟ್ಟು ತಲೆ ಕೆಳಕ್ಕೆ ಮಾಡಿ ಗಿಡಕ್ಕೆ ನೇತು ಹಾಕಿ ಅಲ್ಲಿಂದ ಕುರಿ ಹಿಂಡನ್ನು ಹೊಡೆದುಕೊಂಡು ಹೋಗಿ ಬಿಡುತ್ತಾರೆ. ಹೀಗೆ ಮಾಡುವುದರಿಂದ ಇತರೆ ಕುರಿಗಳಿಗೆ ರೋಗ ಬರುವುದಿಲ್ಲ ಎಂಬ ನಂಬಿಕೆ ಅವರದು.

ADVERTISEMENT

‘ನಮ್ಮ ಭಾಗದ ಕುರಿಗಾರರು ಇಂಥ ಆಚರಣೆ ಮಾಡುವುದರಿಲ್ಲ. ಆದರೆ ಮಹಾರಾಷ್ಟ್ರಗಳಿಂದ ಬರುವ ಕುರುಬರು ಕುರಿಮರಿ ಬಲಿ ಕೊಡುತ್ತಾರೆ’ ಎಂದು ಪುಟಗಾಂವ್ ಬಡ್ನಿ ಗ್ರಾಮದ ಕೋಟೆಪ್ಪ ಕೊಪ್ಪದ ಹಾಗೂ ಶಿವಾನಂದ ಹುರಳಿಕುಪ್ಪಿ ಹೇಳಿದರು.

‘ಕುರಿ ಮರಿಗಳನ್ನು ಬಲಿ ಕೊಡುವುದರಿಂದ ರೋಗಗಳು ಬರುವುದಿಲ್ಲ ಎಂಬುದು ತಪ್ಪು. ಇದೊಂದು ಮೂಢನಂಬಿಕೆ. ಬೇಸಿಗೆಯಲ್ಲಿ ಕುರಿ, ಆಡುಗಳಿಗೆ ಸಾಂಕ್ರಾಮಿಕ ರೋಗ ಬರುವುದು ಸಾಮಾನ್ಯ. ಆಗ ಪಶುವೈದ್ಯರಿಗೆ ತೋರಿಸಿ ಚಿಕಿತ್ಸೆ ಮಾಡಿಸಬೇಕು’ ಎಂದು ತಾಲ್ಲೂಕಾ ಪಶು ವೈದ್ಯಾಧಿಕಾರಿ ಡಾ.ಎನ್.ಎ. ಹವಳದ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.