ಲಕ್ಷ್ಮೇಶ್ವರ: ಶಕ್ತಿ ಯೋಜನೆ ಜಾರಿ ನಂತರ ಬಸ್ ಪ್ರಯಾಣ ಹೈರಾಣಾಗುತ್ತಿದೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ವಿವಿಧ ಊರುಗಳಿಗೆ ಬಸ್‍ನಲ್ಲಿ ಪ್ರಯಾಣಿಸುತ್ತಾರೆ. ಹೀಗಾಗಿ ಪ್ರತಿದಿನ ಬಸ್‍ಗಳು ಪ್ರಯಾಣಿಕರಿಂದ ತುಂಬಿಕೊಂಡಿರುತ್ತವೆ. ಶಕ್ತಿ ಯೋಜನೆ ಅನುಷ್ಠಾನಕ್ಕೆ ಬಂದ ನಂತರ ಬಸ್‍ಗಳ ಸಂಖ್ಯೆ ಹೆಚ್ಚಾಗಿದರೆ ಸಮಸ್ಯೆ ಉಲ್ಭಣಿಸುತ್ತಿರಲಿಲ್ಲ. ಆದರೆ ಬಸ್ ಪೂರೈಕೆ ಆಗಲಿಲ್ಲ. ಹೀಗಾಗಿ ಇರುವ ಬಸ್‍ಗಳಲ್ಲೇ ಪ್ರಯಾಣಿಸಲು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಯೋಜನೆ ಜಾರಿ ಆಗಿ ನಾಲ್ಕೈದು ತಿಂಗಳು ಕಳೆಯುತ್ತ ಬಂದರೂ ಪರಿಸ್ಥಿತಿ ಸುಧಾರಿಸುವ ಬದಲು ಮತ್ತಷ್ಟು ಸಂಕೀರ್ಣವಾಗುತ್ತಿದೆ. ಲಕ್ಷ್ಮೇಶ್ವರದ ಸಾರಿಗೆ ಘಟಕದಿಂದ ಸಂಚರಿಸುವ ಎಲ್ಲ ಬಸ್‍ಗಳಲ್ಲೂ ಜನರ ಸಂಖ್ಯೆ ಅತ್ಯಧಿಕವಾಗಿರುತ್ತದೆ. ಆಸನಕ್ಕಾಗಿ ಕಚ್ಚಾಟ, ನೂಕಾಟ, ತಳ್ಳಾಟ ಕೊನೆಗೆ ಹೊಡೆದಾಟಗಳೂ ನಡೆಯುತ್ತಿವೆ. ಇನ್ನು ದಿನಾಲೂ ಶಾಲಾ ಕಾಲೇಜುಗಳಿಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿಗಳ ಕಷ್ಟ ಹೇಳತೀರದು.
ಜನಜಂಗುಳಿಯಿಂದಾಗಿ ಶಾಲಾ–ಕಾಲೇಜು ಮಕ್ಕಳು ಬಸ್ ಹತ್ತಲು ಪರದಾಡುತ್ತಿದ್ದಾರೆ. ಆಸನ ಸಿಗುವುದಂತೂ ಕನಸಿನ ಮಾತು. ಪ್ರಯಾಣಿಕರು ಹೆಚ್ಚಾಗಿರುವುದರಿಂದ ವಿದ್ಯಾರ್ಥಿಗಳು ಬಾಗಿಲಿಗೆ ಜೋತು ಬಿದ್ದು ಪ್ರಯಾಣಿಸುತ್ತಿದ್ದು ಇದು ಹೆಚ್ಚು ಅಪಾಯಕಾರಿ ಆಗುತ್ತಿದೆ.
ಬಸ್‍ಗಾಗಿ ವಾರದಲ್ಲಿ ಎರಡ್ಮೂರು ಬಾರಿ ಪ್ರತಿಭಟನೆ ಸಾಮಾನ್ಯ ಎಂಬಂತಾಗಿದೆ.
‘ಸರ್ಕಾರ ಎಚ್ಚೆತ್ತುಕೊಂಡು ಹೆಚ್ಚು ಬಸ್ ಪೂರೈಸಲು ಕ್ರಮಕೈಗೊಳ್ಳಬೇಕು. ಅಂದಾಗ ಮಾತ್ರ ಸಮಸ್ಯೆಗೆ ಮುಕ್ತಿ ಸಿಗಲಿದೆ’ ಎಂದು ಶಿಗ್ಲಿ ಗ್ರಾಮದ ನಿವಾಸಿ ಬಿಜೆಪಿ ಮುಖಂಡ ಸೋಮಣ್ಣ ಡಾಣಗಲ್ಲ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.