
ನರಗುಂದ: ಪಟ್ಟಣದ ಬಸ್ ನಿಲ್ದಾಣ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದ್ದು ಇಲ್ಲಿ ನಿರಂತರ ಪ್ರಯಾಣಿಕರ ದಂಡು ಸಾಮಾನ್ಯ ನೋಟ.
ಹುಬ್ಬಳ್ಳಿ ಬಸ್ ನಿಲ್ದಾಣ ಹೊರತು ಪಡಿಸಿದರೆ ಈ ಭಾಗದಲ್ಲಿ ನರಗುಂದ ಬಸ್ ನಿಲ್ದಾಣವೇ ವಿಶಾಲವಾವಾಗಿದೆ. ಆದರೆ ಇಲ್ಲಿ ಭದ್ರತೆ ಸವಾಲಾದರೆ, ಸ್ವಚ್ಛತೆ ಮರೀಚಿಕೆಯಾಗಿದೆ. ನಿತ್ಯ 800ಕ್ಕೂ ಹೆಚ್ಚು ಬಸ್‌ಗಳು 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ಇಲ್ಲಿ ಸಂಚರಿಸುತ್ತಾರೆ. ಆದರೆ ಪ್ರಯಾಣಿಕರಿಗೆ ಅಗತ್ಯವಿರುವ ಸೌಲಭ್ಯಗಳು ಸಮರ್ಪಕವಾಗಿ ದೊರೆಯುತ್ತಿಲ್ಲ. ಇದರಿಂದ ಪ್ರಯಾಣಿಕರು, ಸರ್ಕಾರವನ್ನು ಹಾಗೂ ಸಾರಿಗೆ ಸಂಸ್ಥೆಯನ್ನು ಶಪಿಸುವಂತಾಗಿದೆ.
ಹುಬ್ಬಳ್ಳಿಯಿಂದ ಹೊರಡುವ ಹಾಗೂ ವಿಜಯಪುರ, ಬಾಗಲಕೋಟೆಯಿಂದ ಬರುವ ಬಸ್‌ಗಳು ಪ್ರಯಾಣಿಕರ ಅನುಕೂಲಕ್ಕಾಗಿ ವಿಶ್ರಾಂತಿಗೆ ನಿಲುಗಡೆ ಆಗುತ್ತವೆ. ಈಚೆಗೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ತೆರಳಲು ಇದೇ ಬಸ್ ಬದಲಾವಣೆಯ ಮುಖ್ಯ ಬಸ್ ನಿಲ್ದಾಣವಾಗಿದೆ. ಅದರಲ್ಲೂ ದೂರದ ಕೊಪ್ಪಳ, ಕುಷ್ಟಗಿ, ಸಿಂಧನೂರದಿಂದ ಇದೇ ಮಾರ್ಗವಾಗಿ ಯಲ್ಲಮ್ಮನ ಗುಡ್ಡಕ್ಕೆ ತೆರಳುತ್ತಾರೆ.
ಆದರೆ ಸಹಸ್ರಾರು ಪ್ರಯಾಣಿಕರಿಗೆ ಅಗತ್ಯವಿರುವ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹೆಚ್ಚಿನ ಶೌಚಾಲಯಗಳು ಇಲ್ಲ. ಹೀಗಾಗಿ ಬಸ್ ನಿಲ್ದಾಣದ ಆವರಣವು ಶೌಚದ ತಾಣವಾಗಿ ಮಾರ್ಪಟ್ಟಿದೆ.
ಶುದ್ಧ ನೀರಿನ ಘಟಕ ಸ್ಥಗಿತ: ಬಸ್ ನಿಲ್ದಾಣದ ಆವರಣದಲ್ಲಿಯೇ ಶುದ್ಧ ಕುಡಿಯುವ ನೀರಿನ ಘಟಕವಿದೆ. ಆದರೆ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇನ್ನೂ ಬಳಕೆ ಮಾಡುವ ನೀರು ಸಹಿತ ಕೇವಲ ಒಂದೇ ನಲ್ಲಿಯಿಂದ ಕೂಡಿದೆ. ಅದು ಸಮರ್ಪಕವಾಗಿ ದೊರೆಯದಂತಾಗಿದೆ. ಅದರಲ್ಲೂ ಯಲ್ಲಮ್ಮನ ಗುಡ್ಡದ ಜಾತ್ರೆಗೆ ತೆರಳಲು ಬರುವ ಪ್ರಯಾಣಿಕರಂತೂ ನೀರಿನ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.
ಭದ್ರತೆಯೇ ಸವಾಲು: ನಿತ್ಯ 50 ಸಾವಿರಕ್ಕೂ ಹೆಚ್ಚು ಪ್ರಯಾಣಿಕರು ನರಗುಂದ ಮೂಲಕ ಸಂಚರಿಸುತ್ತಾರೆ. ಅದರಲ್ಲೂ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಕೆಲವೊಮ್ಮೆ ಮಹಿಳೆಯರನ್ನು, ವಿದ್ಯಾರ್ಥಿನಿಯರನ್ನು ಚುಡಾಯಿಸುವ ಪ್ರಸಂಗಗಳು ಹಾಗೂ ಕಳವು ಪ್ರಕರಣಗಳು ನಡೆಯುವುದುಂಟು.
‘ಭದ್ರತೆಗಾಗಿ ಪ್ರತ್ಯೇಕವಾಗಿ ಸಾರಿಗೆ ಸಿಬ್ಬಂದಿ ನೇಮಿಸಬೇಕು. ಹೆಚ್ಚಿನ ಪೊಲೀಸರನ್ನು ನಿಯೋಜಿಸಲು ಪೊಲೀಸ್ ಇಲಾಖೆಗೆ ವಿನಂತಿಸಬೇಕು. ಈಗ ಕೇವಲ ನಾಲ್ಕು ಸಿಸಿ ಕ್ಯಾಮರಾಗಳಿವೆ. ಇನ್ನೂ ನಾಲ್ಕು ಸಿಸಿ ಕ್ಯಾಮರಾಗಳು ಅಗತ್ಯವಿದೆ’ ಎಂದು ನಿತ್ಯ ಪ್ರಯಾಣಿಸುವ ಐಶ್ವರ್ಯ ಹೇಳುತ್ತಾರೆ.
ಸ್ವಚ್ಛತೆ ಮರೀಚಿಕೆ: ಬಸ್ ನಿಲ್ದಾಣದ ಆವರಣವು ವಿಶಾಲವಾಗಿರುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿ ಕಂಡರೆ ಗ್ರಾಮೀಣ ಬಸ್ ನಿಲ್ದಾಣದ ಭಾಗವಂತೂ ಶೌಚಾಲಯವಾಗಿ ಮಾರ್ಪಡುತ್ತಿದೆ. ಮಳೆಗಾಲದಲ್ಲಿ ಕೆಸರಿನ ಹೊಂಡವಾಗಿ ಬಿಡುತ್ತದೆ. ಪುರುಷರ ಶೌಚಾಲಯದ ಪಕ್ಕದಲ್ಲಿ ತ್ಯಾಜ್ಯ ರಾಶಿ ಹೇಳತೀರದಾಗಿದೆ. ಮಹಿಳಾ ಶೌಚಾಲಯದ ಪಕ್ಕದ ಜಾಗೆ ಬಹಿರ್ದೆಸೆ ತಾಣವಾಗುತ್ತಿದೆ. ಇದರಿಂದ ಸ್ವಚ್ಛತೆ ಮರೀಚಿಕೆಯಾಗಿದೆ.
ಖಾಸಗಿ ವಾಹನ ನಿಯಂತ್ರಣವಿಲ್ಲ: ಆಟೊಗಳನ್ನು ಬಸ್ ನಿಲ್ದಾಣದ ಆವರಣದಲ್ಲಿ ತಮಗೆ ಮನ ಬಂದಂತೆ ನಿಲುಗಡೆ ಮಾಡುತ್ತಿದ್ದು, ಇವುಗಳ ನಿಯಂತ್ರಣ ಇಲ್ಲದಂತಾಗಿದೆ. ಬೈಕ್ ನಿಲುಗಡೆಗೆ ಪ್ರತ್ಯೇಕ ಜಾಗ ತೋರಿಸದ ಕಾರಣ ಬೈಕ್ ಎಲ್ಲೆಂದರಲ್ಲಿ ನಿಲುಗಡೆ ಮಾಡಲಾಗುತ್ತಿದೆ.
‘ಒಟ್ಟಾರೆ ನರಗುಂದ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ಬಸ್ ಸಂಚಾರಕ್ಕೆ ತಕ್ಕಂತೆ ಸೌಲಭ್ಯಗಳು ದೊರೆಯಬೇಕಿದೆ. ಬೈಕ್ ಗಳ ನಿಲುಗಡೆಗೆ ಟೆಂಡರ್ ಕರೆಯಬೇಕಿದೆ. ಆಗ ಪ್ರಯಾಣಿಕರು ಸುರಕ್ಷಿತ ಪ್ರಯಾಣ ಮಾಡಲು ಸಾಧ್ಯ’ ಎಂದು ಪಟ್ಟಣದ ನಾಗರಿಕ ವಿಠ್ಠಲ ಜಾಧವ ಹೇಳಿದರು.
'ಈಗಾಗಲೇ ಗ್ರಾಮೀಣ ಬಸ್ ನಿಲ್ದಾಣ ಸ್ವಚ್ಛತೆ ಮಾಡಲಾಗಿದೆ. ಭದ್ರತೆ ದೃಷ್ಟಿಯಿಂದ ಇನ್ನೂ ಎರಡು ಸಿಸಿ ಕ್ಯಾಮೆರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ತಾಂತ್ರಿಕ ತೊಂದರೆ ಯಿಂದ ನೀರಿನ ಶುದ್ಧೀಕರಣ ಘಟಕ ಬಂದಾಗಿದೆ. ಎರಡು ದಿನದಲ್ಲಿ ಸರಿಪಡಿಸಿ ಆರಂಭಿಸಲಾಗುವುದು. ಬಸ್ ನಿಲ್ದಾಣವನ್ನು ಸ್ವಚ್ಛತೆ ಯಾಗಿಡಲು ನಾಗರಿಕ ಪ್ರಜ್ಞೆ ಅಗತ್ಯವಿದೆ' ಎಂದು ಎನ್‌ಡಬ್ಲುಕೆಆರ್‌ಟಿಸಿ ನರಗುಂದ ಡಿಪೊ ವ್ಯವಸ್ಥಾಪಕ ಪರುಶರಾಮ ಪ್ರಭಾಕರ್ ಹೇಳಿದರು.
ಶೌಚಾಲಯ ಪಕ್ಕದ ತ್ಯಾಜ್ಯ ಸ್ವಚ್ಛತೆ ಮಾಡಿ ಅಲ್ಲಿಯೇ ಮಹಾನಗರಗಳ ಮಾದರಿ ಯಲ್ಲಿ ಬೈಕ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಅದಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆಪರುಶರಾಮ ಪ್ರಭಾಕರ್ ಎನ್‌ಡಬ್ಲುಕೆಆರ್‌ಟಿಸಿ ನರಗುಂದ ಡಿಪೊ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.