ಮುಳಗುಂದ: ವಾರದ ಸಂತೆ (ಬುಧವಾರ) ನಡೆಯುವ ಎಪಿಎಂಸಿ ಉಪ ಮಾರುಕಟ್ಟೆ ಆವರಣ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಆಗದ ಪರಿಣಾಮ ಕೃಷಿಕರಿಗೆ, ತರಕಾರಿ, ದಿನಸಿ ವ್ಯಾಪಾರಸ್ಥರಿಗೆ ಹಾಗೂ ಗ್ರಾಹಕರಿಗೆ ತೀವ್ರ ತೊಂದರೆಯಾಗಿದೆ.
ಪಟ್ಟಣ ಬೆಳೆದಂತೆ ಮುಖ್ಯರಸ್ತೆಗಳು ಕಿರಿದಾದ ಕಾರಣ 2012ರಲ್ಲಿ ವಾರದ ಸಂತೆ ಸ್ಥಳವನ್ನು ಇಲ್ಲಿನ ಎಪಿಎಂಸಿ ಉಪ ಮಾರುಕಟ್ಟೆ ಆವರಣಕ್ಕೆ ಸ್ಥಳಾಂತರಿಸಲಾಗಿತ್ತು. ಅಂದಿನಿಂದ ವಾರದ ಸಂತೆ ಇದೇ ಆವರಣದಲ್ಲಿ ನಡೆಯುತ್ತಿದೆ. ಸಂತೆ ದಿನ ತರಕಾರಿ ವ್ಯಾಪಾರಸ್ಥರಿಗೆ ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆ ಮತ್ತು ಸ್ವಚ್ಛತೆ ನಿರ್ವಹಣೆಯನ್ನು ಸ್ಥಳೀಯ ಪಟ್ಟಣ ಪಂಚಾಯಿತಿ ನಿರ್ವಹಿಸುತ್ತಿದೆ. ಆದರೆ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ.
ಎಪಿಎಂಸಿ ಆವರಣ ಮತ್ತು ಗೇಟ್ ಬಳಿ ಮಳೆ ನೀರು ಹೊರಹಾಕಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮಳೆಗಾಲದಲ್ಲಿ ನೀರು ನಿಂತು ದುರ್ನಾತ, ಸೊಳ್ಳೆ ಉತ್ಪತ್ತಿಯಾಗಿ ವ್ಯಾಪಾರಿಗಳು, ಬರುವ ಗ್ರಾಹಕರಿಗೆ ತೊಂದರೆ ಉಂಟಾಗಿದೆ. ಹೊರ ಭಾಗದಲ್ಲಿ ಕೂಡ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಸಮಸ್ಯೆ ಉದ್ಭವಿಸಿದೆ. ಎಪಿಎಂಸಿ ಆವರಣ ವಿಶಾಲವಾಗಿದ್ದು, ಒಂದು ಭಾಗದಲ್ಲಿ ಎರಡು ಶೆಡ್‌ಗಳಿವೆ. ಇನ್ನೊಂದು ಭಾಗದಲ್ಲಿ ಖಾಲಿ ಜಾಗವಿದ್ದು ಅಲ್ಲಿ ಕೂಡ ಶೆಡ್ ಹಾಗೂ ಹೊರಭಾಗದಲ್ಲಿ ಚರಂಡಿ ನಿರ್ಮಾಣ ಅಗತ್ಯವಿದ್ದು, ಕ್ರಮ ಕೈಗೊಳ್ಳುವಂತೆ ಇಲ್ಲಿನ ರೈತರು, ವ್ಯಾಪಾರಿಗಳ ಸಂಘ ಮನವಿ ಮಾಡಿತ್ತು. ಆದರೆ, ಈವರೆಗೂ ಕ್ರಮ ಕೈಗೊಳ್ಳುವಲ್ಲಿ ಗದಗ ಎಪಿಎಂಸಿ ಸಮಿತಿ ಹಾಗೂ ಸ್ಥಳೀಯ ಪಟ್ಟಣ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಇತ್ತೀಚೆಗೆ ಕಾಟಾಚಾರಕ್ಕೆ ಎನ್ನುವಂತೆ ಮಣ್ಣು ಹಾಕಿ ಗುಂಡಿ ಮುಚ್ಚುವ ಕಾಮಗಾರಿ ನಡೆದಿದೆ. ಆದರೂ ನೀರು ನಿಲ್ಲುವ ತೊಂದರೆ ತಪ್ಪಿಲ್ಲ.
ಪಟ್ಟಣದಲ್ಲಿ ಎಪಿಎಂಸಿ ಉಪ ಮಾರುಕಟ್ಟೆ ನಿರ್ಮಾಣದ ಆರಂಭದಲ್ಲಿ ಕೃಷಿ ಉತ್ಪನ್ನಗಳ ವಹಿವಾಟು ಇಲ್ಲಿಯೇ ನಡೆಯುತ್ತಿತ್ತು. ದಲಾಲಿ ಅಂಗಡಿಗಳು ಸಹ ಇದ್ದವು. ಇದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ರೈತರಿಗೆ ಈ ಮಾರುಕಟ್ಟೆ ಅನುಕೂಲವಾಗಿತ್ತು. ಆದರೆ, ಕೆಲವು ವರ್ಷಗಳ ಬಳಿಕ ಬಂದ್ ಮಾಡಲಾಯಿತು. ಪರಿಣಾಮ ರೈತರು ದೂರದ ಗದಗ, ಲಕ್ಷ್ಮೇಶ್ವರ ಮಾರುಕಟ್ಟೆಯನ್ನು ಅವಲಂಬಿಸುವ ಅನಿವಾರ್ಯತೆ ಬಂದೊದಗಿದೆ. ಮತ್ತೆ ದಲಾಲಿ ಅಂಗಡಿ ಆರಂಭಿಸಿ ರೈತರ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ ಮಾಡುವಂತೆ ರೈತರು ಹಲವು ವರ್ಷಗಳಿಂದ ಒತ್ತಾಯಿಸುತ್ತಾ ಬಂದಿದ್ದಾರೆ. ಆದರೆ, ಈವರೆಗೂ ಅದು ಈಡೇರಿಲ್ಲ ಎನ್ನುತ್ತಾರೆ ರೈತ ಸಂಘದ ಮುಖಂಡ ದತ್ತಪ್ಪ ಯಳವತ್ತಿ.
ಎಪಿಎಂಸಿ ಆವರಣದಲ್ಲಿನ ಕಟ್ಟಡಗಳು, ಗೋದಾಮುಗಳು ಶಿಥಿಲಗೊಂಡಿದ್ದು, ಬೀಳುವ ಹಂತದಲ್ಲಿವೆ. ಅವುಗಳ ಪುನರ್‌ನಿರ್ಮಾಣ ಕಾಮಗಾರಿ ನಡೆಯಬೇಕಿದೆ. ಮುಖ್ಯವಾಗಿ ಅತಿಥಿಗೃಹ ಕಟ್ಟಡ ಸಂಪೂರ್ಣ ಶಿಥಿಲವಾಗಿ ಸ್ಲ್ಯಾಬ್ ಬಿದ್ದಿದೆ. ಸುತ್ತಲೂ ಜಾಲಿಗಿಡಗಳು ಬೆಳೆದು ನಿಂತಿವೆ. ಚರಂಡಿ ಕಾಮಗಾರಿ ಸಂದರ್ಭದಲ್ಲಿ ತೆಗೆದು ಹಾಕಿದ ಮಣ್ಣಿನ ಗುಡ್ಡೆ ಹಾಗೆಯೇ ಬಿಡಲಾಗಿದೆ. ಇನ್ನೊಂದು ಭಾಗದಲ್ಲಿ ಶೆಡ್‌ಗಳ ಬಾಗಿಲು, ಚಾವಣಿ ತಗಡುಗಳು ಕಿತ್ತು ಹೋಗಿದ್ದು ಅವ್ಯವಸ್ಥೆಯ ಆಗರವಾಗಿದೆ. ಹರಾಜು ಕಟ್ಟೆ ಇದ್ದರೂ ಪ್ರಯೋಜನಕ್ಕೆ ಬಾರದಾಗಿದೆ.
ಗದಗ ಎಪಿಎಂಸಿ ವತಿಯಿಂದ 2020ರಲ್ಲಿ ಶೆಡ್ ಮತ್ತು ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿ ನಡೆದಿದೆ. ಆದರೆ, ಅದು ಅವೈಜ್ಞಾನಿಕವಾಗಿದ್ದು, ಮತ್ತಷ್ಟು ಸಮಸ್ಯೆ ಸೃಷ್ಟಿಸಿದೆ. ಕೃಷಿಕರು, ತರಕಾರಿ ವ್ಯಾಪಾರಸ್ಥರಿಗೆ ಶೌಚಾಲಯ, ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ವಿದ್ಯುತ್ ವ್ಯವಸ್ಥೆ ಸೇರಿದಂತೆ ಮೂಲ ಸೌಲಭ್ಯಗಳ ಅಭಿವೃದ್ಧಿ ಅಗತ್ಯವಿದ್ದು, ಸಂಬಂಧಿಸಿದ ಗದಗ ಎಂಪಿಎಂಸಿ ಸಮಿತಿ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಯಾರು ಏನಂತಾರೆ?
50 ವರ್ಷಗಳ ಹಿಂದೆಯೇ ಗದಗ ಎಪಿಎಂಸಿಯ ಉಪ ಮಾರುಕಟ್ಟೆ ಪಟ್ಟಣದಲ್ಲಿ ಆರಂಭವಾಗಿದೆ. ಆದರೆ ಅಭಿವೃದ್ದಿ ಆಗದ ಕಾರಣ ಕೃಷಿಕರು, ವ್ಯಾಪಾರಿಗಳಿಗೆ ತೊಂದರೆ ತಪ್ಪದಾಗಿದೆ. ಅಲ್ಪಸ್ವಲ್ಪ ಅಭಿವೃದ್ಧಿ ನಡೆದಿದೆಯಾದರೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಈ ನಿಟ್ಟಿನಲ್ಲಿ ತುರ್ತುಕ್ರಮ ಆಗಬೇಕಿದೆ.
- ಬಸವರಾಜ ಕರಿಗಾರ, ರೈತ, ಮುಳಗುಂದ
ಎಪಿಎಂಸಿಯಲ್ಲಿ ನಡೆಯುವ ವಾರದ ಸಂತೆ ದಿನ ವ್ಯಾಪಾರಸ್ಥರು ಸಾಕಷ್ಟು ಸಂಖ್ಯೆಯಲ್ಲಿ ಸೇರುವುದರಿಂದ ಬಯಲು ಜಾಗದಲ್ಲಿ ಅಂಗಡಿ ಹಾಕುತ್ತಾರೆ. ಮಳೆಗಾಲದಲ್ಲಿ ನೀರು ನಿಲ್ಲುವುದರಿಂದ ವ್ಯಾಪಾರಕ್ಕೆ ತೊಂದರೆ ಆಗುತ್ತಿದೆ. ಚರಂಡಿಗಳಲ್ಲಿ ನೀರು ನಿಂತು ದುರ್ನಾತ ಬೀರುತ್ತಿದೆ. ವಿದ್ಯುತ್ ಹಾಗೂ ಸಿಸಿಟಿವಿ ಕ್ಯಾಮರಾಗಳು, ಶೌಚಾಲಯ ವ್ಯವಸ್ಥೆ ಮಾಡಬೇಕು.
-ಭೀಮಪ್ಪ ಕೋಳಿ, ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ
ಎಪಿಎಂಸಿ ಉಪ ಮಾರುಕಟ್ಟೆ ಆವರಣದಲ್ಲಿ ಸಂತೆ ದಿನ ನೀರು, ವಿದ್ಯುತ್, ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಪಟ್ಟಣ ಪಂಚಾಯಿತಿ ಅನುದಾನದಲ್ಲಿ ಎಪಿಎಂಸಿ ಕಾಮಗಾರಿ ಕೈಗೊಳ್ಳಲು ಆಗುವುದಿಲ್ಲ. ಅದನ್ನು ಎಪಿಎಂಸಿಯವರೇ ಮಾಡಬೇಕಿದ್ದು, ಅವರಿಗೂ ಮನವಿ ಮಾಡಲಾಗಿದೆ. ಸಂತೆ ಮಾರುಕಟ್ಟೆ ಸ್ಥಾಪನೆಗೆ ಡಿಪಿಆರ್ ಮಾಡಬೇಕಿದ್ದು, ಊರಲ್ಲಿ ಎಲ್ಲೂ ಜಾಗ ಸಿಗುತ್ತಿಲ್ಲ. ಹೀಗಾಗಿ ಇರುವುದರಲ್ಲೇ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗಿದೆ.
-ಮಂಜುನಾಥ ಗುಳೇದ, ಮುಖ್ಯಾಧಿಕಾರಿ ಪ.ಪಂ ಮುಳಗುಂದ
ವಾರದ ಸಂತೆ ನಡೆಯುವ ಎಪಿಎಂಸಿ ಆವರಣದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮಾದರಿ ಸಂತೆ ಮಾರುಕಟ್ಟೆ ಮಾಡುವುದು ನಮ್ಮ ಗುರಿಯಾಗಿದ್ದು, ಈ ದಿಸೆಯಲ್ಲಿ ಪಂಚಾಯಿತಿ ಆಡಳಿತವು ಕಾರ್ಯ ಪ್ರವೃತ್ತವಾಗಲಿದೆ.
- ಕೆ.ಎಲ್.ಕರೇಗೌಡ್ರ, ಪಟ್ಟಣ ಪಂಚಾಯಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.