ಲಕ್ಷ್ಮೇಶ್ವರ: ಜಿಲ್ಲೆಯಲ್ಲೇ ಎರಡನೇ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಕ್ಷ್ಮೇಶ್ವರದಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆ ಇದೆ. ಸದ್ಯ ಇರುವ ಜನಸಂಖ್ಯೆಗೆ ಅನುಗುಣವಾಗಿ ಮೂತ್ರಾಲಯಗಳು ಇನ್ನಷ್ಟು ಬೇಕು. ಬಯಲು ಶೌಚಾಲಯ ತೊಲಗಬೇಕಾದರೆ ಹೆಚ್ಚು ಶೌಚಾಲಯಗಳನ್ನು ಕಟ್ಟಿಸಬೇಕೆಂಬುದು ಸ್ಥಳೀಯರ ಆಗ್ರಹ.
ಪಟ್ಟಣದ ಜನಸಂಖ್ಯೆ 35,000 ದಾಟಿದೆ. ಅಪಾರ ಸಂಖ್ಯೆಯ ಜನರು ತಾಲ್ಲೂಕಿನ ಬೇರೆ ಬೇರೆ ಊರುಗಳಿಂದ ಪ್ರತಿ ದಿನ ವಿವಿಧ ಕೆಲಸಗಳಿಗಾಗಿ ಲಕ್ಷ್ಮೇಶ್ವರಕ್ಕೆ ಬಂದು ಹೋಗುತ್ತಾರೆ. ಸೋಮವಾರ ಮತ್ತು ಸಂತೆಯ ದಿನವಾದ ಶುಕ್ರವಾರದಂದು ಹೆಚ್ಚಿನ ಪ್ರಮಾಣದಲ್ಲಿ ಜನದಟ್ಟಣೆ ಇರುತ್ತದೆ. ಆದರೆ, ಪಟ್ಟಣದ ಜನತೆ ಮತ್ತು ಬೇರೆ ಊರುಗಳಿಂದ ಬರುವವರು ಮೂತ್ರವಿಸರ್ಜನೆ ಮಾಡಲು ಅಗತ್ಯವಿರುವಷ್ಟು ಮೂತ್ರಾಲಯಗಳೇ ಇಲ್ಲ.
ಮೂತ್ರಾಲಯಗಳ ಕೊರತೆ ಮಹಿಳೆಯರಿಗಂತೂ ತೀವ್ರ ಸಮಸ್ಯೆ ಉಂಟುಮಾಡಿದೆ. ಮಾತ್ರವಲ್ಲದೆ, ಸದ್ಯ ಇರುವ ಬೆರಳೆಣಿಕೆಯಷ್ಟು ಇರುವ ಮೂತ್ರಾಲಯಗಳು ಸ್ವಚ್ಛತೆಯ ಕೊರತೆಯ ಕಾರಣ ಗಬ್ಬೆದ್ದು ನಾರುತ್ತಿವೆ.
ಪಟ್ಟಣದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಆರು ಮೂತ್ರಾಲಯಗಳು ಇವೆ. ಮಹಾಕವಿ ಪಂಪ ವರ್ತುಲ, ಹಳೇ ಬಸ್‌ನಿಲ್ದಾಣ, ಪಶು ಆಸ್ಪತ್ರೆ ಹತ್ತಿರ, ಸಾರ್ವಜನಿಕ ಗ್ರಂಥಾಲಯದ ಹತ್ತಿರ ತಲಾ ಒಂದು ಮತ್ತು ಶಿಗ್ಲಿ ಕ್ರಾಸ್ ಮತ್ತು ಕೋರ್ಟ್ ಸರ್ಕಲ್ ಹತ್ತಿರ ಎರಡು ಮೂತ್ರಾಲಯಗಳು ಇವೆ. ಆದರೆ, ಜನದಟ್ಟಣೆಗೆ ತಕ್ಕಂತೆ ಮೂತ್ರಾಲಯಗಳು ಇಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಾಲಯಗಳು ಇಲ್ಲದಿರುವುದರಿಂದ ಪುರುಷರು ಸಿಕ್ಕ ಸಿಕ್ಕಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಬಜಾರ್, ಎಂಜಿಎಂ ಹಿಂದಿನ ಬಯಲು ಜಾಗ ಮೂತ್ರ ವಿಸರ್ಜನೆಯ ತಾಣವಾಗಿದೆ. ಇದರಿಂದಾಗಿ ಆ ಭಾಗದಲ್ಲಿ ಯಾವಾಗಲೂ ದುರ್ನಾತ ಇರುತ್ತದೆ.
ಪ್ರತ್ಯೇಕ ಮೂತ್ರಾಲಯ ಇಲ್ಲ: ಮಹಿಳೆಯರಿಗಾಗಿ ಪ್ರತ್ಯೇಕ ಮೂತ್ರಾಲಯ ನಿರ್ಮಿಸಿಲ್ಲ. ಇದರಿಂದಾಗಿ, ಮಹಿಳೆಯರು ಪರದಾಡಬೇಕಾದ ಪರಿಸ್ಥಿತಿ ಇದೆ. ಶಿಗ್ಲಿ ನಾಕಾದಿಂದ ಪುರಸಭೆ ಹತ್ತಿರ ಇರುವ ಮೂತ್ರಾಲಯ ಹೊರತುಪಡಿಸಿದರೆ ಬಜಾರ್‌ವರೆಗೆ ಅಂದರೆ, ಬರೋಬ್ಬರಿ ಒಂದು ಕಿ.ಮೀ. ಅಂತರದಲ್ಲಿ ಯಾವುದೇ ಮೂತ್ರಾಲಯ ಇಲ್ಲ.
ಪುರುಷರಷ್ಟೇ ಮಹಿಳೆಯರೂ ಲಕ್ಷ್ಮೇಶ್ವರಕ್ಕೆ ಬಂದು ಹೋಗುತ್ತಿದ್ದಾರೆ. 23 ಸದಸ್ಯರಿರುವ ಪುರಸಭೆಯಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳಾ ಸದಸ್ಯೆಯರೇ ಇದ್ದಾರೆ. ಆದರೆ, ಅವರಿಗೆ ಮಹಿಳೆಯರ ಸಂಕಷ್ಟ ಅರ್ಥ ಆಗುತ್ತಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಆದಷ್ಟು ಬೇಗನೆ ಇನ್ನಷ್ಟು ಮೂತ್ರಾಲಯಗಳನ್ನು ಪುರಸಭೆ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹದಗೆಟ್ಟ ಶೌಚಾಲಯ: ಇದು ಮೂತ್ರಾಲಯಗಳ ಸ್ಥಿತಿಯಾದರೆ, ಶೌಚಾಲಯಗಳ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ. ಪಟ್ಟಣದಲ್ಲಿ ಬಯಲು ಶೌಚಾಲಯ ತಡೆಗಟ್ಟುವ ಉದ್ದೇಶದಿಂದ ಈ ಹಿಂದೆ 23 ವಾರ್ಡ್‍ಗಳಲ್ಲಿ ಒಂದೊಂದು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿತ್ತು. ಆದರೆ, ಅವುಗಳ ಪೈಕಿ ಸದ್ಯ 20 ಶೌಚಾಲಯಗಳು ಬಳಕೆಯಾಗುತ್ತಿವೆ. ಉಳಿದ ನಾಲ್ಕು ಶೌಚಾಲಯಗಳು ಬಂದ್ ಆಗಿ ವರ್ಷಗಳೇ ಕಳೆದಿವೆ. ಅದರಲ್ಲೂ, ಮುಕ್ತಿನಗರದಲ್ಲಿನ ಮಹಿಳೆಯರ ಗೌರವ ಘಟಕ ಬಂದ್ ಆಗಿದ್ದು ಅಲ್ಲಿನ ಮಹಿಳೆಯರಿಗೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ .
ಮಟನ್ ಮಾರುಕಟ್ಟೆ, 11ನೇ ವಾರ್ಡ್‍ನಲ್ಲಿನ ಶೌಚಾಲಯಗಳೂ ಕೂಡ ಬಾಗಿಲು ಮುಚ್ಚಿವೆ. ಸಣ್ಣಪುಟ್ಟ ದುರಸ್ತಿ ಮಾಡಿಸಿದರೆ ಇವು ಪುನಃ ಜನರ ಉಪಯೋಗಕ್ಕೆ ಬರುತ್ತವೆ. ಆದರೆ, ಪುರಸಭೆ ಮನಸ್ಸು ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಶೌಚಾಲಯಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಅಲ್ಲಿನ ದುರ್ವಾಸನೆ ಸಹಿಸಲಾರದೆ ಸಾರ್ವಜನಿಕರು ಶೌಚಾಲಯಗಳ ಬಳಕೆಯನ್ನೇ ನಿಲ್ಲಿಸಿದ್ದಾರೆ. ಆರಂಭದಲ್ಲಿ ಒಂದೊಂದು ಶೌಚಾಲಯದ ಉಸ್ತುವಾರಿಗಾಗಿ ಒಬ್ಬೊಬ್ಬರನ್ನು ನೇಮಿಸಲಾಗಿತ್ತು. ಆದರೆ, ಇದೀಗ ಕಾರ್ಮಿಕರ ಕೊರತೆಯಿಂದಾಗಿ ಕೇವಲ ಇಬ್ಬರು ಕಾರ್ಮಿಕರು ಮಾತ್ರ ಎಲ್ಲ ಶೌಚಾಲಯಗಳನ್ನು ಸ್ವಚ್ಛ ಮಾಡುತ್ತಿದ್ದಾರೆ.
ಇದರಿಂದಾಗಿ, ಸಾರ್ವಜನಿಕ ಶೌಚಾಲಯಗಳ ಸ್ಥಿತಿ ಹದಗೆಟ್ಟಿದೆ. ಪಟ್ಟಣದ ಜನರ ಆರೋಗ್ಯ ಮತ್ತು ಸ್ವಚ್ಛತೆಯ ದೃಷ್ಟಿಯಿಂದ ಪುರಸಭೆ ಅಧಿಕಾರಿಗಳು ಮೂತ್ರಾಲಯ ಮತ್ತು ಶೌಚಾಲಯಗಳ ಸಮರ್ಪಕ ನಿರ್ವಹಣೆಗೆ ಕ್ರಮವಹಿಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕಾರ್ಮಿಕರ ಕೊರತೆಯಿಂದಾಗಿ ಮೂತ್ರಾಲಯ ಮತ್ತು ಶೌಚಾಲಯಗಳ ಸ್ವಚ್ಛತೆ ಸಾಧ್ಯವಾಗುತ್ತಿಲ್ಲ. ಆದಷ್ಟು ಬೇಗ ಮತ್ತಷ್ಟು ಕಾರ್ಮಿಕರನ್ನು ನೇಮಿಸಿಕೊಳ್ಳಲು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು–ಮಹೇಶ ಹಡಪದ ಮುಖ್ಯಾಧಿಕಾರಿ ಪುರಸಭೆ
ಲಕ್ಷ್ಮೇಶ್ವರದಲ್ಲಿನ ಸಾರ್ವಜನಿಕ ಮೂತ್ರಾಲಯಗಳನ್ನು ಆಗಾಗ ತೊಳೆದು, ಸ್ವಚ್ಛವಾಗಿ ಇಡಬೇಕು. ಇಲ್ಲದಿದ್ದರೆ ಅದರಿಂದ ಹೊಲಸು ವಾಸನೆ ಬರುತ್ತದೆ.
ಜಾಕೀರ್ ಹುಸೇನ್ ಹವಾಲ್ದಾರ, ಲಕ್ಷ್ಮೇಶ್ವರ
ಮೂತ್ರಾಲಯಗಳನ್ನು ಮೇಲಿಂದ ಮೇಲೆ ತೊಳೆಯಬೇಕು. ಮತ್ತು ಬಜಾರದಲ್ಲಿ ಮೂತ್ರಾಲಯ ಕಟ್ಟಿಸಲು ತಕ್ಷಣ ಕ್ರಮಕೈಗೊಳ್ಳಬೇಕು.
ಬಿ.ಎಸ್. ಬಾಳೇಶ್ವರಮಠ, ವಕೀಲರು, ಲಕ್ಷ್ಮೇಶ್ವರ
ಹಳ್ಳಿಯಿಂದ ಲಕ್ಷ್ಮೇಶ್ವರಕ್ಕೆ ಬರುವ ಜನರಿಗೆ ಮೂತ್ರ ಮತ್ತು ಶೌಚಕ್ಕೆ ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಪಟ್ಟಣದಲ್ಲಿ ಇನ್ನಷ್ಟು ಮೂತ್ರಾಲಯಗಳನ್ನು ಕಟ್ಟಿಸಬೇಕು.
ಚೆನ್ನಪ್ಪ ಷಣ್ಮುಖಿ, ಗೊಜನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.