ADVERTISEMENT

ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನಕ್ಕೆ ಇಂದು ಚಾಲನೆ

ವೀರಭದ್ರೇಶ್ವರ ದೇವಸ್ಥಾನದಿಂದ ಸಿದ್ಧರ ಬಾವಿ ಮಧ್ಯೆ ನಡೆಯಲಿದೆ ಶೋಧ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 3:25 IST
Last Updated 16 ಜನವರಿ 2026, 3:25 IST
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ   

ಕೆ.ಎಂ.ಸತೀಶ್‌ ಬೆಳ್ಳಕ್ಕಿ

ಗದಗ: ನಿಧಿ ಸಿಕ್ಕ ನಂತರ ರಾಜ್ಯದ ಗಮನ ಸೆಳೆದಿದ್ದ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ಪ್ರಕ್ರಿಯೆ ಹಲವು ಕಾರಣಗಳಿಂದ ನನೆಗುದಿಗೆ ಬಿದ್ದಿತ್ತು. ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಜ.16ರಂದು ಉತ್ಖನನಕ್ಕೆ ಅಧಿಕೃತವಾಗಿ ಚಾಲನೆ ಸಿಗುತ್ತಿದ್ದು, ನಾಲ್ಕು ತಿಂಗಳು ನಡೆಯಲಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ವರ್ಷ ಜೂನ್‌ 3ರಂದು ಲಕ್ಕುಂಡಿಯ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನಕ್ಕೆ ಚಾಲನೆ ನೀಡಿದ್ದರು.

ADVERTISEMENT

‘ಚಾಲುಕ್ಯರು, ಹೊಯ್ಸಳರು, ವಿಜಯನಗರ, ಮೈಸೂರು ಸಂಸ್ಥಾನ ಸೇರಿದಂತೆ ಹಿಂದಿನ ಕಾಲದ ಸಾಂಸ್ಕೃತಿಕ ಸಂಪತ್ತು ಉಳಿಸಿಕೊಳ್ಳುವುದು ಅವಶ್ಯಕ. ಲಕ್ಕುಂಡಿಯಲ್ಲಿ ನಡೆದಿರುವ ಮಾದರಿಯಲ್ಲಿ ಅವಶ್ಯಕತೆ ಇರುವ ಸ್ಥಳಗಳಲ್ಲಿ ಉತ್ಖನನ ಆರಂಭಿಸಲಾಗುವುದು. ದೇವಸ್ಥಾನಗಳ ರಕ್ಷಣೆ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ’ ಎಂದು ಸಿಎಂ ಹೇಳಿದ್ದರು.

ಆದರೆ, ಆರು ತಿಂಗಳಾದರೂ ಉತ್ಖನನ ಆರಂಭಗೊಂಡಿರಲಿಲ್ಲ. ಉತ್ಖನನ ಮಾಡಲು ಭೂಮಿ ಒಣಗಿರಬೇಕು. ನಿರಂತರ ಮಳೆ ಸುರಿದಿದ್ದರಿಂದಾಗಿ ತಜ್ಞರು ಈ ಪ್ರಕ್ರಿಯೆಯನ್ನು ಮುಂದೂಡುತ್ತಲೇ ಬಂದಿದ್ದರು. ಇದರ ಜತೆಗೆ, ಉತ್ಖನನಕ್ಕೆ ಗುರುತಿಸಿದ್ದ ಜಾಗದ ಪಕ್ಕದಲ್ಲಿನ ಜಾಗವನ್ನು ಸ್ವಾಧೀನ ಪಡಿಸಿಕೊಳ್ಳಬೇಕಿತ್ತು. ಈ ವಿಷಯ ಸಂಪುಟದಲ್ಲಿ ಚರ್ಚೆಯಾಗಿ, ಒಪ್ಪಿಗೆ ಸಿಕ್ಕ ನಂತರ ಖಾಲಿ ಜಾಗ ಮತ್ತು ಕಟ್ಟಡವನ್ನು ₹50 ಲಕ್ಷಕ್ಕೆ ಖರೀದಿಸಲು ಸರ್ಕಾರ ಆದೇಶಿಸಿತ್ತು. ಈಗ ಭಾರತೀಯ ಪುರಾತತ್ವ ಇಲಾಖೆಯ ಪರಿಶೋಧನೆ ಮತ್ತು ಉತ್ಖನನ ವಿಭಾಗವು ಉತ್ಖನನಕ್ಕೆ ಅನುಮತಿ ನೀಡಿದ್ದರಿಂದ ಉತ್ಖನನ ಕೆಲಸ ಆರಂಭಗೊಳ್ಳಲಿದೆ. 

‘ಲಕ್ಕುಂಡಿಯಲ್ಲಿ ಈ ಹಿಂದೆ 2023–04ರಲ್ಲಿ ಡಾ. ಅ.ಸುಂದರ್‌ ನೇತೃತ್ವದಲ್ಲಿ ಉತ್ಖನನ ನಡೆದಿತ್ತು. ಈ ಸಂದರ್ಭದಲ್ಲಿ ಲಕ್ಕುಂಡಿ ಕೇವಲ ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ವಿಜಯನಗರ ಆಳ್ವಿಕೆಯಲ್ಲಷ್ಟೇ ಪ್ರಮುಖ ಕೇಂದ್ರವಾಗಿರಲಿಲ್ಲ ಎಂಬುದು ಗೊತ್ತಾಗಿತ್ತು’ ಎಂದು ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ. 

‘ಲಕ್ಕುಂಡಿಯಲ್ಲಿ ಜನವರಿ 10ರಂದು ಚಿನ್ನದ ನಿಧಿ ಸಿಕ್ಕಿತ್ತು. ಹೀಗಾಗಿ, ಇಂದಿನಿಂದ ಆರಂಭಗೊಳ್ಳುವ ಉತ್ಖನನ ವಿಶೇಷ ಮಹತ್ವ ಪಡೆದಿದೆ. ಇದಕ್ಕೆ ಪೂರಕವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಾರ್ಯ ಮುಗಿದಿದೆ. ಉತ್ಖನನಕ್ಕೆ ಬೇಕಿರುವ ಸಲಕರಣೆಗಳನ್ನು ಸಿದ್ಧಪಡಿಸಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ. 

ಕೋಟೆ ವೀರಭದ್ರೇಶ್ವರ ದೇವಸ್ಥಾನದಿಂದ ಸಿದ್ಧರ ಬಾವಿ ಮಧ್ಯೆ ಗುರುತಿಸಿರುವ 10 ಮೀಟರ್ ಉದ್ದ 10 ಮೀಟರ್‌ ಅಗಲದ ಜಾಗದಲ್ಲಿ ಉತ್ಖನನ ನಡೆಯಲಿದೆ. ಇದಕ್ಕಾಗಿ ₹25 ಲಕ್ಷ ಹಣ ಬಿಡುಗಡೆಯಾಗಿದೆ. ಈ ಜಾಗ ಜ.10ರಂದು ಬಾಲಕನಿಗೆ ನಿಧಿ ದೊರೆತ ಸ್ಥಳದಿಂದ ತುಂಬ ಹತ್ತಿರದಲ್ಲೇ ಇದೆ. ಜತೆಗೆ ವೀರಭದ್ರೇಶ್ವರ ಗುಡಿಯಿಂದ ಸ್ವಲ್ಪ ದೂರದಲ್ಲೇ ಟಂಕಶಾಲೆ ಇತ್ತು ಎನ್ನಲಾಗಿದೆ. ಹಾಗಾಗಿ, ಈಗ ನಡೆಯುವ ಉತ್ಖನನದಿಂದ ಏನೆಲ್ಲಾ ವಸ್ತುಗಳು ಸಿಗಬಹುದು ಎಂಬ ಕುತೂಹಲ ಗರಿಗೆದರಿದೆ.

ಉತ್ಖನನಕ್ಕೆ ಬಳಸುವ ಸಲಕರಣೆಗಳು
ಶರಣು ಗೋಗೇರಿ

Quote - ಡಾ. ಟಿ.ಎಂ.ಕೇಶವ್‌ ಮತ್ತು ಡಾ. ಆರ್‌.ಶೇಜೇಶ್ವರ್‌ ನೇತೃತ್ವದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ವ್ಯಾಪ್ತಿಯಲ್ಲಿ ಉತ್ಖನನ ನಡೆಯಲಿದೆ. ಅದಕ್ಕೆ ಬೇಕಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಶರಣು ಗೋಗೇರಿ ಲಕ್ಕುಂಡಿ ಪಾರಂಪರಿಕ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಲಕ್ಕುಂಡಿಯದ್ದು ಶ್ರೀಮಂತ ಇತಿಹಾಸ: ಸಚಿವ

‘ಉತ್ಖನನ ಪ್ರಾರಂಭಿಸಲು ಬಿಸಿಲು ಇರಬೇಕು. ಹಾಗಾಗಿ ಮಳೆಗಾಲ ಮುಗಿದ ಬಳಿಕ ಉತ್ಖನನ ಆರಂಭಿಸುವುದಾಗಿ ತಜ್ಞರು ತಿಳಿಸಿದ್ದರು. ಅದರಂತೆ ಶುಕ್ರವಾರದಿಂದ ಉತ್ಖನನ ಕೆಲಸ ಪ್ರಾರಂಭವಾಗಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ತಿಳಿಸಿದ್ದಾರೆ.

‘ಲಕ್ಕುಂಡಿ ನಮ್ಮ ಜಿಲ್ಲೆಯ ವಿಶೇಷ ಸ್ಥಳ. ಅಲ್ಲಿ 101 ಗುಡಿ 101 ಬಾವಿ ಇದ್ದು ಇಲ್ಲಿನ ಇತಿಹಾಸ ಶ್ರೀಮಂತವಾಗಿದೆ’ ಎಂದಿದ್ದಾರೆ.  ‘ಪ್ರತಿ ಮಳೆಗೂ ಈ ಊರಿನ ಮಣ್ಣಿನಲ್ಲಿ ಸ್ವಲ್ಪ ಬಂಗಾರ ಹವಳ ಅಥವಾ ಬೇರೆ ಇನ್ಯಾವುದಾದರೂ ಅಮೂಲ್ಯ ವಸ್ತುಗಳು ಸಿಗುತ್ತಿದ್ದವು. ಆದರೆ ಜ.10ರಂದು ಇಲ್ಲಿ ನಿಧಿ ಸಿಕ್ಕ ಕಾರಣಕ್ಕೆ ಹೆಚ್ಚಿನ ಲಕ್ಷ್ಯ ಕೊಡಲಾಯಿತು. ಅದಕ್ಕಿಂತಲೂ ದೊಡ್ಡ ಸಂಪತ್ತು ಅಂದರೆ ಅಲ್ಲಿನ ಶಿಲ್ಪಕಲಾಕೃತಿಗಳು ಶಾಸನಗಳು. ಈ ಗ್ರಾಮದ ಮಹತ್ವವನ್ನು ಜಗತ್ತಿಗೆ ತಿಳಿಸುವ ನಿರ್ಣಯವನ್ನು ಸರ್ಕಾರ ಮಾಡಿದ್ದು ವಿಶ್ವದ ಪಾರಂಪರಿಕ ಸ್ಥಳ ಮಾಡಲು ಪ್ರಯತ್ನ ನಡೆಸಿದೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.