
ಗದಗ ಗ್ರಾಮೀಣ ಪೊಲೀಸ್ ಠಾಣಿಯ ಸಿಬ್ಬಂದಿ ಕಳ್ಳತನ ಪ್ರಕರಣ ತಡೆಗಟ್ಟಲು ಭಿತ್ತಿ ಪತ್ರ ವಿತರಿಸುವ ಮೂಲಕ ಲಕ್ಕುಂಡಿಯಲ್ಲಿ ಜಾಗೃತಿ ಮೂಡಿಸಿದರು
ಲಕ್ಕುಂಡಿ: ಇತ್ತೀಚಿನ ದಿನಗಳಲ್ಲಿ ಮನೆ ಕಳ್ಳತನ, ಬೈಕ್ ಕಳ್ಳತನ, ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಈ ಕುರಿತಾಗಿ ಎಚ್ಚರಿಕೆಯಿಂದ ಇರುವಂತೆ ಗದಗ ಜಿಲ್ಲಾ ಪೊಲೀಸರು ಲಕ್ಕುಂಡಿ ಗ್ರಾಮದ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಿದರು.
ಗದಗ ಗ್ರಾಮೀಣ ಠಾಣೆಯ ಪೊಲೀಸ್ ಸಿಬ್ಬಂದಿ ಕಳ್ಳತನ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಪ್ರಕಟ ಮಾಡಿರುವ ಭಿತ್ತಿಪತ್ರಗಳನ್ನು ಸಾರ್ವಜನಿಕರಿಗೆ ಹಂಚಿದರು.
ನಗದು ಹಣ ಮತ್ತು ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿಡಬೇಕು. ಬೈಕುಗಳು ಕಳ್ಳತನ ಪ್ರಕರಣಗಳು ನಡೆಯುತ್ತಿದ್ದು ವಾಹನಗಳಿಗಳಿಗೆ ಗುಣಮಟ್ಟದ ಹ್ಯಾಂಡ್‍ಲಾಕ್ ಮತ್ತು ಎಚ್ಚರಿಕೆಯ ಗಂಟೆ ಅಳವಡಿಸಬೇಕು. ಮನೆಯ ಹೊರಗಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಎಂದು ಜಾಗೃತಿ ಮೂಡಿಸಿದರು.
ವಾಹನ ಖರೀದಿ ಅಥವಾ ಮಾರಿದ ನಂತರ ನಿಗದಿತ ಅವಧಿಯಲ್ಲಿ ಎಲ್ಲ ದಾಖಲಾತಿಗಳ ವರ್ಗಾವಣೆ ಮಾಡಿಸಿಕೊಳ್ಳಬೇಕು. ನಿರ್ಜನ ಪ್ರದೇಶದಲ್ಲಿ ವಾಕಿಂಗ್ ಹೋಗಬಾರದು. ಚಿನ್ನದ ಆಭರಣಗಳನ್ನು ಧರಿಸಿದಾಗ ಜಾಗೃತರಾಗಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಿಸೆಗಳ್ಳರ ಬಗ್ಗೆ ಎಚ್ಚರವಿರಬೇಕು. ಮನೆ ಬಾಡಿಗೆ ಕೊಡುವಾಗ ಸಂಪೂರ್ಣ ವಿವರಗಳೊಂದಿಗೆ ಒಪ್ಪಂದ ಪತ್ರ ಮಾಡಿಸಿಕೊಳ್ಳಬೇಕು ಮತ್ತು ಅಪರಿಚಿತರಿಗೆ ಬಾಡಿಗೆ ಕೊಡಬಾರದು ಎಂದು ತಿಳಿವಳಿಕೆ ಹೇಳಿದರು.
ಡಿಜಿಟಲ್ ಆರೆಸ್ಟ್ ಎಂಬುದೇ ಇಲ್ಲ. ಈ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು ಎಂದರು.
ಗದಗ ಗ್ರಾಮೀಣ ಸಿಪಿಐ ಸಿದ್ರಾಮೇಶ ಗಡೇದ, ಎಸ್‌ಐ ವಿ.ಜಿ.ಪವಾರ, ಪಿಎಸ್‌ಐ ಶರಣಮ್ಮ ಕವಲೂರು, ಸಿಬ್ಬಂದಿಯಾದ ಆರ್.ಎಂ. ಉಪ್ಪಾರ ಹಾಗೂ ಗದಗ ಗ್ರಾಮೀಣ ಮತ್ತು ಮಹಿಳಾ ಪೋಲಿಸ್ ಠಾಣಿ ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.