
ಗದಗ: ಲಕ್ಕುಂಡಿ ಗ್ರಾಮದಲ್ಲಿನಡೆದಿರುವ ಉತ್ಖನನದಲ್ಲಿ ಮಂಗಳವಾರ ನವ ಶಿಲಾಯುಗದ ಬೂದು ಬಣ್ಣದ ಮಡಿಕೆ ಮತ್ತು ಜಿನ ಚಿತ್ರವಿರುವ ಕಲ್ಲಿನ ಪೀಠ ಸಿಕ್ಕಿದೆ.
‘ದೊಡ್ಡಗಾತ್ರದ ಒಡೆದ ಮಡಿಕೆಯ ಅರ್ಧ ಭಾಗದ ಜತೆಗೆ ಎರಡು ಮೂರು ಕವಡೆ ಸಿಕ್ಕಿವೆ’ ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ರಾಜ್ಯ ಸದಸ್ಯ ಸಿದ್ದು ಪಾಟೀಲ ತಿಳಿಸಿದ್ದಾರೆ.
ಉತ್ಖನನ ಕೆಲಸ ಐದೂವರೆ ಅಡಿ ಆಳದವರೆಗೆ ನಡೆದಿದೆ. ಒಟ್ಟು 34 ಮಂದಿ ಕಾರ್ಮಿಕರು ಉತ್ಖನನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ದೇವಸ್ಥಾನವೇ ಮನೆ: ಗ್ರಾಮದಲ್ಲಿ ಹಲವು ದೇವಸ್ಥಾನಗಳಿವೆ. ಅವುಗಳನ್ನೇ ಕೆಲವರು ಮನೆಗಳನ್ನಾಗಿ ಮಾಡಿಕೊಂಡಿದ್ದಾರೆ. ಚೌಕಿಮಠ ಕುಟುಂಬದವರು ವಾಸಿಸುವ ಮನೆಯಲ್ಲಿ ದೇವಸ್ಥಾನವಿದ್ದು, ಐದು ತಲೆಮಾರಿನಿಂದ ಅಲ್ಲೇ ವಾಸವಿದ್ದಾರೆ.
‘ಮಹಾಂತೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುತ್ತ ವಾಸವಿದ್ದೇವೆ. ಇತಿಹಾಸಕಾರರು ಬಂದು ಇದು ಮಹಾಂತೇಶ್ವರ ಸ್ವಾಮಿ ಅಲ್ಲ; ಅರ್ಧನಾರೀಶ್ವರ ಎಂದಿದ್ದಾರೆ. ಜೀರ್ಣೋದ್ಧಾರಕ್ಕಾಗಿ ಮನೆ ಬಿಟ್ಟುಕೊಡಬೇಕಾಗಿ ಕೇಳಿದ್ದಾರೆ. ಸರ್ಕಾರ ನಮಗೆ ಬೇರೆ ಕಡೆ ಜಾಗ, ಮನೆ ಕೊಟ್ಟರೆ ಹೋಗಲು ಸಿದ್ಧರಿದ್ದೇವೆ’ ಎಂದು ಕುಟುಂಬದ ಮುಖ್ಯಸ್ಥರಾದ ಶರಣಯ್ಯ ಚೌಕಿಮಠ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.