ADVERTISEMENT

ಲಕ್ಷ್ಮೇಶ್ವರ | ಗಿರಣಿಯ ಅಭಿವೃದ್ಧಿಗೆ ಶ್ರಮಿಸೋಣ: ಬಳಿಗಾರ

ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ವಾರ್ಷಿಕ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 5:29 IST
Last Updated 20 ಸೆಪ್ಟೆಂಬರ್ 2025, 5:29 IST
ಲಕ್ಷ್ಮೇಶ್ವರದ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ಆವರಣದಲ್ಲಿ ಭಾನುವಾರ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಗಿರಣಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಬಿ.ಪಾಟೀಲ ಅವರು ಗದಗ ಜಿಲ್ಲೆಯಿಂದ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು
ಲಕ್ಷ್ಮೇಶ್ವರದ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ಆವರಣದಲ್ಲಿ ಭಾನುವಾರ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಗಿರಣಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಬಿ.ಪಾಟೀಲ ಅವರು ಗದಗ ಜಿಲ್ಲೆಯಿಂದ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು   

ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ರೈತರ ಸಹಕಾರಿ ನೂಲಿನ ಗಿರಣಿಯ ವಾರ್ಷಿಕ ಸರ್ವ ಸಾಧಾರಣೆ ಸಭೆ ಭಾನುವಾರ ಜರುಗಿತು.

ಗಿರಣಿಯ ನಿರ್ದೇಶಕ ಹಾಗೂ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಪಿ.ಬಳಿಗಾರ ಮಾತನಾಡಿ, ‘ಮಾಜಿ ಶಾಸಕ ಗೂಳಪ್ಪನವರು ಉಪನಾಳ ಅವರು ಸಾಕಷ್ಟು ಕಷ್ಟಪಟ್ಟು ಗಿರಣಿ ಕಟ್ಟಿದ್ದಾರೆ. ಮೂರು ದಶಕಗಳವರೆಗೆ ಗಿರಣಿಯು ಸಾವಿರಾರು ಜನರಿಗೆ ಉದ್ಯೋಗ ನೀಡಿದೆ. ಆದರೆ ಗಿರಣಿಯ ಯಂತ್ರೋಪಕರಣಗಳು ಹಳೆಯದಾಗಿವೆ. ಮತ್ತೆ ಹೊಸ ಯಂತ್ರೋಪಕರಣಗಳನ್ನು ಅಳವಡಿಸಿ ಗಿರಣಿಯನ್ನು ಪುನಃ ಆರಂಭಿಸುವತ್ತ ಚಿಂತನೆ ಮಾಡಬೇಕಾಗಿದೆ’ ಎಂದು ತಿಳಿಸಿದರು.

ಗಿರಣಿಯ ಸರ್ಕಾರದ ಪ್ರತಿನಿಧಿ ವೀರಯ್ಯ ಮಠಪತಿ ಮಾತನಾಡಿ, ‘ಗಿರಣಿಯನ್ನು ಪುನಃ ಆರಂಭಿಸಲು ಸರ್ಕಾರದಿಂದ ಅಗತ್ಯ ಇರುವ ಎಲ್ಲ ನೆರವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

ADVERTISEMENT

ಗಿರಣಿಯ ಅಧ್ಯಕ್ಷ ಪುಲಿಕೇಶಿ ಉಪನಾಳ ಮಾತನಾಡಿ, ‘ಆಡಳಿತ ಮಂಡಳಿಯ ಎಲ್ಲ ಸದಸ್ಯರು ಕೂಡಿ ಗಿರಣಿಯ ಅಭಿವೃದ್ಧಿಗೆ ಶ್ರಮಿಸೋಣ. ಗಿರಣಿ ಚಾಲೂ ಇಲ್ಲದಿದ್ದರೂ ಸಹ ಯಾವುದೇ ಸಾಲದ ಹೊರೆ ಇಲ್ಲ. ಗಿರಣಿಯ ಖರ್ಚು ವೆಚ್ಚಗಳನ್ನು ನೀಗಿಸುವ ನಿಟ್ಟಿನಲ್ಲಿ ಕಟ್ಟಡಗಳನ್ನು ಬಾಡಿಗೆಗೆ ನೀಡಲಾಗಿದೆ’ ಎಂದು ಹೇಳಿದರು.

ಆಡಳಿತ ಮಂಡಳಿ ನಿರ್ದೇಶಕರು ಜಿ.ಕೊಟ್ರೇಶ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಿರಣಿಯ ವ್ಯವಸ್ಥಾಪಕ ನಿರ್ದೇಶಕ ಎಚ್.ಬಿ.ಪಾಟೀಲ ಅವರು ಗದಗ ಜಿಲ್ಲೆಯಿಂದ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಗಿರಣಿಯ ಉಪಾಧ್ಯಕ್ಷ ಜಿ.ಬಿ.ಮೆಣಸಿನಕಾಯಿ, ನಿರ್ದೇಶಕರಾದ ನೀಲಪ್ಪ ಹತ್ತಿ, ಎನ್.ಎನ್.ರಗಟಿ, ಎಂ.ಕೆ.ಕಳ್ಳಿಮಠ, ಎಸ್.ಎ.ಗೊರವರ, ಆರ್.ಎಸ್.ಉಪನಾಳ, ಎನ್.ಸಿ.ಧರ್ಮಾಯತ, ಪಿ.ಎನ್.ಗಿಡಿಬಿಡಿ, ಆರ್.ಇ.ಬಾಕಳೆ, ಬಿ.ಪಿ.ಸಾಸಲವಾಡ, ಜಿ.ರೇವಣ್ಣ, ಸಲಹಾ ಸಮಿತಿಯ ಎಂ.ಎಫ್.ಸೋಮಕ್ಕನವರ, ನಾಗರಾಜ ಹಣಗಿ, ಮಾಲಾದೇವಿ ದಂಧರಗಿ, ನಿರ್ಮಲಾ ಅರಳಿ, ನಂದಿನಿ ಮಾಳವಾಡ, ವೀಣಾ ಹತ್ತಿಕಾಳ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.