ಲಕ್ಷ್ಮೇಶ್ವರ: ಊರಿಗೊಂದು ಉದ್ಯಾನ ಇರಬೇಕು ಎಂಬುದು ಎಲ್ಲರ ಅಪೇಕ್ಷೆ. ಯಾವುದೇ ಊರಿಗೆ ಹೋದರೂ ದಣಿವಾರಿಸಿಕೊಳ್ಳಲು ಜನ ಉದ್ಯಾನಗಳನ್ನು ಹುಡುಕುವುದು ಸಹಜ. ಆದರೆ, ಲಕ್ಷ್ಮೇಶ್ವರ ಪಟ್ಟಣದಲ್ಲಿ ಉದ್ಯಾನಗಳೇ ಇಲ್ಲದಿರುವುದು ಅಚ್ಚರಿ ಎನಿಸಿದರೂ ಸತ್ಯ. ಈ ಕಾರಣಕ್ಕಾಗಿ ‘ಲಕ್ಷ್ಮೇಶ್ವರ ಉದ್ಯಾನ ಇಲ್ಲದ ಊರು’ ಎಂಬ ಅಪಖ್ಯಾತಿಯನ್ನೂ ಹೊತ್ತುಕೊಳ್ಳಬೇಕಾಗಿದೆ.
ವಾಣಿಜ್ಯ ಚಟುವಟಿಕೆಗೆ ಹೆಸರಾಗಿರುವ ಜಿಲ್ಲೆಯ ಎರಡನೇ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಲಕ್ಷ್ಮೇಶ್ವರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಒಂದೂ ಉದ್ಯಾನ ಇಲ್ಲ ಎಂಬ ಕೊರಗು ಜನರನ್ನು ಬಾಧಿಸುತ್ತಿದೆ. ಪಟ್ಟಣದ ಜನಸಂಖ್ಯೆ ನಲವತ್ತು ಸಾವಿರ ದಾಟುತ್ತ ಬಂದಿದೆ. ಅಲ್ಲದೆ ಪ್ರತಿದಿನ ಕೆಲಸ ಕಾರ್ಯ ನಿಮಿತ್ತ ಸಾವಿರಾರು ಜನರು ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಬಂದು ಹೋಗುತ್ತಾರೆ.
ಲಕ್ಷ್ಮೇಶ್ವರ ನೂತನ ತಾಲ್ಲೂಕು ಘೋಷಣೆ ನಂತರ ಪಟ್ಟಣ ಬೆಳೆಯುತ್ತಲೇ ಇದೆ. ಹತ್ತಾರು ಕಡೆ ನೂತನ ಬಡಾವಣೆಗಳು ನಿರ್ಮಾಣಗೊಂಡಿವೆ. ಹಾವೇರಿ ಜಿಲ್ಲೆಯ ಮೇವುಂಡಿ ಗ್ರಾಮದ ಹತ್ತಿರದ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಕೆ ಆಗುತ್ತಿದೆ. ಪಟ್ಟಣದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ, ಎಪಿಎಂಸಿ, ಜಾನುವಾರು ಮಾರುಕಟ್ಟೆ, ವ್ಯವಸ್ಥಿತ ಬಜಾರ್, ಪಿಎಲ್‍ಡಿ ಬ್ಯಾಂಕ್ ಸೇರಿದಂತೆ ಐದಾರು ವಾಣಿಜ್ಯ ಬ್ಯಾಂಕ್‌ಗಳು, ಅಗಡಿ ಎಂಜಿನಿಯರಿಂಗ್ ಕಾಲೇಜು ಒಳಗೊಂಡಂತೆ ಹತ್ತಾರು ಶಾಲಾ ಕಾಲೇಜುಗಳು ಇವೆ. ಇದರಿಂದಾಗಿ ದಿನವೂ ಸಾವಿರಾರು ಜನರು ಲಕ್ಷ್ಮೇಶ್ವರಕ್ಕೆ ಬಂದು ಹೋಗುತ್ತಾರೆ. ಅದರಲ್ಲಿಯೂ ಸಂತೆ ದಿನವಾದ ಶುಕ್ರವಾರ ಮತ್ತು ಸೋಮವಾರ ಜನದಟ್ಟಣೆ ಹೆಚ್ಚಿರುತ್ತದೆ.
ಆದರೆ, ಬೇರೆ ಬೇರೆ ಊರುಗಳಿಂದ ಬಿಸಿಲಿನಲ್ಲಿ ಬಸವಳಿದು ಬರುವ ಜನರಿಗೆ ದಣಿವಾರಿಸಿಕೊಳ್ಳಲು ಈ ಊರಲ್ಲಿ ಒಂದೂ ಉದ್ಯಾನ ಇಲ್ಲದಿರುವುದು ನಾಚಿಕೆಗೇಡಿನ ವಿಷಯವಾಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಹೊಸ ಬಡಾವಣೆಗಳ ನಿರ್ಮಾಣ ಸಮಯದಲ್ಲಿ ಉದ್ಯಾನಕ್ಕಾಗಿ ಜಾಗ ಮೀಸಲಿಡುವುದು ಕಡ್ಡಾಯ. ಹೀಗೆ ಉದ್ಯಾನಕ್ಕಾಗಿಯೇ ಪಟ್ಟಣದಲ್ಲಿ ಬರೋಬ್ಬರಿ 41 ಕಡೆ ಜಾಗಗಳನ್ನು ಮೀಸಲಿರಿಸಲಾಗಿದೆ. ಆದರೆ ಪುರಸಭೆ ಈವರೆಗೆ ಎಲ್ಲಿಯೂ ಉದ್ಯಾನ ನಿರ್ಮಿಸಿಲ್ಲ. ಹೆಸರಿಗೆ ಮಾತ್ರ ಕೋರ್ಟ್ ವರ್ತುಲದಲ್ಲಿ ಒಂದು ಉದ್ಯಾನ ಇದೆ. ಆದರೆ ಅಲ್ಲಿ ಯಾವುದೇ ವ್ಯವಸ್ಥೆ ಇಲ್ಲ. ನಾಲ್ಕಾರು ಗಿಡಗಳನ್ನು ಬೆಳೆಸಲಾಗಿದ್ದು ಅದರಿಂದ ಯಾರಿಗೂ ಉಪಯೋಗ ಆಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಉದ್ಯಾನಕ್ಕಾಗಿ ಮೀಸಲಿರಿಸಿದ 41 ಜಾಗಗಳನ್ನು ಈಗಾಗಲೇ ಪುರಸಭೆ ತನ್ನ ವಶಕ್ಕೆ ಪಡೆದು ಅಲ್ಲಿ ಉದ್ಯಾನ ನಿರ್ಮಿಸಬೇಕಿತ್ತು. ಸಿಟಿಎಸ್ ನಂ.929, ಬಸವೇಶ್ವರ ನಗರದಲ್ಲಿನ ಸಿಟಿಎಸ್ ನಂ. 5334\2 ಮತ್ತು 5335\42ಗಳಲ್ಲಿನ ಉದ್ಯಾನಕ್ಕಾಗಿ ಮೀಸಲಿಟ್ಟಿರುವ ಜಾಗಗಳಿಗೆ ಕಾಂಪೌಂಡ್ ನಿರ್ಮಿಸಲಾಗಿದೆ. ಇನ್ನು ಆರ್‌ಎಸ್ ನಂ.5\ಬಿ 121 ಈ ಜಾಗ ಉದ್ಯಾನಕ್ಕಾಗಿ ಮೀಸಲಾಗಿದ್ದು ಪುರಸಭೆಯ 15ನೇ ಹಣಕಾಸು ಯೋಜನೆಯಡಿ ಅಭಿವೃದ್ಧಿ ಮಾಡಲು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗಿದೆ.
ಅದರಂತೆ, ಇಂದಿರಾ ನಗರದ ಆರ್‌ಎಸ್ ನಂ.409\1 ಜಾಗದ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಹಿರೇಬಣದ ಅಗ್ನಿ ಸೋಮೇಶ್ವರ ದೇವಸ್ಥಾನದ ಆರ್‌ಎಸ್ ನಂ.14\ಡಿ ಪ್ಲಾಟ್ ನಂ.34 ಈ ಜಾಗೆ ಇನ್ನೂ ಅಭಿವೃದ್ಧಿ ಹೊಂದಿಲ್ಲ. ಬಸ್ತಿಬಣದ ಆರ್‌ಎಸ್ ನಂ.172\ಕೆ ಪ್ಲಾಟ್ ನಂ.39\40ಕ್ಕೆ ಕಾಂಪೌಂಡ್ ನಿರ್ಮಿಸಲಾಗಿದೆ. ಇಂದಿರಾನಗರದ ಸಿಟಿಎಸ್ ನಂ.409\ಕೆ ಇದಕ್ಕೂ ಕಾಂಪೌಂಡ್ ನಿರ್ಮಾಣವಾಗಿದೆ. ಇನ್ನು ಹುಲಗೇರಿ ಬಣದ ಪಾರ್ವತಿ ಮಕ್ಕಳ ಬಳಗದ ಖಾತಾ ಸಂಖ್ಯೆ 7-94 ಮತ್ತು ಆರ್‌ಎಸ್ ನಂ.63\ಬಿ ಪ್ಲಾಟ್ ನಂ.112 ಜಾಗಗಳಿಗೆ ಕಾಂಪೌಂಡ್ ನಿರ್ಮಿಸಲಾಗಿದೆ.
ಈಶ್ವರ ನಗರದಲ್ಲಿನ ಆರ್‌ಎಸ್ ನಂ.5288\ಡಿ ಈ ಜಾಗೆಗಳನ್ನು ವಶಕ್ಕೆ ಪಡೆದು ಸುತ್ತಲೂ ಕಾಂಪೌಂಡ್ ನಿರ್ಮಿಸಿ ಕಬ್ಬಿಣದ ಗ್ರಿಲ್ ಅಳವಡಿಸಲಾಗಿದೆ. ಉಳಿದ ಜಾಗಗಳು ಪುರಸಭೆ ಮಾಲೀಕತ್ವದಲ್ಲಿದ್ದರೂ ಅವುಗಳ ಅಭಿವೃದ್ಧಿ ಇನ್ನೂ ಆಗಿಲ್ಲ. ಪುರಸಭೆಯ ನಿರ್ಲಕ್ಷ್ಯದಿಂದಾಗಿ ಉದ್ಯಾನಕ್ಕಾಗಿ ಕಾಯ್ದಿರಿಸಿದ ಜಾಗಗಳು ಕೆಲವು ಕಡೆ ಒತ್ತುವರಿ ಆಗುವ ಸಂಭವ ಇದೆ.
ಈಚಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಲೇ ಇದೆ. ಯಾವ ಊರಲ್ಲಿ ಉದ್ಯಾನಗಳು ಇರುತ್ತವೆಯೋ ಅಲ್ಲಿ ತಂಪು ವಾತಾವರಣ ಇರುತ್ತದೆ. ಕಾರಣ ಲಕ್ಷ್ಮೇಶ್ವರದಲ್ಲಿಯೂ ಆದಷ್ಟು ಬೇಗ ಉದ್ಯಾನಗಳನ್ನು ನಿರ್ಮಿಸುವ ಅಗತ್ಯ ಇದೆ. ವೃದ್ಧರು, ಚಿಕ್ಕ ಮಕ್ಕಳು, ಮಹಿಳೆಯರಿಗಾಗಿ ಉದ್ಯಾನಗಳನ್ನು ನಿರ್ಮಿಸಲೇಬೇಕಿದೆ. ಲಕ್ಷ್ಮೇಶ್ವರ ಇಷ್ಟು ದೊಡ್ಡ ಊರಾಗಿದ್ದರೂ ಇಲ್ಲಿ ಒಂದೂ ಉದ್ಯಾನ ಇಲ್ಲ ಎಂದು ಬೇರೆ ಕಡೆಯಿಂದ ಬರುವ ಜನರು ಆಡಿಕೊಳ್ಳುತ್ತಿದ್ದಾರೆ. ಇದನ್ನು ತಪ್ಪಿಸುವ ಜವಾಬ್ದಾರಿ ಸ್ಥಳೀಯ ಆಡಳಿತ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮವಹಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದಲ್ಲಿ ಉದ್ಯಾನ ನಿರ್ಮಿಸಲು ನಿರ್ಧರಿಸಲಾಗಿದೆ. ಉದ್ಯಾನ ನಿರ್ವಹಣೆ ಮಾಡುವ ಸಿಬ್ಬಂದಿಗೆ ₹ 2000 ಕೊಡಲು ನಿರ್ಧರಿಸಲಾಗಿದ್ದು ಒಬ್ಬ ವ್ಯಕ್ತಿಗೆ ಮೂರು ಉದ್ಯಾನಗಳ ಉಸ್ತುವಾರಿ ವಹಿಸಿಕೊಡಲು ಚಿಂತನೆ ನಡೆದಿದೆ.ಮಹೇಶ ಹಡಪದ, ಮುಖ್ಯಾಧಿಕಾರಿ ಪುರಸಭೆ
ಜನರು ಏನಂತಾರೆ?
ಉದ್ಯಾನ ನಿರ್ಮಾಣಕ್ಕೆ ಕ್ರಮವಹಿಸಿ
ಲಕ್ಷ್ಮೇಶ್ವರ ನಗರ ಬೆಳೆಯುತ್ತಲೇ ಇದ್ದು ಅದಕ್ಕೆ ಅನುಗುಣವಾಗಿ ಇಲ್ಲಿನ ಸೌಕರ್ಯಗಳು ಹೆಚ್ಚಬೇಕಿದೆ. ಪುರಸಭೆಯವರು ಉದ್ಯಾನಗಳ ನಿರ್ಮಾಣಕ್ಕೆ ಕ್ರಮವಹಿಸಿದರೆ ಸಾರ್ವಜನಿಕರಿಗೆ ಅನುಕೂಲ ಆಗಲಿದೆ - ಸಿ.ಜಿ. ಹಿರೇಮಠ ನಿವೃತ್ತ ಶಿಕ್ಷಕ
ಪ್ರವಾಸಿ ಭಕ್ತರಿಗೂ ತೊಂದರೆ
ಸೋಮೇಶ್ವರ ದೇವಸ್ಥಾನ ಮತ್ತು ದೂದಪೀರಾಂ ದರ್ಗಾಕ್ಕೆ ಹೊರ ಊರುಗಳಿಂದ ಸಾವಿರಾರು ಭಕ್ತರು ಪ್ರತಿ ತಿಂಗಳು ಭೇಟಿ ನೀಡುತ್ತಾರೆ. ಆದರೆ ಅವರು ದಣಿವಾರಿಸಿಕೊಳ್ಳಲು ಒಂದೂ ಉದ್ಯಾನ ಇಲ್ಲ –ಜಾಕೀರ್‌ಹುಸೇನ್ ಹವಾಲ್ದಾರ, ಟಿಪ್ಪು ಸೇನಾ ಸಂಘಟನೆ ತಾಲ್ಲೂಕು ಘಟಕದ ಅಧ್ಯಕ್ಷ
ಸ್ವಚ್ಛತೆಗೆ ಕ್ರಮ ವಹಿಸಲಿ
ನ್ಯಾಯಾಲಯದ ಹತ್ತಿರ ಉದ್ಯಾನ ಇದೆ. ಆದರೆ ಅಲ್ಲಿ ಯಾವಾಗಲೂ ಗಲೀಜು ತುಂಬಿರುತ್ತದೆ. ಮೇಲಿಂದ ಮೇಲೆ ಅದನ್ನು ಸ್ವಚ್ಛ ಮಾಡಬೇಕು – ಬಿ.ಎಸ್. ಬಾಳೇಶ್ವರಮಠ ವಕೀಲರ ಸಂಘದ ಅಧ್ಯಕ್ಷರು
ಊರಿಗೆ ಕೆಟ್ಟ ಹೆಸರು
ಈಗಾಗಲೇ ಲಕ್ಷ್ಮೇಶ್ವರದಲ್ಲಿ ಉದ್ಯಾನಗಳನ್ನು ನಿರ್ಮಿಸಬೇಕಾಗಿತ್ತು. ಆದರೆ ಈವರೆಗೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಊರಿಗೆ ಕೆಟ್ಟ ಹೆಸರು ಬರುವಂತಾಗಿದೆ – ಪ್ರವೀಣ ಬೋಮಲೆ ಸಾರ್ವಜನಿಕರು
ಕೆರೆ ಬಳಿ ಉದ್ಯಾನ ನಿರ್ಮಿಸಿ
ಇಟ್ಟಿಗೇರಿ ಕೆರೆ ಹತ್ತಿರ ಉದ್ಯಾನ ಮಾಡಿದರೆ ಜನರಿಗೆ ಅನುಕೂಲ ಆಗುತ್ತದೆ – ಸುರೇಶ ಹಟ್ಟಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ತಾಲ್ಲೂಕು ಘಟಕದ ಅಧ್ಯಕ್ಷ
ವೃದ್ಧರಿಗೆ ಅನುಕೂಲ
ಉದ್ಯಾನಗಳು ಇದ್ದರೆ ವೃದ್ಧರು ಮತ್ತು ಮಹಿಳೆಯರು ಬೆಳಗಿನ ವಾಕಿಂಗ್ ಮಾಡಲು ಸಾಕಷ್ಟು ಅನುಕೂಲ ಆಗುತ್ತದೆ – ಶಂಕರ ಸಿಳ್ಳಿನ ಸಾರ್ವಜನಿಕರು
ದಣಿವಾರಿಸಿಕೊಳ್ಳಲು ಜಾಗದ ಕೊರತೆ
ದಿನಾಲೂ ಸಾವಿರಾರು ಜನರು ನಮ್ಮೂರಿಗೆ ಬಂದು ಹೋಗುತ್ತಾರೆ. ಆದರೆ ಅವರು ದಣಿವಾರಿಸಿಕೊಳ್ಳಲು ನಮ್ಮೂರಲ್ಲಿ ಉದ್ಯಾನಗಳೇ ಇಲ್ಲ. –ಮಾಬಳೇಶ ಮೆಡ್ಲೇರಿ, ವ್ಯಾಪಾರಸ್ಥ
ಜನರಿಗೆ ಅನುಕೂಲ ಕಲ್ಪಿಸಿ
ಲಕ್ಷ್ಮೇಶ್ವರದಲ್ಲಿ ಉದ್ಯಾನಗಳ ಅಗತ್ಯ ಬಹಳಷ್ಟು ಇದೆ. ಈಗಾಗಲೇ ಆ ಉದ್ಧೇಶಕ್ಕಾಗಿ ಬಿಟ್ಟಿರುವ ಜಾಗಗಳಲ್ಲಿ ಪುರಸಭೆ ಉದ್ಯಾನ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು – ಈರಣ್ಣ ಯರ್ಲಗಟ್ಟಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.