ಲಕ್ಷ್ಮೇಶ್ವರ: ತಾಲ್ಲೂಕಿನ ಬಾಲೆಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಸಂಪೂರ್ಣ ಹಾಳಾಗಿದೆ. ಸೂರಣಗಿ ಗ್ರಾಮದಿಂದ ಆರಂಭವಾಗುವ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿವೆ. ಮಳೆ ಸಂದರ್ಭದಲ್ಲಿ ರಸ್ತೆ ಗುಂಡಿಗಳಲ್ಲಿ ನೀರು ತುಂಬಿ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಸೂರಣಗಿ ಗ್ರಾಮದಿಂದ ಅಂದಾಜು 8 ಕಿಮೀ ದೂರವಿರುವ ಬಾಲೆಹೊಸೂರು ಮೂಲಕ ಹಾವೇರಿ ಜಿಲ್ಲೆಗೆ ಪ್ರತಿದಿನ ನೂರಾರು ಜನರು ಪ್ರಯಾಣ ಮಾಡುತ್ತಾರೆ. ಆದರೆ, ಹದಗೆಟ್ಟ ರಸ್ತೆಯಿಂದಾಗಿ ವಾಹನಗಳ ಸಂಚಾರಕ್ಕೆ ತಡೆ ಒಡ್ಡಿದೆ. ರಸ್ತೆ ಹಾಳಾಗಿ ಐದಾರು ವರ್ಷಗಳಾದರೂ ದುರಸ್ತಿ ಕಾರ್ಯ ಇದುವರೆಗೂ ಕೈಗೊಂಡಿಲ್ಲ.
ಈ ವರ್ಷದ ನಿರಂತರ ಮಳೆಗೆ ಗುಂಡಿಗಳಲ್ಲಿ ಅಧಿಕ ನೀರು ತುಂಬಿದ್ದು, ಸಾರಿಗೆ ಇಲಾಖೆಯ ಬಸ್ ಸಂಚಾರವೂ ಸವಾಲಾಗಿದೆ. ಕೆಲ ತಿಂಗಳ ಹಿಂದೆ ಆಳವಾದ ಗುಂಡಿಗಳಿಂದಾಗಿ ಬಸ್ ಸಂಚಾರ ಸಹ ಬಂದ್ ಆಗಿದ್ದು, ಗ್ರಾಮಸ್ಥರ ಹೋರಾಟದಿಂದಾಗಿ ಅಧಿಕಾರಿಗಳು ಮಣ್ಣಿನಿಂದ ಕೆಲವು ಗುಂಡಿಗಳನ್ನು ಮುಚ್ಚಿದ್ದರು. ಸುರಿಯುತ್ತಿರುವ ಮಳೆಗೆ ಗುಂಡಿಗಳು ಮತ್ತಷ್ಟು ಆಳವಾಗಿದ್ದು, ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಕೈ ಕಲು ಮುರಿದುಕೊಂಡಿದ್ದಾರೆ. ಆದರೂ ರಸ್ತೆ ನಿರ್ಮಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
‘ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಬಾಲೆಹೊಸೂರು ಗ್ರಾಮದ ನಿವಾಸಿ ಮಲ್ಲಿಕಾರ್ಜುನರೆಡ್ಡಿ ಅವಲತ್ತುಕೊಂಡರು.
ರಸ್ತೆ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ
ಸೂರಣಗಿ-ಬಾಲೆಹೊಸೂರು ರಸ್ತೆ ನಿರ್ಮಿಸಲು ₹7 ಕೋಟಿ ಅನುದಾನ ಬಿಡುಗಡೆಯಾಗಿ ಟೆಂಡರ್ ಕೂಡ ಕರೆಯಲಾಗಿದೆ. ರಸ್ತೆ ನಿರ್ಮಾಣ ಕಾಮಗಾರಿ ಕೆಲವು ದಿನಗಳಲ್ಲಿ ಆರಂಭ ಆಗಲಿದೆ. ಎಸ್‍ಎಚ್‍ಡಿಪಿ ಯೋಜನೆಯಡಿ ₹12 ಕೋಟಿ ಅನುದಾನ ಬಿಡುಗಡೆಯಾಗಿದ್ದು ನನ್ನ ಶಿರಹಟ್ಟಿ ಮತಕ್ಷೇತ್ರ ವ್ಯಾಪ್ತಿಯಲ್ಲಿರುವ ಗದಗ ರಸ್ತೆ ನಿರ್ಮಿಸಲಾಗುವುದು. ಹುಲ್ಲೂರು ಕ್ರಾಸ್‍ನಿಂದ ಸೂರಣಗಿವರೆಗೆ ಈಗಾಗಲೇ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ’ ಎಂದು ಶಾಸಕ ಡಾ.ಚಂದ್ರು ಲಮಾಣಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.