ADVERTISEMENT

ಲಕ್ಷ್ಮೇಶ್ವರ | ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ: ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 5:13 IST
Last Updated 16 ಅಕ್ಟೋಬರ್ 2025, 5:13 IST
ಲಕ್ಷ್ಮೇಶ್ವರದ ಎಪಿಎಂಸಿ ಆವರಣದಲ್ಲಿ ಒಕ್ಕಣಿ ಮಾಡಿದ ಮೆಕ್ಕೆಜೋಳವನ್ನು ಒಣ ಹಾಕಿರುವ ರೈತರು
ಲಕ್ಷ್ಮೇಶ್ವರದ ಎಪಿಎಂಸಿ ಆವರಣದಲ್ಲಿ ಒಕ್ಕಣಿ ಮಾಡಿದ ಮೆಕ್ಕೆಜೋಳವನ್ನು ಒಣ ಹಾಕಿರುವ ರೈತರು   

ಲಕ್ಷ್ಮೇಶ್ವರ: ಸದ್ಯ ಮಳೆರಾಯ ಬಿಡುವು ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕಿನಾದ್ಯಂತ ಗೋವಿನಜೋಳದ ಒಕ್ಕಣಿ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಗೋವಿನಜೋಳದ ಮಾರಾಟ ನಡೆಯಬೇಕಾಗಿತ್ತು. ಆದರೆ ಸತತ ಸುರಿದ ಮಳೆಯಿಂದಾಗಿ ಒಕ್ಕಣಿಗೆ ಅವಕಾಶ ಸಿಕ್ಕಿರಲಿಲ್ಲ. ಇದೀಗ ಬಿಸಿಲು ಬೀಳುತ್ತಿರುವುದರಿಂದ ಒಕ್ಕಣಿಗೆ ಅನುಕೂಲವಾಗಿದೆ.

ಪ್ರಸ್ತುತ ವರ್ಷ ಸಾವಿರಾರು ಹೆಕ್ಟೇರ್‌ನಲ್ಲಿ ರೈತರು ಗೋವಿನಜೋಳದ ಬಿತ್ತನೆ ಮಾಡಿದ್ದಾರೆ. ಉತ್ತಮ ತೇವಾಂಶದಿಂದಾಗಿ ಬೆಳೆ ಬಹುತೇಕ ಚೆನ್ನಾಗಿ ಬಂದಿದೆ. ಇಷ್ಟೊತ್ತಿಗಾಗಲೇ ಮಾರಾಟ ಭರ್ಜರಿಯಿಂದ ನಡೆಯುತ್ತಿತ್ತು.

ಆದರೆ ಎರಡ್ಮೂರು ವಾರಗಳ ಹಿಂದೆ ಆಗಾಗ ಮಳೆ ಸುರಿಯಲು ಆರಂಭಿಸಿದ್ದರಿಂದ ಒಕ್ಕಣಿ ಮಾಡದೇ ರೈತರು ಗೋವಿನಜೋಳವನ್ನು ಹೊಲದಲ್ಲಿಯೇ ಬಿಟ್ಟಿದ್ದರು. ಈಗ ವಾತಾವರಣ ಒಕ್ಕಣಿಗೆ ಅನುಕೂಲಕರವಾಗಿದೆ.

ADVERTISEMENT

ಮಾರುಕಟ್ಟೆಯಲ್ಲಿ ಕ್ವಿಂಟಲ್‍ಗೆ ₹ 1,800-₹ 2,000 ದರದಲ್ಲಿ ಮಾರಾಟ ಆಗುತ್ತಿದೆ. ಆದರೆ ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‍ಗೆ ₹ 2,400 ಬೆಂಬಲ ಬೆಲೆ ಘೋಷಣೆ ಮಾಡಿದೆ. ರೈತರಿಗೆ ಅನುಕೂಲ ಆಗಬೇಕಾದರೆ ಕೂಡಲೇ ಖರೀದಿ ಕೇಂದ್ರ ತೆರೆಯಬೇಕಾದ ಅಗತ್ಯ ಇದೆ. ಇನ್ನು ಖಾಸಗಿ ವ್ಯಾಪಾರಸ್ಥರು ಯಾವುದೇ ಪರವಾನಗಿ ಇಲ್ಲದೆ ನೇರವಾಗಿ ರೈತರ ಮನೆ ಮತ್ತು ಕಣಕ್ಕೆ ತೆರಳಿ ಗೋವಿನಜೋಳ ಖರೀದಿಸುತ್ತಿದ್ದಾರೆ.

ಕೆಲ ಖರೀದಿದಾರರು ತಕ್ಷಣ ಹಣ ಕೊಟ್ಟರೆ, ಇನ್ನೂ ಕೆಲವರು ಅರ್ಧ ಹಣ ನೀಡಿ ಉಳಿದದ್ದನ್ನು ಒಂದು ವಾರ ಬಿಟ್ಟು ಕೊಡುತ್ತೇವೆ ಎಂದು ನಂಬಿಸಿ ಖರೀದಿ ಮಾಡುತ್ತಾರೆ. ಆದರೆ ನಂತರ ಉಳಿದ ಹಣಕ್ಕಾಗಿ ರೈತರು ಸಂಪರ್ಕ ಮಾಡಿದಾಗ ಅವರು ಸಂಪರ್ಕಕ್ಕೆ ಸಿಗುವುದೇ ಇಲ್ಲ. ಹೀಗಾಗಿ ರೈತರು ಮೋಸ ಹೋಗುತ್ತಿದ್ದಾರೆ.

ಅಲ್ಲದೆ ಖಾಸಗಿ ವ್ಯಾಪಾರಸ್ಥರು ತೂಕದಲ್ಲಿ ರೈತರಿಗೆ ಅನ್ಯಾಯ ಮಾಡುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಕಷ್ಟಪಟ್ಟ ರೈತರಿಗೆ ಸರ್ಕಾರದಿಂದ ಅನುಕೂಲ ಆಗಬೇಕಾದರೆ ಜಿಲ್ಲಾಡಳಿತ ಗೋವಿನಜೋಳವನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ವ್ಯವಸ್ಥೆ ಮಾಡಬೇಕಾಗಿದೆ.

‘ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವ್ಯವಸಾಯ ಸೇವಾ ಸೊಸೈಟಿಗಳ ಮೂಲಕ ಖರೀದಿ ಮಾಡಿದರೆ ರೈತರಿಗೆ ಹೆಚ್ಚಿನ ಅನುಕೂಲ ಆಗುತ್ತದೆ. ಇಲ್ಲದಿದ್ದರೆ ಎಪಿಎಂಸಿಯಲ್ಲಿ ಇ-ಟೆಂಡರ್ ಮೂಲಕ ಖರೀದಿಸಲು ಕ್ರಮಕೈಗೊಳ್ಳಬೇಕು’ ಎಂದು ಕೃಷಿಕ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖಿ ಆಗ್ರಹಿಸಿದರು.

ಬೆಂಬಲ ಬೆಲೆಯಲ್ಲಿ ಗೋವಿನಜೋಳ ಖರೀದಿಗೆ ಜಿಲ್ಲಾಧಿಕಾರಿಗಳು ಪಿಕೆಪಿಎಸ್‌ ಹಾಗೂ ಎ‍ಪಿಎಂಸಿಗಳಲ್ಲಿ ವ್ಯವಸ್ಥೆ ಮಾಡಬೇಕು
ಚೆನ್ನಪ್ಪ ಷಣ್ಮುಖಿ ಕೃಷಿಕ ಸಮಾಜದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.