ಲಕ್ಷ್ಮೇಶ್ವರ: ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೌಚಾಲಯಗಳ ಸೌಲಭ್ಯ ಇದೆ. ಆದರೆ, ಬಹುತೇಕ ಶಾಲೆಗಳಲ್ಲಿನ ಶೌಚಾಲಯಗಳಲ್ಲಿ ಸ್ವಚ್ಛತೆ ಸಮಸ್ಯೆ ಇದೆ.
ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ 33 ಸರ್ಕಾರಿ ಹಿರಿಯ ಪ್ರಾಥಮಿಕ, 33 ಸರ್ಕಾರಿ ಕಿರಿಯ ಪ್ರಾಥಮಿಕ, 9 ಸರ್ಕಾರಿ ಪ್ರೌಢಶಾಲೆಗಳು, 12 ಅನುದಾನರಹಿತ ಹಿರಿಯ ಪ್ರಾಥಮಿಕ ಹಾಗೂ ಒಂಬತ್ತು ಪ್ರೌಢಶಾಲೆಗಳು, ಅನುದಾನರಹಿತ 9 ಕಿರಿಯ ಪ್ರಾಥಮಿಕ, 12 ಹಿರಿಯ ಪ್ರಾಥಮಿಕ, 13 ಪ್ರೌಢಶಾಲೆಗಳು, ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಡಿ ಒಂದು ಕಿರಿಯ ಪ್ರಾಥಮಿಕ ಮತ್ತು ಐದು ಪ್ರೌಢ ಶಾಲೆಗಳು ನಡೆಯುತ್ತಿದ್ದು ಹೀಗೆ ಒಟ್ಟು 132 ಶಾಲೆಗಳಲ್ಲಿ ಸಾವಿರಾರು ಮಕ್ಕಳು ವಿದ್ಯೆ ಕಲಿಯುತ್ತಿದ್ದಾರೆ.
ಎಲ್ಲ ಶಾಲೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಲಕ್ಷ್ಮೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.4ರಲ್ಲಿ ಕಳೆದ ಎರಡು ವರ್ಷಗಳಿಂದ ಶೌಚಾಲಯ ನಿರ್ಮಿಸಲಾಗುತ್ತಿದ್ದು, ಅದು ಇನ್ನೂ ಮುಗಿದಿಲ್ಲ. ಹೀಗಾಗಿ ಇಲ್ಲಿ ಮಕ್ಕಳಿಗೆ ಶೌಚಾಲಯದ ಸಮಸ್ಯೆ ಇದೆ.
ಇನ್ನು ಕೆಲವು ಶಾಲೆಗಳಲ್ಲಿ ಶೌಚಾಲಯ ಇದ್ದರೂ ಅಲ್ಲಿ ಸ್ವಚ್ಛತೆ ಮರೀಚಿಕೆಗೆ ಆಗಿದೆ. ಹೆಚ್ಚಾಗಿ ಪ್ರೌಢಶಾಲೆಗಳಲ್ಲಿ ಸ್ವಚ್ಛತೆಯ ಕೊರತೆ ಎದ್ದು ಕಾಣುತ್ತಿದೆ. ಕೆಲವು ಶಾಲೆಗಳಲ್ಲಿ ನೀರಿನ ಸೌಲಭ್ಯ ಇಲ್ಲ. ಇಂಥ ಶಾಲೆಗಳಲ್ಲಿನ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ.
ಲಕ್ಷ್ಮೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿನ ಬಾಲಕರ ಮೂತ್ರಾಲಯದ ಮೇಲೆ ಯಾವುದೇ ಕಟ್ಟಡ ಇಲ್ಲ. ಮಳೆಗಾಲದಲ್ಲಿ ಮಕ್ಕಳಿಗೆ ತೊಂದರೆ ಆಗುತ್ತದೆ. ಅದರಂತೆ ಇಂದಿರಾನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬಾಲಕರು ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ ಮೂತ್ರಾಲಯಗಳಿವೆ. ಆದರೆ, ಶೌಚಾಲಯ ಮಾತ್ರ ಒಂದೇ ಇದೆ. ಉಳಿದಂತೆ ಎಲ್ಲ ಶಾಲೆಗಳಲ್ಲೂ ಮೂತ್ರಾಲಯ ಹಾಗೂ ಶೌಚಾಲಯಗಳು ಸುಸಜ್ಜಿತ ಸ್ಥಿತಿಯಲ್ಲಿವೆ.
ಲಕ್ಷ್ಮೇಶ್ವರ ತಾಲ್ಲೂಕಿನ ಎಲ್ಲ ಶಾಲೆಗಳಲ್ಲೂ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ ಅರ್ಧಕ್ಕೆ ನಿಂತ ಶೌಚಾಲಯವನ್ನು ಆದಷ್ಟು ಬೇಗನೇ ಮುಗಿಸಲು ಕ್ರಮಕೈಗೊಳ್ಳಲಾಗುವುದುಎಚ್.ಎನ್.ನಾಯಕ ಬಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.