ADVERTISEMENT

ಲಕ್ಷ್ಮೇಶ್ವರ | ಸೌಲಭ್ಯ ವಂಚಿತ ಸ್ಮಶಾನಗಳು: ಸವಲತ್ತಿಗೆ ಆಗ್ರಹ

ನಾಗರಾಜ ಎಸ್‌.ಹಣಗಿ
Published 28 ಏಪ್ರಿಲ್ 2025, 5:11 IST
Last Updated 28 ಏಪ್ರಿಲ್ 2025, 5:11 IST
ಲಕ್ಷ್ಮೇಶ್ವರದ ಮಹಾಂತಯ್ಯನಮಠದ ಹತ್ತಿರದ ಸ್ಮಶಾನದಲ್ಲಿ ಮುಳ್ಳಿನಕಂಟಿ ಬೆಳೆದಿರುವುದು
ಲಕ್ಷ್ಮೇಶ್ವರದ ಮಹಾಂತಯ್ಯನಮಠದ ಹತ್ತಿರದ ಸ್ಮಶಾನದಲ್ಲಿ ಮುಳ್ಳಿನಕಂಟಿ ಬೆಳೆದಿರುವುದು   

ಲಕ್ಷ್ಮೇಶ್ವರ: ಮರಣದ ನಂತರ ಮನುಷ್ಯನ ಅಂತ್ಯಕ್ರಿಯೆ ಸುಸೂತ್ರವಾಗಿ ಮಾಡಬೇಕಾದದ್ದು ನಾಗರಿಕ ಸಮಾಜದ ಕರ್ತವ್ಯ. ಅದಕ್ಕಾಗಿ ಸ್ಮಶಾನಗಳಿಗೆ ಅಗತ್ಯವಿರುವ ಎಲ್ಲ ಮೂಲಸೌಲಭ್ಯ ಕಲ್ಪಿಸಬೇಕಾದದ್ದು ಸರ್ಕಾರದ ಜವಾಬ್ದಾರಿ. ಆದರೆ, ಕೆಲವು ಸ್ಮಶಾನಗಳನ್ನು ಹೊರತುಪಡಿಸಿದರೆ ತಾಲ್ಲೂಕಿನ ಬಹುತೇಕ ರುದ್ರಭೂಮಿಗಳು ಮೂಲಸೌಲಭ್ಯದಿಂದ ವಂಚಿತಗೊಂಡಿವೆ.

ತಾಲ್ಲೂಕಿನ ಪುಟಗಾಂವ್‍ಬಡ್ನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಲ್ಲಾಪುರ ಮತ್ತು ಆದರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೋಗಿಹಾಳ ಹೊರತುಪಡಿಸಿದರೆ ಉಳಿದೆಲ್ಲೆಡೆ ಸ್ಮಶಾನಗಳಿವೆ. ಆದರೆ ಅವು ಹೆಸರಿಗೆ ಮಾತ್ರ ಅನ್ನುವಂತಿದ್ದು ಅಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ.

ಪ್ರತಿ ಸ್ಮಶಾನದಲ್ಲಿ ಚಿತಾಗಾರ, ನೀರು, ವಿದ್ಯುತ್, ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ, ನೆರಳಿಗಾಗಿ ಮರಗಳು ಹಾಗೂ ಸುಸಜ್ಜಿತ ದಾರಿ ಅಗತ್ಯವಿದೆ. ಆದರೆ, ಲಕ್ಷ್ಮೇಶ್ವರ ಅಗಸ್ತ್ಯತೀರ್ಥ ಹತ್ತಿರದ ಮುಕ್ತಿಧಾಮ, ಶಿಗ್ಲಿ ರಸ್ತೆಯಲ್ಲಿನ ಸ್ಮಶಾನ, ತಾಲ್ಲೂಕಿನ ಶಿಗ್ಲಿ, ಅಡರಕಟ್ಟಿ, ಗೋವನಾಳ ಗ್ರಾಮಗಳಲ್ಲಿನ ರುದ್ರಭೂಮಿಗಳಲ್ಲಿ ನೀರು, ಚಿತಾಗಾರ, ದಾರಿಯ ವ್ಯವಸ್ಥೆ ಇದ್ದು, ವಯಸ್ಸಾದವರಿಗೆ ಕುಳಿತುಕೊಳ್ಳಲು ಆಸನಗಳನ್ನು ನಿರ್ಮಿಸಿಲ್ಲ.

ADVERTISEMENT

ಲಕ್ಷ್ಮೇಶ್ವರದ ಮಹಾಂತಯ್ಯನಮಠದ ಹತ್ತಿರದ ಸ್ಮಶಾನದಲ್ಲಿ ಯಾವುದೇ ಸೌಲಭ್ಯಗಳಿಲ್ಲ. ಕನಿಷ್ಠ ಪಕ್ಷ ಚಿತಾಗಾರವೂ ಇಲ್ಲದ ಕಾರಣ ಎಲ್ಲೆಂದರಲ್ಲಿ ಶವಗಳನ್ನು ಸುಡುವುದರಿಂದ ಇಡೀ ರುದ್ರಭೂಮಿ ಕಸಕಡ್ಡಿಯಿಂದ ತುಂಬಿಕೊಂಡಿದೆ. ಸ್ಮಶಾನ ಅಭಿವೃದ್ಧಿಗೆ ಪುರಸಭೆ ಆದ್ಯತೆ ನೀಡಬೇಕಾಗಿತ್ತು. ಪುರಸಭೆ ವತಿಯಿಂದ ಶವ ಸಾಗಿಸಲು ವಾಹನ ವ್ಯವಸ್ಥೆ ಮಾಡಲಾಗಿದೆ. ಆದರೆ, ವಾಹನ ಬಹಳ ಹಳೆಯದಾಗಿದ್ದು, ಅದರ ತಳಭಾಗ ತುಕ್ಕು ಹಿಡಿದಿದ್ದು ಶವ ಸಾಗಿಸಲು ಯೋಗ್ಯವಾಗಿಲ್ಲ. ಆದರೂ ಸಹ ಪುರಸಭೆ ಹೊಸ ವಾಹನದ ವ್ಯವಸ್ಥೆಯನ್ನು ಇನ್ನೂ ಮಾಡಿಲ್ಲ.

ಹಾಗೆಯೇ ತಾಲ್ಲೂಕಿನ ಬಟ್ಟೂರು ಗ್ರಾಮದಲ್ಲಿ ಸ್ಮಶಾನಕ್ಕಾಗಿ ಈಚೆಗೆ ಭೂಮಿ ಖರೀದಿಸಲಾಗಿದ್ದು, ದಾರಿಯೊಂದನ್ನು ಬಿಟ್ಟರೆ ಯಾವುದೇ ಸೌಲಭ್ಯ ಇಲ್ಲ. ಇದರಿಂದಾಗಿ ಜನರು ಶವಗಳನ್ನು ಒಮ್ಮೊಮ್ಮೆ ರಸ್ತೆ ಪಕ್ಕದಲ್ಲಿಯೇ ಸುಡುತ್ತಾರೆ. ಪುಟಗಾಂವ್‍ಬಡ್ನಿ ಗ್ರಾಮದಲ್ಲಿ ಆರು ಎಕರೆಯಷ್ಟು ವಿಶಾಲವಾದ ಸ್ಮಶಾನ ಇದೆ. ಆದರೆ, ದುರ್ದೈವ ಎಂದರೆ ಅಲ್ಲಿಗೆ ಹೋಗಲು ರಸ್ತೆಯೇ ಇಲ್ಲ. ಶವವನ್ನು ರುದ್ರಭೂಮಿಗೆ ತೆಗೆದುಕೊಂಡು ಹೋಗಬೇಕಾದರೆ ಹಳ್ಳ ದಾಟಿ ಆಚೆ ಕಡೆ ಹೋಗಬೇಕಾದ ಪರಿಸ್ಥಿತಿ ಇದೆ. ಆದರೆ ಮಳೆಗಾಲದಲ್ಲಿ ಶವ ಸಾಗಿಸುವುದು ಅಸಾಧ್ಯದ ಕೆಲಸ. ಹೀಗಾಗಿ ಗ್ರಾಮಸ್ಥರು ಆದರಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿನ ಹಳ್ಳದಲ್ಲಿಯೇ ಶವಗಳನ್ನು ಈಗಲೂ ಸುಡುತ್ತಿದ್ದಾರೆ. ಇನ್ನು ಹೊಲ ಇರುವ ರೈತರು ತಮ್ಮ ಹೊಲಗಳಲ್ಲಿಯೇ ಶವಗಳನ್ನು ದಫನ್ ಮಾಡುತ್ತಾರೆ.

ಮರಳುಗಳ್ಳರು ಪುಟಗಾಂವ್‍ಬಡ್ನಿಯ ಸ್ಮಶಾನದ ಜಾಗೆಯನ್ನೇ ಬಗೆದು ಮರಳು ಸಾಗಿಸುತ್ತಲೇ ಬಂದಿದ್ದಾರೆ. ಈ ಕಾರಣಕ್ಕಾಗಿ ರುದ್ರಭೂಮಿ ತನ್ನ ಆಕಾರವನ್ನೇ ಕಳೆದುಕೊಂಡಿದ್ದು ಅನಿವಾರ್ಯವಾಗಿ ಹಳ್ಳದಲ್ಲಿಯೇ ಶವ ಸಂಸ್ಕಾರ ನಡೆಯುತ್ತಿದೆ. ಇಲ್ಲಿಯೂ ಚಿತಾಗಾರದ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಶವ ಸಂಸ್ಕಾರ ಬಹಳ ದುಸ್ತರವಾಗಿದೆ.

ತಾಲ್ಲೂಕಿನ ಹುಲ್ಲೂರು ಗ್ರಾಮದಲ್ಲೂ ಇದೇ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಹಳ್ಳಕ್ಕೆ ಹಚ್ಚಿಕೊಂಡು ಸ್ಮಶಾನ ಇದ್ದು ಅಲ್ಲಿ ಗ್ರಾಮ ಪಂಚಾಯ್ತಿ ಗಿಡಗಳನ್ನು ನೆಟ್ಟಿದೆ. ಆದರೆ ನೀರಿನ ವ್ಯವಸ್ಥೆ ಮಾಡಿಲ್ಲ. ಇದೇ ಪರಿಸ್ಥಿತಿ ಯಳವತ್ತಿ ಗ್ರಾಮದ ರುದ್ರಭೂಮಿಯಲ್ಲೂ ಇದೆ. ಆದರೆ, ಧರ್ಮಸ್ಥಳ ಸಂಘದವರು ಇಲ್ಲಿ ಚಿತಾಗಾರ ನಿರ್ಮಿಸಿ ಕೊಡಲು ಒಪ್ಪಿಕೊಂಡಿದ್ದಾರೆ.

ಲಕ್ಷ್ಮೇಶ್ವರದ ಶಿಗ್ಲಿಯಲ್ಲಿನ ಸ್ಮಶಾನ ಕಸಕಡ್ಡಿಯಿಂದ ತುಂಬಿರುವುದು

ಮಾಡಳ್ಳಿ, ದೊಡ್ಡೂರು, ಸೂರಣಗಿ, ಬಾಲೆಹೊಸೂರು, ರಾಮಗೇರಿ, ಆದರಹಳ್ಳಿ, ಗೊಜನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಸ್ಮಶಾನಗಳು ಮೂಲಸೌಲಭ್ಯಗಳು ಇಲ್ಲದೇ ನರಳುತ್ತಿವೆ. ದೊಡ್ಡೂರು ಗ್ರಾಮದ ಸ್ಮಶಾನಕ್ಕೆ ತೆರಳಲು ರಸ್ತೆಯ ಸಮಸ್ಯೆ ಇದೆ. ಇದನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಬೇಗನೇ ಬಗೆಹರಿಸಬೇಕಿದೆ. ಮುಖ್ಯವಾಗಿ ಎಲ್ಲ ರುದ್ರಭೂಮಿಗಳಿಗೆ ಚಿತಾಗಾರ, ವಿದ್ಯುತ್ ಸಂಪರ್ಕ, ರಸ್ತೆ ಹಾಗೂ ನೀರಿನ ವ್ಯವಸ್ಥೆಯನ್ನು ತುರ್ತು ಮಾಡಬೇಕಿದೆ. ಈ ನಿಟ್ಟಿನಲ್ಲಿ ತಾಲ್ಲೂಕಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕಾದ ಅಗತ್ಯ ಇದೆ. ಅದರೊಂದಿಗೆ ಆಯಾ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿಗಳು ತಮ್ಮ ವ್ಯಾಪ್ತಿಯಲ್ಲಿನ ಸ್ಮಶಾನಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕು. ನರೇಗಾ ಯೋಜನೆಯಡಿ ಸ್ಮಶಾನ ಅಭಿವೃದ್ಧಿ ಪಡಿಸಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಕ್ರಮಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸ್ಮಶಾನಗಳನ್ನು ಅಭಿವೃದ್ಧಿ ಮಾಡಲು ನಿರ್ಧರಿಸಲಾಗಿದೆ. ಮಹಾಂತಯ್ಯನಮಠದ ಹತ್ತಿರದ ಸ್ಮಶಾನದಲ್ಲಿ ಚಿತಾಗಾರ ನಿರ್ಮಿಸಲು ಕ್ರಮಕೈಗೊಳ್ಳಲಾಗುವುದು. ಅದರೊಂದಿಗೆ ಶವ ಸಾಗಿಸಲು ಹೊಸ ವಾಹನ ಖರೀದಿಸಲು ಪ್ರಸ್ತಾವ ಸಲ್ಲಿಸಲಾಗಿದೆ.
–ಮಹೇಶ ಹಡಪದ ಪುರಸಭೆ ಮುಖ್ಯಾಧಿಕಾರಿ ಲಕ್ಷ್ಮೇಶ್ವರ

ಜನರು ಏನಂತಾರೆ?

ಲಕ್ಷ್ಮೇಶ್ವರದ ಸಮಗಾರ ರುದ್ರಭೂಮಿಯಲ್ಲಿ ಮೂಲಸೌಲಭ್ಯಗಳೇ ಇಲ್ಲ. ಮೊದಲು ಇಲ್ಲಿ ನೀರು ಹಾಗೂ ಆಸನಗಳ ವ್ಯವಸ್ಥೆ ಮಾಡಬೇಕು

ಟಾಕಪ್ಪ ಸಾತಪುತೆ, ಲಕ್ಷ್ಮೇಶ್ವರ

ನಮ್ಮೂರಿನ ಸ್ಮಶಾನಕ್ಕೆ ಹೋಗಲು ದಾರಿ ಇದೆ. ಆದರೆ ನೀರು ಹಾಗೂ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇಲ್ಲ. ಅಧಿಕಾರಿಗಳು ಬೇಗನೇ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.

ವಿರುಪಾಕ್ಷಪ್ಪ ಮುದಕಣ್ಣವರ, ಹುಲ್ಲೂರು ಗ್ರಾಮದ ನಿವಾಸಿ

ಮಾಡಳ್ಳಿ ಗ್ರಾಮದ ಸ್ಮಶಾನಕ್ಕೆ ಹೋಗಲು ಸರಿಯಾದ ದಾರಿ ಹಾಗೂ ವಿದ್ಯುತ್ ಸಂಪರ್ಕವಿಲ್ಲ. ಹೀಗಾಗಿ ರಾತ್ರಿ ವೇಳೆ ಶವ ಸಂಸ್ಕಾರ ಮಾಡುವುದಕ್ಕೆ ತೊಂದರೆ ಆಗುತ್ತಿದೆ.

ರಾಮಣ್ಣ ಸೂರಣಗಿ, ಮಾಡಳ್ಳಿ ಗ್ರಾಮದ ನಿವಾಸಿ

ಮಹಾಂತಯ್ಯನಮಠದ ಹತ್ತಿರದ ಸ್ಮಶಾನಕ್ಕೆ ಯಾವುದೇ ಸೌಲಭ್ಯ ಇಲ್ಲದೆ ನರಳುತ್ತಿದೆ. ಚಿತಾಗಾರ ವ್ಯವಸ್ಥೆ ಮಾಡಬೇಕು. ಕುಳಿತುಕೊಳ್ಳಲು ಆಸನಗಳನ್ನು ನಿರ್ಮಿಸಬೇಕು.

ಬಿ.ಎಸ್.ಬಾಳೇಶ್ವರಮಠ, ವಕೀಲ, ಲಕ್ಷ್ಮೇಶ್ವರ

ನಮ್ಮೂರಿನ ರುದ್ರಭೂಮಿಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಅಲ್ಲದೆ ನೀರು ಮತ್ತು ಚಿತಾಗಾರದ ವ್ಯವಸ್ಥೆ ಮಾಡಬೇಕು.

ಚನ್ನಪ್ಪ ಷಣ್ಮುಖಿ, ಗೊಜನೂರು ಗ್ರಾಮದ ನಿವಾಸಿ

ಮುಕ್ತಿಧಾಮದಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು. ಅಲ್ಲದೆ ಎಲ್ಲೆಂದರಲ್ಲಿ ಕಸಕಡ್ಡಿ, ಮುಳ್ಳಿನ ಕಂಟಿಗಳು ತುಂಬಿಕೊಂಡಿದ್ದು ಅವುಗಳನ್ನು ತೆರವುಗೊಳಿಸಬೇಕು.

ಮಾಬಳೇಶ್ವರ ಮೆಡ್ಲೇರಿ, ಲಕ್ಷ್ಮೇಶ್ವರ

ದೊಡ್ಡೂರು ಗ್ರಾಮದ ಸ್ಮಶಾನಕ್ಕೆ ಹೋಗಲು ದಾರಿ ಇಲ್ಲ. ಆದಷ್ಟು ಬೇಗನೇ ರಸ್ತೆ ನಿರ್ಮಿಸಿ ಕೊಡಬೇಕು.

ಅಮರಪ್ಪ ಗುಡಗುಂಟಿ, ದೊಡ್ಡೂರು ಗ್ರಾಮದ ನಿವಾಸಿ

ಅಧಿಕಾರಿಗಳು ಏನಂತಾರೆ?

ಸ್ಮಶಾನಕ್ಕೆ ಜಾಗದ ವ್ಯವಸ್ಥೆ ತಾಲ್ಲೂಕಿನ ಹಿರೇಮಲ್ಲಾಪುರ ಮತ್ತು ಸೋಗಿಹಾಳ ಹೊರತುಪಡಿಸಿ ಎಲ್ಲ ಹದಿನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಹಳ್ಳಿಗಳಲ್ಲೂ ಸ್ಮಶಾನಕ್ಕೆ ಜಾಗದ ವ್ಯವಸ್ಥೆ ಮಾಡಲಾಗಿದೆ. ಇದರೊಂದಿಗೆ ಹಿರೇಮಲ್ಲಾಪುರ ಹಾಗೂ ಸೋಗಿಹಾಳ ಗ್ರಾಮಗಳಲ್ಲೂ ರುದ್ರಭೂಮಿಗಾಗಿ ಜಾಗ ಖರೀದಿಗಾಗಿ ಪ್ರಸ್ತಾವ ಸಲ್ಲಿಸಲಾಗಿದ್ದು ಆದಷ್ಟು ಬೇಗನೆ ಜಾಗೆ ಖರೀದಿಸಲಾಗುವುದು.
ವಾಸುದೇವ ಸ್ವಾಮಿ, ಲಕ್ಷ್ಮೇಶ್ವರ ತಹಶೀಲ್ದಾರ್‌
ಮೂಲಸೌಲಭ್ಯ ಕಲ್ಪಿಸಲು ಕ್ರಮ ಕಳೆದ ಎರಡ್ಮೂರು ವರ್ಷಗಳ ಹಿಂದಷ್ಟೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಮಶಾನಕ್ಕಾಗಿ ಜಾಗೆ ಖರೀದಿಸಿದ್ದು ಹಂತ ಹಂತವಾಗಿ ಎಲ್ಲ ರುದ್ರಭೂಮಿಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು. ಈಗಾಗಲೇ ನರೇಗಾ ಯೋಜನೆಯಡಿ ಕೆಲವು ಸ್ಮಶಾನಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ಕೃಷ್ಣಪ್ಪ ಧರ್ಮರ ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯಿತಿ ಇಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.