ADVERTISEMENT

ಗದಗ | ಪೋಡಿ ಮಾಡಿಕೊಡಲು ಲಂಚ ಪಡೆದ ಇಬ್ಬರು ಲೋಕಾ ಬಲೆಗೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 7:02 IST
Last Updated 4 ಫೆಬ್ರುವರಿ 2026, 7:02 IST
<div class="paragraphs"><p>‘ಲೋಕಾ’</p></div>

‘ಲೋಕಾ’

   

ಗದಗ: ಜಮೀನಿನ ಪೋಡಿ ಮಾಡಿಕೊಡಲು ₹2,500 ಲಂಚ ಪಡೆದ ಗದಗ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಮೋಜಣಿ ಡಾಟಾ ಎಂಟ್ರಿ ಅಪರೇಟರ್‌ ಕವಿತಾ ವಿ.ಚಿಕ್ಕಮಠ ಹಾಗೂ ಕಚೇರಿಯ ಹೊರಗುತ್ತಿಗೆ ಡಿ ಗ್ರೂಪ್‌ ನೌಕರ ನಾಗೇಶ ಬಡಿಗೇರ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗಣೇಶ ಅಂದಪ್ಪ ಮುಂಡರಗಿ ಎಂಬುವರು ಗದಗ ತಾಲ್ಲೂಕಿನ ಹರ್ಲಾಪುರದಲ್ಲಿ 6 ಗುಂಟೆ ಜಮೀನು ಖರೀದಿಸಿದ್ದರು. ಅದು ಮೂಲ ಮಾಲೀಕರ ಜತೆಗೆ ಜಂಟಿ ಉತಾರ ಇದ್ದು, ಅದನ್ನು ಪೋಡಿ ಮಾಡಿಕೊಡುವಂತೆ ಕಚೇರಿಗೆ ಹೋಗಿದ್ದರು. ಈ ವೇಳೆ ಕವಿತಾ ಚಿಕ್ಕಮಠ ₹3 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೊಲೀಸರಿಗೆ ಲಿಖಿತ ದೂರು ನೀಡಿದ್ದರು.

ADVERTISEMENT

‘ಗಣೇಶ ಅವರು ಮಂಗಳವಾರ ತಮ್ಮ ಕೆಲಸದ ಬಗ್ಗೆ ವಿಚಾರಿಸುವ ವೇಳೆ ಕವಿತಾ ಚಿಕ್ಕಮಠ ₹2,500 ಲಂಚ ಕೇಳಿದ್ದಾರೆ. ಅದನ್ನು ಅವರ ಹೇಳಿಕೆ ಮೇರೆಗೆ ಕಚೇರಿಯ ಜವಾನ ನಾಗೇಶ ಬಡಿಗೇರ ಸ್ವೀಕರಿಸುತ್ತಿದ್ದ ವೇಳೆ ಇಬ್ಬರನ್ನೂ ದಸ್ತಗಿರಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಧಾರಾವಾಡ ಲೋಕಾಯುಕ್ತ ಎಸ್‌ಪಿ ಎಸ್‌.ಟಿ.ಸಿದ್ಧಲಿಂಗಪ್ಪ ಮಾರ್ಗದರ್ಶನದಲ್ಲಿ ಗದಗ ಲೋಕಾಯುಕ್ತ ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಎಸ್‌.ತೇಲಿ ಹಾಗೂ ಸಿಬ್ಬಂದಿಯಾದ ಹಸನ್, ಗಾರ್ಗಿ, ಬಾರಡ್ಡಿ, ದಿಡಗೂರು, ಸಂಗನಾಳ, ಜವಳಿ, ಅಂಬಿಗೇರ, ಹಿರೇಮಠ, ನೈನಾಪುರ ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.