ADVERTISEMENT

ಸಮೀಕ್ಷೆ: ಲಿಂಗಾಯತರು ‘ಲಿಂಗಾಯತ ಧರ್ಮ’ ಎಂದೇ ನಮೂದಿಸಿ– ತೋಂಟದಾರ್ಯ ಸ್ವಾಮೀಜಿ

ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮೀಜಿ ಕರೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:33 IST
Last Updated 26 ಸೆಪ್ಟೆಂಬರ್ 2025, 4:33 IST
ಸಿದ್ಧರಾಮ ಸ್ವಾಮೀಜಿ
ಸಿದ್ಧರಾಮ ಸ್ವಾಮೀಜಿ   

ಗದಗ: ‘ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಪ್ರಾರಂಭಿಸಿದ್ದು, ಜನರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಸಮೀಕ್ಷೆ ಮಾಡುವ ಉದ್ದೇಶ ಹೊಂದಿದೆ. ತರಾತುರಿಯಲ್ಲಿ ನಡೆಯುತ್ತಿರುವ ಈ ಸಮೀಕ್ಷೆಯಿಂದಾಗಿ ಜನರಲ್ಲಿ, ವಿಶೇಷವಾಗಿ ಲಿಂಗಾಯತರಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಿವೆ’ ಎಂದು ತೋಂಟದ ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ. 

‘ಸಂವಿಧಾನದ ಕಲಂ 25ರ ಪ್ರಕಾರ ದೇಶದಲ್ಲಿ ಪ್ರಚಲಿತದಲ್ಲಿರುವ ಎಲ್ಲ ಧರ್ಮಗಳನ್ನು ಮಾನ್ಯ ಮಾಡಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ಕಾರಣಕ್ಕಾಗಿಯೇ ಜನಗಣತಿ ಅರ್ಜಿಯ ಎಂಟನೇ ಕಾಲಂನ 11ನೇ ಉಪಕಾಲಂನಲ್ಲಿ ‘ಇತರೆ’ ಎಂದು ಪ್ರತ್ಯೇಕ ಕಾಲಂ ಮೀಸಲಾಗಿರಿಸಿದೆ. ಇಲ್ಲಿ ‘ಲಿಂಗಾಯತ ಧರ್ಮ’ ಎಂದು ಬರೆಯಲು ಗಣತಿದಾರರಿಗೆ ಸೂಚಿಸಬೇಕು. ಹಾಗೆಯೇ ಅವರು ಬರೆದುಕೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

‘ಇತ್ತೀಚೆಗೆ ಅನೇಕ ಮಠಾಧಿಪತಿಗಳು ಮತ್ತು ಜಾಗತಿಕ ಲಿಂಗಾಯತ ಮಹಾಸಭೆಯವರು ಧರ್ಮದ ಕಾಲಂದಲ್ಲಿ ಹಿಂದೂ ಅಂತ ಬರೆಸಬಾರದು ಎಂದೂ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಈ ವಿಷಯವನ್ನು ಲಿಂಗಾಯತರ ವಿವೇಚನೆಗೆ ಬಿಟ್ಟಿರುವುದನ್ನು ಎಲ್ಲರೂ ಗಮನಿಸಿ  ಧರ್ಮದ ಕಾಲಂದಲ್ಲಿ ‘ಲಿಂಗಾಯತ ಧರ್ಮ’ ಎಂದೇ ಬರೆಸಬೇಕು. 9ನೇ ಜಾತಿ ಕಾಲಂನಲ್ಲಿ ವೀರಶೈವರು ‘ವೀರಶೈವ’ ಎಂದು, ವೀರಶೈವ ಲಿಂಗಾಯತರು ‘ವೀರಶೈವ ಲಿಂಗಾಯತ’ರೆಂದು, ಲಿಂಗಾಯತದ ಬೇರೆ ಬೇರೆ ಪಂಗಡದವರು ತಮ್ಮ ತಮ್ಮ ಜಾತಿಗಳ ಹೆಸರನ್ನು ಲಿಂಗಾಯತ ಪಂಚಮಸಾಲಿ, ಲಿಂಗಾಯತ ಕುಡುವಕ್ಕಲಿಗ, ಲಿಂಗಾಯತ ಬಣಜಿಗ, ಲಿಂಗಾಯತ ರೆಡ್ಡಿ ಇತ್ಯಾದಿ ಬರೆಸಬೇಕು’ ಎಂದು ತಿಳಿಸಿದ್ದಾರೆ.

ADVERTISEMENT

‘ಜಾತಿಗಳಲ್ಲಿ ಉಪಜಾತಿಗಳಿದ್ದರೆ ಉಪಜಾತಿ ಕಾಲಂದಲ್ಲಿ ಅವುಗಳನ್ನು ನಮೂದಿಸಬಹುದು. ಇದರಿಂದ ಲಿಂಗಾಯತರ ಜನಸಂಖ್ಯೆಯನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದು’ ಎಂದು ತಿಳಿಸಿದ್ದಾರೆ.

ಸಣ್ಣ ಸಣ್ಣ ಸಮುದಾಯಗಳು ಲಿಂಗಾಯತ ಧರ್ಮದಿಂದ ದೂರ ಸರಿಯುತ್ತಿರುವ ಈ ಸಂದರ್ಭದಲ್ಲಿ ಅಖಂಡ ಲಿಂಗಾಯತ ಸಮಾಜವನ್ನು ಗಟ್ಟಿಯಾಗಿ ಉಳಿಸಿಕೊಳ್ಳಲು ಪ್ರತಿಷ್ಠೆಯನ್ನು ಬದಿಗಿರಿಸಿ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ

–ಸಿದ್ಧರಾಮ ಸ್ವಾಮೀಜಿ ತೋಂಟದಾರ್ಯ ಮಠ

ಬಸವ ಸಂಸ್ಕೃತಿ ಅಭಿಯಾನ: ಸಮಾರೋಪ ಅ.5ಕ್ಕೆ

‘ಸೆಪ್ಟೆಂಬರ್‌ 1ರಂದು ಬಸವನಬಾಗೇವಾಡಿಯಿಂದ ಪ್ರಾರಂಭಗೊಂಡ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭ ಅಕ್ಟೋಬರ್‌ 5ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ  ಬೆಳಿಗ್ಗೆ 11ಕ್ಕೆ ನಡೆಯಲಿದೆ’ ಎಂದು ಸಿದ್ಧರಾಮ ಸ್ವಾಮೀಜಿ ತಿಳಿಸಿದ್ದಾರೆ.  ‘ರಾಜ್ಯ ಎಲ್ಲ ಜಿಲ್ಲಾ ಕೇಂದ್ರಗಳನ್ನು ಸುತ್ತಿ ಬಸವಾದಿ ಶರಣರ ತತ್ತ್ವಾದರ್ಶಗಳನ್ನು ಜನಮನಕ್ಕೆ ತಲುಪಿಸುವಲ್ಲಿ ಅಭಿಯಾನವು ಯಶಸ್ವಿಯಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ಎಲ್ಲ ಬಸವಾನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರೋಪ ಸಮಾರಂಭ ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದ್ದಾರೆ.  ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿನ ಸಮಾರೋಪ ಸಮಾರಂಭಕ್ಕೆ ಬರುವ ಎಲ್ಲ ಭಕ್ತರಿಗೆ ಮತ್ತು ಬಸವ ಅನುಯಾಯಿಗಳಿಗೆ ಸಿದ್ಧಗಂಗಾ ಕ್ಷೇತ್ರದಲ್ಲಿ ಸ್ನಾನಾದಿ ಕ್ರಿಯೆಗಳಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಕರ್ನಾಟಕದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ತಿಳಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.